- ರೋಣ ತಾಲೂಕಿನ ಹತ್ತು ಗ್ರಾಮ ಪಂಚಾಯತ್ ಗಳಲ್ಲಿ ಶಿಶುಪಾಲನ ಕೇಂದ್ರ ಕಾರ್ಯಾರಂಭ
- ರಾಜ್ಯ ಸರ್ಕಾರ ಜಾರಿಗೊಳಿಸಿದ ʼಕೂಸಿನ ಮನೆʼ ಮಹತ್ವದ ಯೋಜನೆ ಅನುಷ್ಠಾನ
ರೋಣ ತಾಲೂಕಿನಲ್ಲಿ ಮನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರ ಮಕ್ಕಳಿಗೆ 10 ಶಿಶುಪಾಲನ ಕೇಂದ್ರಗಳು ಕಾರ್ಯಾರಂಭಗೊಳ್ಳಲಿವೆ ಎಂದು ರೋಣ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರವಿ ಎ.ಎನ್ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉದ್ಘಾಟನಾ ಹೊಸ್ತಿಲಲ್ಲಿರುವ ಶಿಶುಪಾಲನ ಕೇಂದ್ರಗಳನ್ನು ಪರಿಶೀಲಿಸಿ ಮಾತನಾಡಿ, “ರಾಜ್ಯ ಸರ್ಕಾರವು ಕೂಸಿನ ಮನೆ (ಶಿಶುಪಾಲನಾ ಕೇಂದ್ರ) ಎಂಬ ಮಹತ್ವದ ಯೋಜನೆ ಜಾರಿಗೆ ತಂದಿದ್ದು, ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವುದು ಎಲ್ಲಾ ಗ್ರಾಮ ಪಂಚಾಯತಿಗಳ ಪಿಡಿಓ ಕರ್ತವ್ಯ” ಎಂದರು.
“ರಾಜ್ಯ ಸರ್ಕಾರವು ಕೂಲಿ ಕಾರ್ಮಿಕರ ಶಿಶುಗಳ 06 ತಿಂಗಳಿಂದ 03 ವರ್ಷದ ಶಿಶುಗಳನ್ನು ವ್ಯವಸ್ಥಿತ ಪಾಲನೆ ಪೋಷಣೆ ಮಾಡುವ ಜವಾಬ್ದಾರಿ ತನ್ನ ಮಡಿಲಿಗೆ ಹಾಕಿಕೊಂಡಿದೆ. ತಾಲೂಕಿನ 10 ಗ್ರಾಮ ಗ್ರಾಮ ಪಂಚಾಯತಿಗಳಾದ ಹೊಸಳ್ಳಿ, ಕುರಹಟ್ಟಿ, ಅಬ್ಬಿಗೇರಿ, ಯಾವಗಲ್, ಕೌಜಗೇರಿ, ಬೆಳವಣಕಿ, ಹೊಳೆಮಣ್ಣೂರು, ಹೊಳೆಆಲೂರು, ಸವಡಿ, ಜಕ್ಕಲಿ ಗ್ರಾಮ ಪಂಚಾಯತ್ ಗಳಲ್ಲಿ ಆಗಸ್ಟ್ 15 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಉದ್ಘಾಟನೆ ಆಗಲಿವೆ” ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಐಇಸಿ ಸಂಯೋಜಕ ವೀರಭದ್ರಪ್ಪ ಸಜ್ಜನ, ತಾ.ಪಂ. ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ ಹಾಗೂ ಪಿಡಿಓ, ಬಿಎಫ್ ಟಿ, ಜಿಕೆಎಮ್ ಗಳು ಇದ್ದರು.
ಶಿಶುಪಾಲನ ಕೇಂದ್ರದ ಮುಖ್ಯ ಉದ್ದೇಶ:
ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಗಳ ಮುಖ್ಯ ಉದ್ದೇಶ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಜಮೀನುಗಳಲ್ಲಿ ಕೃಷಿ ಕೆಲಸಕ್ಕೆ ತೆರಳುತ್ತಾರೆ. ಕೂಲಿ ಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರು ಬಹುತೇಕರು ಬಡ ಕುಟುಂಬದವರಾಗಿದ್ದು, ಪ್ರತಿ-ನಿತ್ಯ ಕೂಲಿ ಕೆಲಸಕ್ಕೆ ತೆರಳುವ ಅನಿವಾರ್ಯತೆ ಇರುತ್ತದೆ. ಇಂತಹ ಕುಟುಂಬದ ಮಹಿಳೆಯರು ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅಸಾಧ್ಯ.
ಮಹಿಳೆಯರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಅವರು ಕೆಲಸದಿಂದ ಮನೆಗೆ ಮರಳುವವರೆಗೆ ಮಗುವಿಗೆ ತಾಯಿ ಹಾಲು ದೊರೆಯುವುದಿಲ್ಲ. ಜೊತೆಗೆ ಪೌಷ್ಠಿಕ ಆಹಾರ ದೊರೆಯುವುದಿಲ್ಲ, ಇದರಿಂದ ಮಕ್ಕಳು ಅಪೌಷ್ಠಿಕತೆಗೆ ಒಳಗಾಗಬಹುದಾಗಿದೆ. ಇದರಿಂದ ಗ್ರಾಮೀಣರ ಮಾನಸಿಕ ಆರೋಗ್ಯವು ಹಾಳಾಗುತ್ತದೆ. ಈ ಸಮಸ್ಯೆಗಳ ನಿವಾರಣೆಗೆ ಸರಕಾರ ಈ ಯೋಜನೆ ಆರಂಭಿಸಿದೆ. ಹಳ್ಳಿಗಳ ಮಹಿಳೆಯರು ತಮ್ಮ ಮಕ್ಕಳ ಕುರಿತು ಚಿಂತಿಸಿ, ಮಾನಸಿಕವಾಗಿ ಕುಗ್ಗದೇ ಈ ಯೋಜನೆಯ ಸದುಪಯೋಗಪಡೆದುಕೊಂಡು ನಿಶ್ಚಿಂತೆಯಿಂದ ಕೂಸಿನ ಮನೆಯಲ್ಲಿ ತಮ್ಮ 06 ತಿಂಗಳಿಂದ 03 ವರ್ಷದೊಳಗಿನ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ತೆರಳಬಹುದು.