ಬಲವಿದ್ದವರು ಬಗ್ಗಿಸುತ್ತಲೇ ಇರುತ್ತಾರೆ. ಅಂಚಿನಲ್ಲಿರುವ ಅಸ್ಪೃಶ್ಯ ಅಲೆಮಾರಿಗಳು ಅಸಹಾಯಕರಾಗುತ್ತಲೇ ಇರುತ್ತಾರೆ. ಅಂತಹ ಅಸಹಾಯಕರ ಪರವಾಗಿಯೇ ಇದುವರೆಗೆ ಮಾತನಾಡುತ್ತಾ ಬಂದಿರುವ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರು ಈ ಹೊತ್ತಿನಲ್ಲಿ ಆಗಿರುವ ಪ್ರಮಾದವನ್ನು ತಡ ಮಾಡದೇ ಸರಿ ಮಾಡಬೇಕಾಗಿದೆ.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಣಯವು, ಭವಿಷ್ಯದಲ್ಲಿ ಇದೇ ಸರ್ಕಾರ ಕೈಗೊಳ್ಳುತ್ತಿರುವ ಜಾತಿಗಣತಿಯ ಮೇಲೆ ಗಾಢ ಕರಿನೆರಳನ್ನು ಬೀರಲಿದೆ. ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವು ನ್ಯಾ. ನಾಗಮೋಹನ ದಾಸ್ ಆಯೋಗದ ಶಿಫಾರಸ್ಸುಗಳನ್ನು ರಾಜಕೀಯ ಕಾರಣಗಳಿಂದಾಗಿ ಕಸದಬುಟ್ಟಿಗೆ ಎಸೆದಿದೆ. ಅದೇ ಆಯೋಗದ ಶಿಫಾರಸ್ಸನ್ನು ಪರಿಷ್ಕರಣೆ ಮಾಡಿ, ಜಾರಿಗೆ ತಂದಿದ್ದೇವೆ ಎಂದು ಹೇಳಿದ್ದರೂ, ವಾಸ್ತವದಲ್ಲಿ ಇದು ಸಂಪೂರ್ಣ ತಿರಸ್ಕಾರವೇ ಆಗಿದೆ.
ಅದೇನೇ ಇರಲಿ, ಈ ಬೆಳವಣಿಗೆಯು ಒಂದು ಅಂಶವನ್ನು ಎತ್ತಿ ತೋರುತ್ತದೆ– ಎಷ್ಟೇ ವೈಜ್ಞಾನಿಕವಾದ ಜಾತಿಗಣತಿ ನಡೆದರೂ, ಅಂತಿಮವಾಗಿ ಸಂಖ್ಯಾಬಲ ಮತ್ತು ಇತರ ಶಕ್ತಿಗಳಿಂದ ಬಲಾಢ್ಯ ಜಾತಿಗಳೇ ಹೆಚ್ಚಿನ ಪಾಲನ್ನು ಪಡೆದುಕೊಳ್ಳುತ್ತವೆ. ಹೀಗಾಗಿ ಭವಿಷ್ಯದಲ್ಲಿ ಜಾತಿಗಣತಿ ನಡೆದಾಗಲೂ, ಹಿಂದುಳಿದ ಜಾತಿಗಳಲ್ಲಿನ ಬಲಾಢ್ಯ ಜಾತಿಗಳೇ ಸಿಂಹಪಾಲನ್ನು ಪಡೆಯುವುದಾದರೆ, ಅಂತಹ ಜಾತಿಗಣತಿಯಿಂದ ಏನು ಪ್ರಯೋಜನ ಎಂಬ ಪ್ರಶ್ನೆಯು ಸಹಜವಾಗಿ ಏಳುತ್ತದೆ.
