ಔಟ್ ಲುಕ್ -ಐಕೇರ್ ಸಂಸ್ಥೆ ಸಮೀಕ್ಷೆ ನಡೆಸಿ ದೇಶದ 75 ಅತ್ಯುತ್ತಮ ಸರ್ಕಾರಿ ವಿವಿಗಳ ಪಟ್ಟಿ ಬಿಡುಗಡೆಮಾಡಿದ್ದು, ಪಟ್ಟಿಯಲ್ಲಿ ರಾಜ್ಯದ 6 ವಿವಿಗಳು ಸ್ಥಾನಪಡೆದಿದ್ದು, ಅತ್ಯಂತ ಹಳೆಯವಿವಿಯಾದ ಕರ್ನಾಟಕ ವಿವಿಯನ್ನು ಹಿಂದಿಕ್ಕಿ ತುಮಕೂರು ವಿವಿ ಒಂದುಸ್ಥಾನ ಮೇಲೇರಿರುವುದು ಕಂಡುಬಂದಿದೆ. ಸಮೀಕ್ಷೆಯಲ್ಲಿ ವಿವಿಗಳ ಅಕಾಡೆಮಿಕ್ ಕಾರ್ಯ ಚಟುವಟಿಕೆ, ಸಂಶೋಧನೆ, ಕೈಗಾರಿಕಾ ಸಂಪರ್ಕ, ಕ್ಯಾಂಪಸ್ ಪ್ಲೇಸ್ಮೆಂಟ್, ಮೂಲ ಸೌಲಭ್ಯ, ಆಡಳಿತ ಹಾಗೂ ಔಟ್ ರೀಚ್ ಕಾರ್ಯಕ್ಷೇತ್ರಗಳಿಗೆ ನಿರ್ದಿಷ್ಟ ಅಂಕಗಳ ಮಾನದಂಡಮಡಿ ವಿವಿಗಳ ಸ್ಥಾನಕ್ರಮಾಂಕವನ್ನು ನಿಗದಿಪಡಿಸಲಾಗಿದ್ದು, 75 ವಿವಿಗಳಲ್ಲಿ ಟಾಪ್ 10ರಲ್ಲಿ ಅತ್ಯಂತ ಹಳೆಯದಾದ ಮೈಸೂರು ವಿವಿ 915.16 ಅಂಕಗಳಿಕೆಯೊಂದಿಗೆ 8ನೇ ಸ್ಥಾನ ಪಡೆದಿದೆ.
ಬೆಂಗಳೂರು ವಿವಿ 883.52 ಅಂಕಗಳಿಕೆಯೊಂದಿಗೆ 24ನೇಸ್ಥಾನಗಳಿಸಿದರೆ, ಶಿವಮೊಗ್ಗ ಕುವೆಂಪು ವಿವಿ 862.25 ಅಂಕಗಳಿಕೆಯೊಂದಿಗೆ 30ನೇಸ್ಥಾನ, ಮಂಗಳೂರು ವಿವಿ 2 22 824.32 44ನೇ ಸ್ಥಾನ, ತುಮಕೂರು ವಿವಿ 808.61 ಅಂಕಗಳೊಂದಿಗೆ 53ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದೆ. ಧಾರವಾಡದ ಕರ್ನಾಟಕ ವಿವಿ 755.06 ಅಂಕಗಳೊಂದಿಗೆ 68ನೇ ಸ್ಥಾನಗಳಿಸಿದೆ. ರಾಜ್ಯದಲ್ಲಿ 42 ಸರ್ಕಾರಿ ವಿಶ್ವವಿದ್ಯಾಲಯಗಳಿದ್ದು ಇವುಗಳಲ್ಲಿ 6 ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಹೆಮ್ಮೆಯ ಸಂಗತಿಯೆನಿಸಿದೆ.
ವಿಶೇಷವಾಗಿ ಜಿಲ್ಲೆಗೊಂದು ವಿವಿ ಪರಿಕಲ್ಪನೆಯಡಿ 2004ರಲ್ಲಿ ಆಗಿನ ಉನ್ನತ ಶಿಕ್ಷಣ ಸಚಿವ ಡಾ.ಜಿ.ಪರಮೇಶರ್ ಆಸಕ್ತಿಯಿಂದ ಮೊದಲನೆಯದಾಗಿ ಸ್ಥಾಪನೆಯಾದ ತುಮಕೂರು ವಿವಿ ಈ ಹಂತಕ್ಕೆ ತಲುಪಿರುವುದು ವಿವಿ ಆಡಳಿತ ಮಂಡಳಿ, ವಿದ್ಯಾರ್ಥಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ. ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವ ಪ್ರೊ.ಕೊಟ್ರೇಶ್ ಅವರು ಈದಿನ ಡಾಟ್ ಕಾಮ್ ನೊಂದಿಗೆ ಸಂತಸ ಹಂಚಿಕೊಂಡು, ಈ ಸ್ಥಾನಗಳಿಕೆ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ.
“ದೇಶದ 75 ಅತ್ಯುತ್ತಮ ಸಾರ್ವತ್ರಿಕ ವಿವಿಗಳ ಪಟ್ಟಿಯಲ್ಲಿ ತುಮಕೂರು ವಿವಿ ಸ್ಥಾನಪಡೆದಿರುವುದು ಹೆಮ್ಮೆ ತರಿಸಿದೆ. ಈ ಹಂತದ ಬೆಳವಣಿಗೆಯ ಹಿಂದೆ ರಾಜ್ಯ, ಕೇಂದ್ರ ಸರ್ಕಾರದ ಸಹಕಾರ ಜಿಲ್ಲೆಯ ಜನಪ್ರತಿನಿಧಿಗಳು, ವಿಶೇಷವಾಗಿ ನಮ್ಮ ಬೋಧಕ-ಬೋಧಕೇತರ ವರ್ಗ, ವಿದ್ಯಾರ್ಥಿಗಳ ಪರಿಶ್ರಮ ಅಡಗಿದೆ. ಹಿಂದಿನ ಕುಲಪತಿಗಳು, ಕುಲಸಚಿವರು, ಸಿಂಡಿಕೇಟ್, ವಿದ್ಯಾ ವಿಷಯಕ ಪರಿಷತ್ ಸದಸ್ಯರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸುವೆ ಎಂದು ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೋ. ಎಂ ವೆಂಕಟೇಶ್ವರಲು ಪ್ರತಿಕ್ರಿಯಿಸಿದರು