‘ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ’ ಎಂದು ಲೈವ್ ವಿಡಿಯೋದಲ್ಲಿ ಹೇಳಿಕೆ ನೀಡಿದ್ದ ನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ವಿರುದ್ಧ ಎರಡನೇ ಎಫ್ಐಆರ್ ದಾಖಲಾಗಿದೆ. ಈ ವಿವಾದಾತ್ಮಕ ಹೇಳಿಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ತಕ್ಷಣ ಉಪೇಂದ್ರ ಅವರು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ 12ರ ಸುಮಾರಿಗೆ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಬೈರಪ್ಪ ಹರೀಶ್ ಕುಮಾರ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಉಪೇಂದ್ರ ಅವರ ವಿರುದ್ಧ ಎರಡನೇ ಎಫ್ಐಆರ್ ದಾಖಲಾಗಿದೆ. ಈ ಮೊದಲು ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂದನ್ ಎಂಬವರು ನೀಡಿದ್ದ ದೂರಿನ ಮೇರೆಗೆ ಮೊದಲ ಎಫ್ಐಆರ್ ದಾಖಲಾಗಿತ್ತು.
ಎರಡನೇ ಎಫ್ಐಆರ್ ನಲ್ಲಿ ದೂರುದಾರ ಹರೀಶ್ ಕುಮಾರ್ ಅವರು, ಭಾರತೀಯ ದಂಡಸಂಹಿತೆಯ 505(1)(B)(C), 153a, 295, 295A, sc st prevention of atrocities act 1989 ಅಡಿಯಲ್ಲಿ ದೂರು ದಾಖಲಿಸಿಕೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿ, ಮನವಿ ಮಾಡಿದ್ದರು.

ನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕರಾದ ಉಪೇಂದ್ರ ಅವರು, ಫೇಸ್ ಬುಕ್ ಲೈವ್ ವಿಡಿಯೋ ವೇಳೆ ‘ಊರು ಅಂದ್ಮೇಲೆ ಹೊಲೆಗೇರಿ ಕೂಡ ಇರುತ್ತೆ’ ಎಂದಿದ್ದರು. ಇದು ಈಗ ವಿವಾದಕ್ಕೆ ಕಾರಣವಾಗಿದೆ. ಅವರ ವಿರುದ್ಧ ಕೆಲವರು ಕಾನೂನು ಸಮರ ಸಾರಿದ್ದಾರೆ. ಇದರಿಂದ ನಟನಿಗೆ ಸಂಕಷ್ಟ ಎದುರಾಗಿದೆ. ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.