ಇದರಿಂದ ಅತ್ಯಂತ ಹೆಚ್ಚು ಮುಜುಗರಕ್ಕೊಳಗಾಗುವವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರೇ ಆಗಿದ್ದಾರೆ. ಏಕೆಂದರೆ, ಕಳೆದ ಲೋಕಸಭಾ ಚುನಾವಣೆಗೂ ಮುಂಚಿನಿಂದಲೇ ಜಾತಿಗಣತಿಯನ್ನು ಒಂದು ಪ್ರಬಲ ಸಂಗತಿಯಾಗಿ ರಾಹುಲ್ ಪ್ರಸ್ತಾಪಿಸುತ್ತಾ ಬಂದಿದ್ದಾರೆ. ‘ಜಾತಿ ಜನ್ ಗಣನಾ, ಜಿಸ್ಕಿ ಜಿತ್ನಿ ಸಂಖ್ಯಾ ಭಾರೀ, ಉಸ್ಕಿ ಉತ್ನಿ ಹಿಸ್ಸೇದಾರಿ’ ಥರದ ಮಾತುಗಳು ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿದ್ದವು. ಅವೆಲ್ಲವನ್ನೂ ವಿವರಿಸುವಾಗ, ರಾಹುಲ್ ಜಾತಿಗಣತಿಯೆಂಬುದು ಈ ದೇಶದ ಸಾಮಾಜಿಕ ವ್ಯವಸ್ಥೆಯೊಳಗೆ ಹರಿಬಿಡುವ ಎಕ್ಸ್ರೇ ಆಗಿದ್ದು, ಆ ಎಕ್ಸ್ರೇಯು ರೋಗದ ತಪಾಸಣೆ ಮಾಡಿ, ಸರಿಯಾದ ಚಿಕಿತ್ಸೆಯನ್ನು ಕೊಡುತ್ತದೆ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ, ರೋಗದ ತಪಾಸಣೆ ಮಾಡಲು ವೈದ್ಯರನ್ನು ನೇಮಿಸಿ, ಅವರ ಕೈಗೆ ಜಾತಿಗಣತಿಯ ಮೂಲಕ ಪತ್ತೆ ಹಚ್ಚಲು ಹೇಳಿ, ಅವರು ಪತ್ತೆ ಹಚ್ಚಿದ ರೋಗ ಮತ್ತು ಸೂಚಿಸಿದ ಚಿಕಿತ್ಸೆಯನ್ನು ಗಾಳಿಗೆ ತೂರಿಬಿಟ್ಟರೆ– ಇದರಿಂದ ಏನು ಪ್ರಯೋಜನ ಎಂಬ ಪ್ರಶ್ನೆ ಬರುವುದಿಲ್ಲವೇ?
ಇದನ್ನು ಓದಿದ್ದೀರಾ?: ತಬ್ಬಲಿ ಅಲೆಮಾರಿಗಳನ್ನು ‘ಶವಪೆಟ್ಟಿಗೆ’ಗೆ ಹಾಕಿದ ಕಾಂಗ್ರೆಸ್ ಸರ್ಕಾರ
