ಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯಾವಾರು ಒಳಮೀಸಲಾತಿ ಜಾರಿಗೊಳಿಸಿ ಮಾದಿಗ ಜನಾಂಗಕ್ಕೆ ಶೇ.6 ಮೀಸಲಾತಿಯನ್ನು ನಿಗದಿಪಡಿಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ವಿಜಯಪುರ ಜಿಲ್ಲಾ ಒಳಮೀಸಲಾತಿ ಹೋರಾಟಗಾರ ಹಾಗೂ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಭಾಷ್ ಕಾಲೇಬಾಗ ಸ್ವಾಗತಿಸಿದ್ದಾರೆ.
ಸುಮಾರು 3 ದಶಕಗಳಿಂದ ಮಾದಿಗರು ನಡೆಸುತ್ತಿದ್ದ ಹೋರಾಟಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸ್ಪಂದಿಸಿ ಮಾದಿಗರಿಗೆ ಒಳಮೀಸಲಾತಿಯನ್ನು ಜಾರಿಗೊಳಿಸಿರುವ ಕ್ರಮವು ಮಾದಿಗ ಸಮಾಜಕ್ಕೆ ಐತಿಹಾಸಿಕವ ಗೆಲುವಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮಾದಿಗ ಜನಾಂಗವು ಹಲವಾರು ಕಾರಣಗಳಿಂದ ಮೀಸಲಾತಿಯಿಂದ ವಂಚಿತವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಅತ್ಯಂತ ಹಿಂದುಳಿದ ಜನಾಂಗವಾಗಿದೆ. ಇದನ್ನು ಮನಗಂಡ ಮಾದಿಗ ಸಮಾಜ, ಪರಿಶಿಷ್ಟ ಜಾತಿಯಲ್ಲಿದ್ದ 101 ಜಾತಿಗಳಲ್ಲಿ ತಮ್ಮ ಜನಾಂಗದ ಜನಸಂಖ್ಯೆ ಹೆಚ್ಚಿದ್ದರೂ ಕೂಡ ತಮಗೆ ಸಿಗಬೇಕಿದ್ದ ಮೀಸಲಾತಿ ಪಾಲು ಸರಿಯಾಗಿ ಸಿಗುತ್ತಿಲ್ಲ ಎಂಬುವುದನ್ನು ಮನಗಂಡ ಮಾದಿಗ ಸಮಾಜ, ಜನಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿತು.
ಆಂಧ್ರಪ್ರದೇಶದಲ್ಲಿ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಹೋರಾಟದಿಂದ ಪ್ರಭಾವಿತಗೊಂಡು ರಾಜ್ಯದಲ್ಲಿಯೂ ಕೂಡ ಅದೇ ಮಾದರಿಯಲ್ಲಿ ಒಳಮೀಸಲಾತಿ ಹೋರಾಟವನ್ನು ಪ್ರಾರಂಭಿಸಿತು. ಸತತವಾಗಿ 30 ವರ್ಷಕ್ಕೂ ಹೆಚ್ಚು ಕಾಲ ರಾಜ್ಯಾದ್ಯಂತ ತಮಟೆ ಚಳವಳಿ, ಅರೆಬೆತ್ತಲೆ ಚಳವಳಿ, ಮೌನ ಮೆರವಣಿಗೆ, ಜನಪ್ರತಿನಿಧಿಗಳ ಮನೆ ಮುತ್ತಿಗೆ, ವಿಧಾನಸೌಧ ಮುತ್ತಿಗೆ, ಬಂದ್, ಪ್ರತಿಭಟನೆಗಳಂತಹ ಅನೇಕ ಹೋರಾಟಗಳನ್ನು ನಡೆಸಿತು. ಅನೇಕರು ತ್ಯಾಗ ಬಲಿದಾನಗಳನ್ನು ಮಾಡಿದರು. ಹಲವಾರು ಜನ ತಮ್ಮ ಮನೆ ಮಠ, ಸಂಸಾರ, ಶಿಕ್ಷಣ, ವ್ಯಾಪಾರ ಉದ್ಯೋಗಗಳನ್ನು ಬಿಟ್ಟು ಹಗಲು ರಾತ್ರಿ ಎನ್ನದೇ ಅವಿರತವಾಗಿ ಹೋರಾಟವನ್ನು ಮಾಡಿದರು. ಮಾದಿಗರ ಈ ಹೋರಾಟವನ್ನು ಮನಗಂಡು ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಒಳಮೀಸಲಾತಿ ಜಾರಿಗಾಗಿ ಆಯೋಗವನ್ನು ನೇಮಿಸಿದರು.
ನಂತರದ ದಿನಗಳಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಅರವ ನೇತೃತ್ವದಲ್ಲಿ ಆಯೋಗದ ಮೂಲಕ ಪರಿಶಿಷ್ಟರ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಿತು. ಈ ಆಯೋಗದ ವರದಿ ಬಗ್ಗೆ ಪರಿಶಿಷ್ಟ ಜಾತಿಗಳಲ್ಲಿ ಒಮ್ಮತ ಮೂಡದ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ನೇತೃತ್ವದಲ್ಲಿ ಮತ್ತೊಮ್ಮೆ ಆಯೋಗವನ್ನು ರಚಿಸಿದರು. ಈ ಆಯೋಗವು ವೈಜ್ಞಾನಿಕವಾಗಿ ವರದಿಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿತು. ಈ ವರದಿಯಲ್ಲಿ ಕೆಲವೊಂದು ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿ ಮಾದಿಗರಿಗೆ ಶೇ.6% ಒಳಮೀಸಲಾತಿಯನ್ನು ಜಾರಿಗೊಳಿಸಿ ರಾಜ್ಯದ ಐತಿಹಾಸಿಕ ತೀರ್ಮಾನವನ್ನು ಕೈಗೊಂಡಿದೆ. ಕೊನೆಗೂ ಮಾದಿಗರ ಸುದೀರ್ಘ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಆ ಮೂಲಕ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಮಾದಿಗರಿಗೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದು ಮಾದಿಗರ ಕೈ ಹಿಡಿದಿದೆ.
ಇದನ್ನೂ ಓದಿ: ವಿಜಯಪುರ | ವಿವಿಧ ಬೇಡಿಕೆ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
3 ದಶಕಗಳಿಗೂ ಹೆಚ್ಚು ಕಾಲ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಮೂಲಕ ಮಾದಿಗ ಸಮಾಜಕ್ಕೆ ಹಾಗೂ ಒಳಮೀಸಲಾತಿಗಾಗಿ ಹೋರಾಟ ಮಾಡಿದ ಹೋರಾಟಗಾರರಿಗೆ ಅತಿದೊಡ್ಡ ಕೊಡುಗೆಯನ್ನು ನೀಡಿದೆ. ಸರ್ಕಾರದ ಈ ವಿಶೇಷ ಕೊಡುಗೆಯನ್ನು ರಾಜ್ಯದ ಸಮಸ್ತ ಮಾದಿಗ ಜನಾಂಗ ಸಂತೋಷದಿಂದ ಸ್ವಾಗತಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
https://shorturl.fm/vUN7c