ಶಿವಮೊಗ್ಗ, ಜಾನುವಾರು ಕಳವು ಪ್ರಕರಣದ ಐವರು ಆರೋಪಿಗಳನ್ನು ಚಿಕ್ಕಮಗಳೂರಿನ ಕಳಸ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಜುಲೈ 10ರಂದು ಕಳಸ- ಹೊರನಾಡು ರಸ್ತೆಯ ದಾರಿಮನೆ ಬಳಿ ಜಾನುವಾರು ಸಾಗಿಸುವ ವಾಹನವನ್ನು ಪೊಲೀಸರು ಬೆನ್ನಟ್ಟಿದಾಗ ಕಳ್ಳರು ವಾಹನ ಬಿಟ್ಟು ಪರಾರಿಯಾಗಿದ್ದರು. ಆಗ ವಾಹನ ಮತ್ತು ನಾಲ್ಕು ಜಾನುವಾರುಗಳನ್ನು ಕಳಸ ಪೊಲೀಸರು ವಶಪಡಿಸಿ ಕೊಂಡಿದ್ದರು.
ಭದ್ರಾವತಿ ಮೂಲದ ಸಲ್ಮಾನ್, ಸಯ್ಯದ್ ತೌಫೀಕ್, ಅಬ್ದುಲ್ ಅಜೀಜ್, ಸಾಹಿಲ್ ಮತ್ತು ಅಬ್ದುಲ್ ಬಂಧಿತ ಆರೋಪಿಗಳು. ಈ ತಂಡವು ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಜಾನುವಾರು ಕಳ್ಳತನ ನಡೆಸಿದೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಕಳಸ ಠಾಣಾಧಿಕಾರಿ ಚಂದ್ರಶೇಖರ ತಿಳಿಸಿದ್ದಾರೆ.