ಕಳೆದ ನಾಲ್ಕು ವರ್ಷಗಳಿಂದ ₹34 ಕೋಟಿ ವ್ಯವಹಾರ ನಡೆಸಿ ವಿವಿಧ ನಾಲ್ಕು ಸಂಸ್ಥೆಗಳ ಮುಖಾಂತರ ಸುಳ್ಳು ದಾಖಲೆ ಸೃಷ್ಟಿಸಿ, ನಕಲಿ ಬಿಲ್ ನೀಡಿ 132 ಜನರಿಗೆ ವಂಚಿಸಿ ಸರ್ಕಾರದ ಬೊಕ್ಕಸಕ್ಕೆ ₹9.25 ಕೋಟಿ ತೆರಿಗೆ ಕಟ್ಟದೆ ವಂಚಿಸಿದ ಆರೋಪದ ಮೇರೆಗೆ ಬೀದರ್ ಜಿಲ್ಲೆಯ ನಿವಾಸಿ ರಾಹುಲ ಕಿಶನ ಕುಲಕರ್ಣಿ ಎಂಬಾತನನ್ನು ಬಂಧಿಸಲಾಗಿದೆ ಎಂದು ಕಲಬುರಗಿ ಪೂರ್ವ ವಲಯ ವಾಣಿಜ್ಯ ತೆರಿಗೆ (ಜಾರಿ) ಇಲಾಖೆಯ ಜಂಟಿ ಆಯುಕ್ತೆ ಯಾಸ್ಮಿನ್ ಬೇಗಂ ಜಿ ವಾಲಿಕಾರ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ʼತೆರಿಗೆ ವಂಚನೆ ಮಾಡಿರುವ ರಾಹುಲ್ ಎಂಬಾತನನ್ನು ಕಲಬುರಗಿಯ ಪೂರ್ವ ವಲಯದ ಜಾರಿ ವಿಭಾಗದ ಅಧಿಕಾರಿಗಳು ಬೆಂಗಳೂರು, ಶಿವಮೊಗ್ಗ ಅಧಿಕಾರಿಗಳು ಹಾಗೂ ತೆಲಂಗಾಣ ರಾಜ್ಯದ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳ ಸಹಯೋಗದಿಂದ ಹೈದರಾಬಾದ್‌ನಲ್ಲಿ ದಸ್ತಗಿರಿ ಮಾಡಿ ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆʼ ಎಂದು ಮಾಹಿತಿ ನೀಡಿದರು.
ʼಅಪಾದಿತ ತೆರಿಗೆದಾರ ತನ್ನ ಕುಟುಂಬ ಸದಸ್ಯರ ಹಾಗೂ ಸ್ನೇಹಿತರ ಆಧಾರ, ಪ್ಯಾನ್ ಕಾರ್ಡ್‌ಗಳನ್ನು ದುರುಪಯೋಗಪಡಿಸಿಕೊಂಡು, ಜಿಎಸ್‌ಟಿ ನೋಂದಣಿಗಳನ್ನು ಪಡೆದು, ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಾ ಸರಕು ಅಥವಾ ಸೇವೆಗಳನ್ನು ಪೂರೈಕೆ ಮಾಡದೇ ನಕಲಿ ಬಿಲ್ಲುಗಳನ್ನು ನೀಡಿ ಆ ಮೂಲಕ ನಕಲಿ ಹೂಡುವಳಿ ತೆರಿಗೆಯ ಕ್ಲೇಮ್ ಮಾಡಲು ಸಹಕರಿಸುತ್ತಿದ್ದನು. ಈ ಪ್ರಕರಣದಲ್ಲಿ ಇನ್ನಷ್ಟು ವ್ಯಕ್ತಿಗಳು ಭಾಗಿಯಾಗಿದ್ದು ಇವರಲ್ಲಿ ಬಹುತೇಕ ಲಾಭಾಂಶಿಗಳು ಕಾಮಗಾರಿ ಗುತ್ತಿಗೆದಾರರಾಗಿದ್ದು, ಇವರು ಪಡೆದಿರುವ ನಕಲಿ ಹೂಡುವಳಿ ತೆರಿಗೆಯ ಬಗ್ಗೆ ತನಿಖೆ ಪ್ರಗತಿಯಲ್ಲಿರುತ್ತದೆ. ನಕಲಿ ಹೂಡುವಳಿ ತೆರಿಗೆ ಪಡೆದಿರುವ ಎಲ್ಲಾ ವ್ಯಕ್ತಿಗಳ ಮೇಲೆ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದರು.
ನಕಲಿ ಹೂಡುವಳಿ ತೆರಿಗೆ ಕ್ಲೇಮ್ ಮಾಡಿದವರಿಂದ ತೆರಿಗೆಯನ್ನು ಬಡ್ಡಿ ಮತ್ತು ದಂಡದ ಸಮೇತ ವಸೂಲಿ ಮಾಡಲಾಗುವುದು. ಈ ರೀತಿ ಸರ್ಕಾರಕ್ಕೆ ವಂಚಿಸಿದ ಆರೋಪ ಸಾಬೀತಾದರೆ ನ್ಯಾಯಾಲಯವು ಆರೋಪಿಗೆ ಕನಿಷ್ಠ 5 ವರ್ಷ ಜೈಲು ಹಾಗೂ ದಂಡ ವಿಧಿಸುವ ಕಾನೂನು ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದು ಅತಿ ದೊಡ್ಡ ತೆರಿಗೆ ವಂಚನೆ ಪ್ರಕರಣವಾಗಿದೆʼ ಎಂದು ಯಾಸ್ಮಿನ್ ವಾಲಿಕಾರ ತಿಳಿಸಿದರು.
ಇದನ್ನೂ ಓದಿ : ಬೀದರ್ | ಈ ತಾಂಡಾಕ್ಕೆ ದಾರಿ ಯಾವುದಯ್ಯಾ?
ಪತ್ರಿಕಾಗೋಷ್ಠಿಯಲ್ಲಿ ತೆರಿಗೆ ಇಲಾಖೆಯ ಬೀದರ್ ಸಹಾಯಕ ಆಯುಕ್ತ ಪರ್ವತಗೌಡ.ಎಸ್, ಇಲಾಖೆಯ ಅಧಿಕಾರಿಗಳಾದ ಖಾಜಾ ಖಲಿಲೂಲ್ಲಾ, ಶಿವಕುಮಾರ ಸ್ವಾಮಿ, ಅಶೋಕ ಶೆಂಬೆಳ್ಳೆ, ಮಹೇಶಕುಮಾರ ಮಾಶೆಟ್ಟೆ ಮತ್ತಿತರರು ಇದ್ದರು