ಒಳಮೀಸಲಾತಿಯ ಮೂಲ ತತ್ವವೇ, ಮೀಸಲಾತಿ ಪಡೆದ ಸಮುದಾಯಗಳೊಳಗೂ ಎದ್ದು ಕಾಣುವ ಪ್ರಮಾಣದ ಅಸಮಾನತೆ ಇರುವುದರಿಂದ, ಅದರಲ್ಲಿನ ಬಲಾಢ್ಯರನ್ನು ಮತ್ತು ಹಿಂದುಳಿದವರನ್ನು ಪ್ರತ್ಯೇಕಿಸಿ ಮೀಸಲಾತಿ ಕೊಡಬೇಕೆಂಬುದಾಗಿದೆ. ಅಷ್ಟೇ ಅಲ್ಲ, ಜನಸಂಖ್ಯೆಯ ಜೊತೆಗೆ ಹಿಂದುಳಿದಿರುವಿಕೆ(ವಾಸ್ತವದಲ್ಲಿ ಇದು ಹಿಂದುಳಿಸಲ್ಪಟ್ಟಿರುವಿಕೆ)ಯನ್ನೂ ಆಧರಿಸಿ ಆದ್ಯತೆಯ ಮೇರೆಗೆ ಒಳಮೀಸಲಾತಿಯನ್ನು ನೀಡಬೇಕು. ಹೀಗೆ ಮಾಡುವಾಗ ಯಾರು ಹೆಚ್ಚು ಪ್ರಾತಿನಿಧ್ಯವನ್ನು ಈಗಾಗಲೇ ಪಡೆದುಕೊಂಡಿರುತ್ತಾರೋ, ಅವರನ್ನೂ ಸಾಪೇಕ್ಷವಾಗಿ ಕಡಿಮೆ ಪಡೆದುಕೊಂಡಿರುವವರಿಂದ ಬೇರ್ಪಡಿಸಬೇಕು. ಸಾಪೇಕ್ಷವಾಗಿ ಇನ್ನೂ ಇನ್ನೂ ಕಡಿಮೆ ಪ್ರಾತಿನಿಧ್ಯ ಪಡೆದುಕೊಂಡಿರುವವರನ್ನು ಬೇರೊಂದು ಗುಂಪಿಗೆ ಸೇರಿಸಬೇಕು. ಇದು ಸ್ಪಷ್ಟ. ಅದನ್ನೇ ಅತ್ಯಂತ ವೈಜ್ಞಾನಿಕವಾಗಿ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ಮಾಡಿದ್ದು. ಅದಕ್ಕೆ ಅಗತ್ಯವಿದ್ದ ಸಮೀಕ್ಷೆ ಮಾಡಿ, ದತ್ತಾಂಶಗಳನ್ನು ಕ್ರೋಡೀಕರಿಸಿ, ಸೂಕ್ತವಾದ ಪುರಾವೆಗಳೊಂದಿಗೆ ವರ್ಗೀಕರಿಸಿ ಕೊಟ್ಟರು. ತಾಂತ್ರಿಕವಾಗಿಯೂ, ಕಾನೂನಾತ್ಮಕವಾಗಿಯೂ, ಸಂವಿಧಾನದ ಆಶಯಗಳಿಗೆ ತಕ್ಕುನಾಗಿಯೂ ಇದ್ದ ಈ ವರದಿಯ ಶಿಫಾರಸ್ಸುಗಳು ಅಭಿನಂದನಾರ್ಹವಾಗಿದ್ದವು.
ಹೀಗಿದ್ದರೂ, ಅಸ್ಪೃಶ್ಯತೆಯ ನೋವುಂಡಿದ್ದ ಬಲಗೈ ಸಮುದಾಯದ ಹಲವರು ಇದುವರೆಗೆ ಪಡೆದುಕೊಂಡಿದ್ದೂ ಹೋಗಿಬಿಡುತ್ತದೇನೋ ಎಂದು ಆತಂಕಕ್ಕೆ ಒಳಗಾದರು. ಕೆಲವು ಕಾರಣಗಳಿಂದ ತಮ್ಮ ಪಾಲು ಹೆಚ್ಚಾಗಬೇಕು ಎಂದು ಪ್ರತಿಭಟನೆಗೂ ಇಳಿದರು. ಜಾತಿವಾರು ಅಲ್ಲದೇ, ಹಿಂದುಳಿದಿರುವಿಕೆಗೆ ತಕ್ಕುನಾಗಿ ಹಂಚಿಕೆಯಾಗಿದ್ದ ಒಳಮೀಸಲಾತಿಯನ್ನು ಜಾತಿವಾರು ಮಾಡಿ, ಬಲಗೈ ಸಂಬಂಧಿತ ಜಾತಿಗಳನ್ನು ಜೊತೆ ಸೇರಿಸಿ ಮೀಸಲಾತಿ ಹೆಚ್ಚಿಸಬೇಕು ಎಂದು ಹಲವರು ಪಟ್ಟು ಹಿಡಿದರು. ಅಲ್ಲಿಂದಲೇ ನ್ಯಾಯದ ತಕ್ಕಡಿ ಅಲುಗಾಡಲು ಶುರುವಾಯಿತಾದರೂ, ಸರ್ಕಾರವು ಸಮೀಕ್ಷೆಯ ಶಿಫಾರಸ್ಸುಗಳಿಗೆ ಅಂಟಿಕೊಳ್ಳಬೇಕಿತ್ತು. ಆದರೂ, ಬಲಗೈ ಸಮುದಾಯಕ್ಕೆ ಒಂದು ಗುಲಗಂಜಿ ತೂಕ ಹೆಚ್ಚು ಕೊಟ್ಟಿದ್ದರೂ ಅದು ಸಮರ್ಥನೀಯವೇ. ಏಕೆಂದರೆ, ಆ ಸಮುದಾಯವೂ ಅಸ್ಪೃಶ್ಯತೆಯನ್ನು ಅನುಭವಿಸುತ್ತಿರುವ ಜಾತಿಯೇ ಆಗಿತ್ತು.
ಆದರೆ, ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯಗಳು (ಅದರಲ್ಲೂ ಅಸ್ಪೃಶ್ಯತೆಯ ನೋವನ್ನೂ ಅನುಭವಿಸಿದ ಅಲೆಮಾರಿ ಸಮುದಾಯಗಳು) ಸಂಖ್ಯಾಬಲವನ್ನೂ ಹೊಂದಿಲ್ಲದೇ ಇರುವಾಗ, ಅವರ ಪರವಾಗಿ ಸರ್ಕಾರದ ತಕ್ಕಡಿ ವಾಲಬೇಕಿತ್ತು. ವಾಸ್ತವದಲ್ಲಿ ಅವರ ವಿರುದ್ಧ ವಾಲಿಬಿಟ್ಟಿತು. ಒಂದು ಪ್ರಮಾಣದ ಸಂಖ್ಯಾಬಲವನ್ನೂ, ಇದುವರೆಗೆ ಮೀಸಲಾತಿಯಲ್ಲಿ ಹೆಚ್ಚಿನ ಪಾಲು ಪಡೆದು ಸಾಪೇಕ್ಷವಾಗಿ ಬಲಾಢ್ಯವಾಗಿರುವ ಸ್ಪೃಶ್ಯ ಜಾತಿಗಳ ಜೊತೆಗೆ ಈ ಅತ್ಯಂತ ಶೋಷಿತ ಅಲೆಮಾರಿ ಸಮುದಾಯಗಳನ್ನು ಸರ್ಕಾರ ಸೇರಿಸಿಬಿಟ್ಟು, ಅವರಿಗೆ ನ್ಯಾ.ನಾಗಮೋಹನ ದಾಸ್ ಅವರು ನ್ಯಾಯಯುತವಾಗಿ ಶಿಫಾರಸ್ಸು ಮಾಡಿದ್ದ 1% ಮೀಸಲಾತಿಯನ್ನೂ ಸ್ಪೃಶ್ಯ ಜಾತಿಗಳ ಗುಂಪಿನೊಂದಿಗೆ ವಿಲೀನ ಮಾಡಿಬಿಟ್ಟಿತು. ಇದು ಮೀಸಲಾತಿ ಮತ್ತು ಒಳಮೀಸಲಾತಿ ಮೌಲ್ಯಕ್ಕೇ ನೀಡಿದ ಪೆಟ್ಟಾಗಿತ್ತು.
