ಮೆರವಣಿಗೆ ಹೆಸರಿನಲ್ಲಿ ನಡೆಸುವ ಡಿ ಜೆ, ಅಶ್ಲೀಲ ನೃತ್ಯ, ದ್ವೇಷದ ಭಾಷಣಗಳು, ಕುಡಿದು ಕುಣಿಯುವುದು, ಜನರ ನಂಬಿಕೆಯನ್ನು ಅಣಕಿಸುವ ಕ್ರಿಯೆ ಆಗುತ್ತದೆ ಮತ್ತು ಧರ್ಮದ ಅವಹೇಳನ ಎನಿಸುತ್ತದೆ.
ಇತ್ತೀಚಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಡಿ ಜೆ ಹಾವಳಿ ನಿಲ್ಲಿಸಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ, ಅದು ಒಳ್ಳೆಯ ಬೆಳವಣಿಗೆ ಮತ್ತು ಸ್ವಾಗತಾರ್ಹ. ಆದರೆ ಕೆಲವರು ಅದನ್ನು ಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕತ್ರಯರು ಅಧಿವೇಶನದಲ್ಲೂ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.
ಸಾರ್ವಜನಿಕ ಆಚರಣೆ ಎಂದರೆ ಅಲ್ಲಿಗೆ ಸೇರುವ ಎಲ್ಲರೂ ದೇವರ ಎದುರು ಒಂದೇ ಮತ್ತು ಅಲ್ಲಿ ಸೇರುವ ನಮಗೆ ದೇವರು ಒಂದೇ ಎಂಬ ಸಂದೇಶ ನೀಡುವುದಕ್ಕೆ. ಜೊತೆಗೆ ಆಯಾ ಪ್ರದೇಶದ ಸಾಂಸ್ಕೃತಿಕ ಸಂಗತಿಗಳ ಅನಾವರಣ, ಅದರ ಮೆರವಣಿಗೆ ಆಧ್ಯಾತ್ಮ ಸಂವಾದಕ್ಕೆ ತೆರೆದುಕೊಳ್ಳುವ ವೇದಿಕೆ ಆಗಬೇಕು.
ಮೆರವಣಿಗೆ ಹೆಸರಿನಲ್ಲಿ ನಡೆಸುವ ಡಿ ಜೆ, ಅಶ್ಲೀಲ ನೃತ್ಯ, ದ್ವೇಷದ ಭಾಷಣಗಳು, ಕುಡಿದು ಕುಣಿಯುವುದು, ಜನರ ನಂಬಿಕೆಯನ್ನು ಅಣಕಿಸುವ ಕ್ರಿಯೆ ಆಗುತ್ತದೆ ಮತ್ತು ಧರ್ಮದ ಅವಹೇಳನ ಆಗುತ್ತದೆ.
ಅಲ್ಲಿ ಸಂತ ಪರಂಪರೆಯ ಸಂಕೀರ್ತನೆಗಳ ಕುರಿತು, ಅವರವರ ಮತ, ಧರ್ಮದ ಅದರ ವೇದಾಂತದ, ಜೀವನ ಧರ್ಮದ, ಸಹನೆ ಸಹಬಾಳ್ವೆ, ಆದರ್ಶಗಳ ಕುರಿತು ಉಪನ್ಯಾಸ, ಮಾತುಗಳು, ಸಂವಾದಗಳು ನಡೆಯಬೇಕು. ಆದರೆ ಈ ಎಲ್ಲಾ ಧಾರ್ಮಿಕ ವೇದಿಕೆಗಳು ದ್ವೇಷ ಭಾಷಣ, ಅನ್ಯ ಧರ್ಮದ ಅವಹೇಳನಕ್ಕೆ ಬಳಕೆ ಆಗುತ್ತಿರುವುದು ದುರಂತ.
ದೇವಸ್ಥಾನ ಅಂದರೆ ಜನರು ನಂಬುವ ಅತೀತ ಶಕ್ತಿಯ ಪ್ರತಿಬಿಂಬವಾಗಿರುವ ಮೂರ್ತಿಯ ಎದುರು ಶರಣಾಗುವುದು. ನಾನು ಶ್ರೇಷ್ಠ, ಅವನು ಕನಿಷ್ಠ ಎಂಬುದನ್ನು ತೊರೆದು, ಪರಮ ಆತ್ಮದ ಜೊತೆಗೆ ಅನು ಸಂಧಾನ ಮಾಡುವುದು. ಅದನ್ನು ಬಿಟ್ಟು ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚ್‌ಗಳ ಅಂಗಳವನ್ನು ದ್ವೇಷದ ಬೀಜ ಬಿತ್ತುವುದು ಧರ್ಮಕ್ಕೆ ಮಾಡುವ ದೊಡ್ಡ ದ್ರೋಹ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಮಹೇಶ್ ಶೆಟ್ಟಿ ತಿಮರೋಡಿ ಬಂಧನ; ಜನರ ಪ್ರಶ್ನೆಗಳಿಗೆ ಸರ್ಕಾರದ ಉತ್ತರ ಏನು?
ಸಾರ್ವಜನಿಕ ಆಚರಣೆ ಅಂದರೆ, ಸಾರ್ವಜನಿಕ ಪಾಲ್ಗೊಳ್ಳುವಿಕೆಯೇ ಆಗಿದೆ. ಅದು ಸಂತೋಷಕ್ಕೆ, ಸಂಭ್ರಮಕ್ಕೆ. ಅದು ವಿಷ ಕಾರುವುದಕ್ಕೆ ಅಲ್ಲ, ರಾಜಕೀಯ ಮಾಡಲು ಅಲ್ಲ. ಧಾರ್ಮಿಕ ಭಾವನೆಯನ್ನೇ ಅವಲಂಬಿಸಿರುವ, ಅಭಿವೃದ್ಧಿ ರಾಜಕಾರಣ ಮಾಡಲು ಸಾಧ್ಯವಿಲ್ಲದವರು ಇಂತಹ ಸಂಗತಿಗಳನ್ನೇ ಬಂಡವಾಳ ಮಾಡಿಕೊಂಡು ಜನರನ್ನು ಪ್ರಚೋದನೆ ಮಾಡುವುದನ್ನು ವಿರೋಧಿಸಬೇಕು.
ಜನರು ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಂದನ್ನೂ ರಾಜಕೀಯಕ್ಕೆ, ಅಸಭ್ಯ ನಡವಳಿಕೆಗೆ ಬಳಸಿಕೊಳ್ಳುತ್ತ, ಅದರ ವಿರುದ್ಧ ಮಾತನಾಡುವವರನ್ನು ಧರ್ಮ ವಿರೋಧಿಗಳು ಎಂದು ವರಸೆ ತೆಗೆಯುವ ಜನರನ್ನು, ಪುಂಡು ಪುಢಾರಿಗಳನ್ನು ಧಿಕ್ಕರಿಸಬೇಕು.


ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