ಕೇಂದ್ರ ಸರ್ಕಾರದ ವಿರುದ್ಧ ‘ಇಂಡಿಯಾ’ ಒಕ್ಕೂಟ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭೆ ಭಾಷಣದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಛತ್ತೀಸ್‌ಗಢ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಖರ್ಗೆ, “ಮಣಿಪುರದ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಳಿದ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಲಿಲ್ಲ. ಬದಲಿಗೆ ಅವರು ಮಾಜಿ ಪ್ರಧಾನಿ ನೆಹರು ಹಾಗೂ ಕಾಂಗ್ರೆಸ್ ಅನ್ನು ಟೀಕಿಸಿರುವುದು ನಾಚಿಕೆಗೇಡಿನ ಸಂಗತಿ” ಎಂದು ಹೇಳಿದರು.
“ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಲೆಗಳನ್ನು ನಿರ್ಮಿಸಲಾಗಿದೆಯೇ? ಮೋದಿ ಮತ್ತು ಅಮಿತ್ ಶಾ ಅವರು ಏನು ಓದಿದ್ದಾರೋ ಅದು ನಮ್ಮಿಂದ ಸ್ಥಾಪಿಸಲ್ಪಟ್ಟ ಸರ್ಕಾರಿ ಶಾಲೆಗಳಲ್ಲಿ. ಮತ್ತು ಅವರು ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಅವರು ನಮ್ಮನ್ನು ಕೇಳುತ್ತಾರೆ? ಆದರೆ ನಿಮ್ಮ ಸರ್ಕಾರ ಎಷ್ಟು ಶಾಲೆಗಳನ್ನು ನಿರ್ಮಿಸಿದೆ ಎಂಬುದನ್ನು ಮೊದಲು ಬಹಿರಂಗಪಡಿಸಿ” ಎಂದು ಖರ್ಗೆ ಪ್ರಶ್ನಿಸಿದರು.
“ಪ್ರಧಾನಿ ಮೋದಿಯವರು ಮಣಿಪುರ ಘಟನೆಯನ್ನು ಛತ್ತೀಸ್‌ಗಢದೊಂದಿಗೆ ಹೋಲಿಸಿದ್ದಾರೆ. ಇದು ರಾಜ್ಯದ ಜನರಿಗೆ ಮಾಡಿದ ಅವಮಾನವಾಗಿದೆ. ಹೀಗೆ ಹೇಳುವ ಪ್ರಧಾನಿ ಮಣಿಪುರಕ್ಕೆ ಹೋಗಲು ಹೆದರುತ್ತಾರೆ. ಅವರು ಈಗ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವುದರಿಂದ ಮಣಿಪುರಕ್ಕೆ ಹೋಗುತ್ತಿಲ್ಲ”ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಬಿ.ಇಡಿ ಕಡ್ಡಾಯವಲ್ಲ: ಸರ್ಕಾರದ ಆದೇಶ ವಜಾಗೊಳಿಸಿದ ಸುಪ್ರೀಂ
“ನಾವು ಪಾಕಿಸ್ತಾನದೊಂದಿಗೆ ಹೋರಾಡಿ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದ್ದೇವೆ. ಬಾಂಗ್ಲಾದೇಶ ನಮ್ಮ (ಕಾಂಗ್ರೆಸ್) ಶಕ್ತಿ, ನೀವು (ಬಿಜೆಪಿ) ಪಕ್ಷಿ ಅಥವಾ ಇಲಿಯನ್ನು ಬೇಟೆಯಾಡಲು ಸಹ ಸಾಧ್ಯವಿಲ್ಲ” ಎಂದು ಬಿಜೆಪಿ ಸರ್ಕಾರವನ್ನು ಖರ್ಗೆ ಕುಟುಕಿದರು.
ದೇಶದ ಆರೋಗ್ಯ ವ್ಯವಸ್ಥೆ ರೋಗಗ್ರಸ್ತ
ದೇಶದ ಆರೋಗ್ಯ ವ್ಯವಸ್ಥೆಯ ಬಗ್ಗೆ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ‘ಏಮ್ಸ್’ನಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯನ್ನೊಳಗೊಂಡಂತೆ ಇಡೀ ದೇಶದ ಆರೋಗ್ಯ ವ್ಯವಸ್ಥೆಯನ್ನು ‘ರೋಗಗ್ರಸ್ತ’ವನ್ನಾಗಿ ಮಾಡಿದೆ ಎಂದು ತರಾಟೆಗೆ ತೆಗೆದುಕೊಂಡರು.
ದೇಶದಲ್ಲಿನ 19 ಏಮ್ಸ್‌ಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇರುವ ಕುರಿತು ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿದ ಖರ್ಗೆ ಅವರು, ‘ಜನರು ಈಗ ಜಾಗೃತರಾಗಿದ್ದು ಮೋದಿ ನೇತೃತ್ವದ ಸರ್ಕಾರಕ್ಕೆ ‘ವಿದಾಯ’ದ ಕಾಲ ಸನ್ನಿಹಿತವಾಗಿದೆ’ ಎಂದೂ ಪ್ರತಿಪಾದಿಸಿದ್ದಾರೆ.
‘ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನಿಮ್ಮ ಸಂವೇದನಾ ಶೂನ್ಯತೆಯಿಂದ ಹಿಡಿದು ಆಯುಷ್ಮಾನ್ ಭಾರತದವರೆಗೆ ಅನೇಕ ಹಗರಣಗಳು ನಡೆದವು. ನಿಮ್ಮ ನೇತೃತ್ವದ ಸರ್ಕಾರವು ಇಡೀ ದೇಶದ ಆರೋಗ್ಯ ವ್ಯವಸ್ಥೆಯನ್ನೇ ‘ರೋಗಗ್ರಸ್ತ’ವನ್ನಾಗಿ ಮಾಡಿದೆ” ಎಂದು ಖರ್ಗೆ ತಿಳಿಸಿದರು.
‘ಲೂಟಿ ಮತ್ತು ಜುಮ್ಲಾಗಳು ದೇಶವನ್ನು ಅನಾರೋಗಕ್ಕೀಡು ಮಾಡಿವೆ. ಮೋದಿ ಅವರು ದೇಶದ ಹಲವೆಡೆ ‘ಏಮ್ಸ್’ಗಳನ್ನು ಸ್ಥಾಪಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಅವರ ಪ್ರತಿಮಾತಿನಲ್ಲೂ ಸುಳ್ಳೇ ಅಡಗಿದೆ! ಸತ್ಯ ಏನೆಂದರೆ, ಏಮ್ಸ್‌ಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ತೀವ್ರ ಕೊರತೆ ಇದೆ’ಎಂದು ಖರ್ಗೆ ಹೇಳಿದ್ದಾರೆ.