ಕರ್ನಾಟಕದ ಸಂವೇದನೆಯುಳ್ಳ ಪ್ರಗತಿಪರ ಮನಸ್ಸುಗಳು, ಮಾದಿಗ ಸಮುದಾಯದ ನಾಯಕರು ಕೂಡಲೇ ಈ ಅಲೆಮಾರಿಗಳ ಪರ ನಿಂತರು. ಇದೀಗ ಬಹುತೇಕ ಬಲಗೈ ಸಮುದಾಯದವರೂ ಅಲೆಮಾರಿಗಳಿಗೆ ಅನ್ಯಾಯ ಆಗಬಾರದೆಂದು ದನಿ ಎತ್ತಿದ್ದಾರೆ. ಒಂದು ರೀತಿಯಲ್ಲಿ ಇದು ಎಲ್ಲರ ಪಾಲಿಗೆ ನೈತಿಕ ಪ್ರಶ್ನೆಯಾಗಿಬಿಟ್ಟಿದೆ. ಸಾಮಾಜಿಕ ನ್ಯಾಯದ ಜಪ ಮಾಡುವ ಸರ್ಕಾರವೊಂದನ್ನು ಬಿಟ್ಟು. ಇನ್ನು ಇಂತಹ ವಿಚಾರಗಳಲ್ಲಿ ಆಷಾಢಭೂತಿತನವಲ್ಲದೇ ಬೇರೇನೂ ಹೊಂದಿರದ ಬಿಜೆಪಿಯನ್ನಂತೂ ದೂರವೇ ಇಡಬೇಕು. ಆದರೆ, ಪ್ರಶ್ನೆ ಏಳುವುದು ಜಾತಿಗಣತಿಯ ಎಕ್ಸ್ರೇ ಕುರಿತು ಮಾತನಾಡುವ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿಯವರ ಕುರಿತು. ಅವರು ಈ ಕುರಿತು ಏನು ಹೇಳುತ್ತಾರೆ? ಒಂದು ವೇಳೆ ಅವರ ಗಮನಕ್ಕೆ ಇದು ಬಂದಿಲ್ಲ ಎನ್ನುವುದಾದರೆ, ಕಾಂಗ್ರೆಸ್ ಪಕ್ಷದೊಳಗೆ ಇರುವ ವ್ಯವಸ್ಥೆಯಾದರೂ ಎಂಥದ್ದು ಎಂಬ ಪ್ರಶ್ನೆಯೂ ಬರುತ್ತದೆ. ತಾನೇ ಬಲವಾಗಿ ಪ್ರತಿಪಾದಿಸುತ್ತಿರುವ ಸಾಮಾಜಿಕ ನ್ಯಾಯದ ಎಕ್ಸ್ರೇ ವಿಚಾರದಲ್ಲಿ ತನ್ನದೇ ಸರ್ಕಾರ ತೆಗೆದುಕೊಂಡ ಸಂಪೂರ್ಣ ವ್ಯತಿರಿಕ್ತ ತೀರ್ಮಾನವು, ಅದರ ಉನ್ನತ ನಾಯಕರಿಗೆ ತಲುಪದೇ ಹೋಗುವುದಾದಲ್ಲಿ, ಅವರ ಸಂಘಟನಾ ಬದ್ಧತೆಯು ಪ್ರಶ್ನೆಗೊಳಗಾಗುತ್ತದೆ.
