ಧರ್ಮಸ್ಥಳ ಪ್ರದೇಶದಲ್ಲಿ ಹಲವು ಕಡೆಗಳಲ್ಲಿ ಅಕ್ರಮವಾಗಿ ಮೃತದೇಹ ಹೂತು ಹಾಕಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಬಂಧಿಸಿದ್ದಾರೆ.
ಆಗಸ್ಟ್ 22ರಂದು ಮಂಗಳೂರು ಸಕ್ಷಮ ಪ್ರಾಧಿಕಾರವು ರಕ್ಷಣಾ ಕಾಯ್ದೆಯನ್ನು ರದ್ದು ಮಾಡಿದ್ದು ಆಗಸ್ಟ್ 23ರಂದು ಬೆಳಗ್ಗೆ ದೂರುದಾರನ ಬಂಧನ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ | ಅನನ್ಯಾ ಭಟ್ ಪ್ರಕರಣ ಎಸ್‌ಐಟಿಗೆ ಹಸ್ತಾಂತರ
ಇನ್ನು 11 ಗಂಟೆಗೆ ಬೆಳ್ತಂಗಡಿ ಕೋರ್ಟ್‌ಗೆ ದೂರುದಾರನನ್ನು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಪಡೆಯಲಿದ್ದಾರೆ ಎಂದು ಎಸ್‌ಐಟಿ ಮೂಲಗಳಿಂದ ಮಾಹಿತಿ ಲಭಿಸಿದೆ. ಸದ್ಯ ದೂರುದಾರರನ್ನು ತಾಲೂಕು ಆಸ್ಪತ್ರೆಗೆ ತಪಾಸಣೆಗಾಗಿ ಎಸ್‌ಐಟಿ ಅಧಿಕಾರಿಗಳು ಕರೆದೊಯ್ದಿದ್ದಾರೆ.
ದೂರುದಾರನನ್ನು ಆ.22ರಂದು ಬೆಳಗ್ಗೆ 10 ಗಂಟೆಯಿಂದ ಆ.23ರ ಬೆಳಗ್ಗಿನ ಜಾವ 5 ಗಂಟೆಯವರೆಗೆ ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಖುದ್ದು ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಧರ್ಮಸ್ಥಳ ಪ್ರದೇಶದಲ್ಲಿ ಹಲವು ಶವಗಳನ್ನು ತಾನೇ ಅಕ್ರಮವಾಗಿ ಹೂತಿರುವುದಾಗಿ ಹೇಳಿ ವ್ಯಕ್ತಿಯೋರ್ವ ದೂರು ನೀಡಿದ್ದಾನೆ. ಈ ಬಗ್ಗೆ ಪಾಪಪ್ರಜ್ಞೆ ಉಂಟಾಗಿ ದೂರು ನೀಡಿರುವುದಾಗಿ ಹೇಳಿದ್ದಾನೆ. ದೂರುದಾರ ತೋರಿಸಿದ ಸ್ಥಳಗಳಲ್ಲಿ ಈಗಾಗಲೇ ಶೋಧ ನಡೆದಿದ್ದು, ಎರಡು ಸ್ಥಳಗಳಲ್ಲಿ ಮಾನವ ದೇಹದ ಮೂಳೆಗಳು ಪತ್ತೆಯಾಗಿದೆ.