ಅಷ್ಟೇ ಅಲ್ಲ, ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕದಲ್ಲಿ ಕೈಗೆತ್ತಿಕೊಂಡು ಮುಗಿಸಲಿರುವ ಜಾತಿಗಣತಿಯ ಫಲಿತಾಂಶವೂ ಹೀಗೇ ಆಗುತ್ತದಲ್ಲವೇ ಎಂಬ ಸಂದೇಹ ಮೂಡುತ್ತದೆ. ಏಕೆಂದರೆ, ಈ ಹಿಂದೆಯೂ ಕರ್ನಾಟಕದಲ್ಲಿ ವಿವಿಧ ಆಯೋಗಗಳು ಹಿಂದುಳಿದ ವರ್ಗಗಳನ್ನು ಗುರುತಿಸಿ ಶಿಫಾರಸ್ಸುಗಳನ್ನು ಮಾಡಿದ ಮೇಲೆ, ಬಲಾಢ್ಯ ಜಾತಿಗಳು ಭಾರೀ ಬಲಪ್ರದರ್ಶನ ನಡೆಸಿ, ತಾವೂ ಹಿಂದುಳಿದ ವರ್ಗಗಳಲ್ಲಿ ಮೀಸಲಾತಿಯನ್ನು ಪಡೆದುಕೊಂಡಿವೆ. ಅದು ಆಯೋಗಗಳ ಶಿಫಾರಸ್ಸಿಗೆ ಅನುಗುಣವಾಗಿ ಇರಲಿಲ್ಲ. ಅದರ ಜೊತೆಗೆ ನಿಜವಾಗಲೂ ಹಿಂದುಳಿದ ಜಾತಿಯಾದ ಕುರುಬ ಸಮುದಾಯವು, ಉಳಿದ ಸಮುದಾಯಗಳಿಗಿಂತ ಹೆಚ್ಚು ಪಾಲನ್ನು ಪಡೆದುಕೊಂಡಿದೆ ಎನ್ನುವ ಆರೋಪವೂ ಇದೆ.
ಈ ರೀತಿಯಾಗಿ ಸಾಪೇಕ್ಷವಾಗಿ ಮುಂದುವರೆದ ಜಾತಿ ಅಥವಾ ಜಾತಿಗಳು ಮೀಸಲಾತಿ ಗುಂಪಾಗಿ ಸಿಕ್ಕಾಗ, ಸಾಪೇಕ್ಷವಾಗಿ ಹೆಚ್ಚು ಪಡೆದುಕೊಳ್ಳುವುದು ಸಹಜವೇ ಆಗಿದೆ. ಇದೊಂದು ಷಡ್ಯಂತ್ರವಲ್ಲ. ಹಾಗಾಗಿಯೇ ಪರಿಶಿಷ್ಟ ಜಾತಿಗಳೊಳಗೆ ಸ್ಪೃಶ್ಯ ಜಾತಿಗಳನ್ನು ಅಥವಾ ಬಲಗೈ ಸಮುದಾಯವನ್ನು, ಹಿಂದುಳಿದ ಜಾತಿಗಳೊಳಗೆ ಕುರುಬ ಸಮುದಾಯವನ್ನು ಉಳಿದವರು ದ್ವೇಷದ ಭಾವನೆಯಿಂದ ನೋಡುವುದು ಸಲ್ಲ. ಆದರೆ, ಕಾಲಕಾಲಕ್ಕೆ ಶಾಶ್ವತ ಆಯೋಗಗಳು ಯಾರು ಎಷ್ಟು ಹೆಚ್ಚಾಗಿ ಪಡೆದುಕೊಂಡರು ಎಂಬುದನ್ನು ಮತ್ತೆ ಮತ್ತೆ ಸಮೀಕ್ಷೆಗೆ ಒಳಪಡಿಸುತ್ತಾ, ಕಾಲಕಾಲಕ್ಕೆ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಬದಲಾದ ಮೀಸಲಾತಿ ಪ್ರಮಾಣವನ್ನು ಅಥವಾ ವರ್ಗೀಕರಣವನ್ನು ಶಿಫಾರಸ್ಸು ಮಾಡಬೇಕು. ಅದೊಂದೇ ಈ ವಿಚಾರಕ್ಕೆ ಇರುವ ಶಾಶ್ವತ ಪರಿಹಾರ. ಹಾಗೆ ಮಾಡದೇ ಇದ್ದರೆ, ನಿಜಕ್ಕೂ ಜೊತೆ ಜೊತೆಯಾಗಿಯೇ ಇರಬೇಕಾದ ಸಮುದಾಯಗಳು ತಮ್ಮೊಳಗೇ ಕತ್ತಿ ಮಸೆಯುವಂತೆ ಆಗುತ್ತದೆ. ಹೊಸ ಸಾಮಾಜಿಕ, ರಾಜಕೀಯ ಸಮೀಕರಣ ಸಾಧಿಸಲು ಹೊರಟಿರುವ ಕಾಂಗ್ರೆಸ್ಸಿನ ನಾಯಕರು ಈ ವಿಚಾರವನ್ನು ಅರ್ಥ ಮಾಡಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ.
ಇದನ್ನು ಓದಿದ್ದೀರಾ?: ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?
ಈ ರೀತಿಯಾಗಿ ಆಯೋಗಗಳು ಶಿಫಾರಸ್ಸು ಮಾಡಿದಾಗ, ಅದರಲ್ಲಿ ಖಾತರಿ ಮಾಡಿಕೊಳ್ಳಬೇಕಾದ್ದು ಮೂರು ಅಂಶಗಳು. ಒಂದು, ಸಮರ್ಪಕವಾಗಿ ನಡೆಯಬೇಕಾದ ಸಮೀಕ್ಷೆ. ಎರಡು, ಸಮೀಕ್ಷೆಯಲ್ಲಿ ಸಿಕ್ಕ ದತ್ತಾಂಶಗಳನ್ನು ಆಧರಿಸಿಯೇ ಶಿಫಾರಸ್ಸುಗಳಿರಬೇಕು. ಮೂರು, ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿ ಮಾಡಬೇಕೇ ಹೊರತು, ಅದರಲ್ಲಿ ಬಲಾಢ್ಯರು ಮುಂದೆ ತರುವ ಒತ್ತಾಯಕ್ಕೆ ಮಣಿದು ಹಸ್ತಕ್ಷೇಪ ಮಾಡಬಾರದು. ಒಂದು ಸಾರಿ ಈ ರೀತಿಯ ತಿರುಚುವಿಕೆ ಆರಂಭವಾದರೆ, ಅದಕ್ಕೆ ಕೊನೆಯಿಲ್ಲ. ಬಲವಿದ್ದವರು ಬಗ್ಗಿಸುತ್ತಲೇ ಇರುತ್ತಾರೆ. ಅಂಚಿನಲ್ಲಿರುವ ಅಸ್ಪೃಶ್ಯ ಅಲೆಮಾರಿಗಳು ಅಸಹಾಯಕರಾಗುತ್ತಲೇ ಇರುತ್ತಾರೆ.
ಅಂತಹ ಅಸಹಾಯಕರ ಪರವಾಗಿಯೇ ಇದುವರೆಗೆ ಮಾತನಾಡುತ್ತಾ ಬಂದಿರುವ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರು ಈ ಹೊತ್ತಿನಲ್ಲಿ ಆಗಿರುವ ಪ್ರಮಾದವನ್ನು ತಡ ಮಾಡದೇ ಸರಿ ಮಾಡಬೇಕಾದ್ದು ಇಂದಿನ ತುರ್ತು. ಇಲ್ಲವಾದರೆ ಇತಿಹಾಸದಲ್ಲಿ ಇದೊಂದು ಕಳಂಕವಾಗಿಯೇ ಉಳಿದುಕೊಳ್ಳುತ್ತದೆ ಮತ್ತು ಮುಂಬರುವ ಜಾತಿಗಣತಿಯಿಂದ ಆಗುವ ಪ್ರಯೋಜನವಾದರೂ ಏನು ಎಂಬ ಅನುಮಾನ ಈಗಲೇ ಶುರುವಾಗುತ್ತದೆ. ಇವರು ತರಲು ಹೊರಟಿರುವ ಹೊಸ ಸಾಮಾಜಿಕ, ರಾಜಕೀಯ ಸಮೀಕರಣಕ್ಕೂ ಅದು ಹಾನಿಯುಂಟು ಮಾಡುತ್ತದೆ.
