ವಿಜಯಪುರದ ತಾಳಿಕೋಟೆ ನಗರದ ರಸ್ತೆಗಳೇ ಬೀಡಾಡಿ ದನಗಳ ಆಶ್ರಯ ತಾಣಗಳಾಗಿವೆ. ರಾಜ್ಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದು, ವಾಹನ ಸವಾರರಿಗೆ ಇನ್ನಿಲ್ಲದ ಸಂಕಷ್ಟ ಎದುರಾಗಿದೆ. ಜಿಲ್ಲೆಯ ತಾಳಿಕೋಟಿ ಪಟ್ಟಣದಲ್ಲಿ ಯಾವುದೇ ರಸ್ತೆಯಲ್ಲಿ ಸಂಚರಿಸಿದರೂ ಅಲ್ಲಿ ರಸ್ತೆಯ ನಡುವೆ ಅಡ್ಡಗಟ್ಟಿ ಹತ್ತಾರು ಜಾನುವಾರುಗಳು ಮಲಗಿರುತ್ತವೆ ಇಲ್ಲವೇ ಗುಂಪಾಗಿ ನಿಂತಿರುತ್ತವೆ. ಹೀಗಾಗಿ ವಾಹನ ಸವಾರರು, ಪಾದಾಚಾರಿಗಳು ಆತಂಕದಲ್ಲಿ ಸಂಚರಿಸುವಂತಾಗಿದೆ. ಸಿಕ್ಕ ಸಿಕ್ಕಿದ್ದನ್ನು ತಿಂದು ರಸ್ತೆಗಳಲ್ಲೇ ಓಡಾಡಿಕೊಂಡಿರುವ ಈ ಜಾನುವಾರುಗಳ ನಿಯಂತ್ರಣಕ್ಕೆ ಪುರಸಭೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ನಗರದ ಸುತ್ತ ಮುತ್ತ ಟ್ರಾಫಿಕ್ ಜಾಮ್ ಗೂ ಕಾರಣವಾಗುತ್ತಿರುವುದು ಇದೇ ಹಿಂಡು ಹಿಂಡು ಜಾನುವಾರುಗಳು. ಇತ್ತೀಚಿಗೆ ಗ್ರಾಮೀಣ ಬೈಕ್ ಸವಾರ ಬೀಡಾಡಿ ದನಗಳ ದಾಳಿಗೆ ಸಿಲುಕಿ ಗಾಯಗೊಂಡಿದ್ದಾರೆ. ಅಲ್ಲದೆ, ಜಾನುವಾರುಗಳು ಗುದ್ದಾಡುವಾಗ ಜನರನ್ನು ಗಾಯಗೊಳಿಸಿದ, ಅವುಗಳಿಗೆ ಡಿಕ್ಕಿ ಹೊಡೆಯುವುದನ್ನು ಚಾಲಕರು ತಪ್ಪಿಸಲು ಹೋಗಿ ಬಿದ್ದು ಗಾಯಗೊಂಡ ಘಟನೆಗಳು ನಡೆದಿದೆ. ಪಟ್ಟಣದಲ್ಲಿ ನೂರಾರು ಜಾನುವಾರಗಳು ಕಾಣ ಸಿಗುತ್ತವೆ. ಇವುಗಳ ಮಾಲೀಕರು ಯಾರು ಎಂಬುದು ನಿಗೂಢವಾಗಿದೆ. ರಸ್ತೆ ಬದಿಯಲ್ಲಿ ಬಿದ್ದಿರುವ ಆಹಾರ ಪದಾರ್ಥಗಳನ್ನು ತಿಂದು ಜೀವಿಸಿವೆ, ಅವುಗಳ ಹೊಟ್ಟೆಗೆ ಪ್ಲಾಸ್ಟಿಕ್ ತ್ಯಾಜ್ಯವೂ ಸೇರುತ್ತದೆ. ಈ ದನಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಕೆಲವರಿಗೆ ಹಸುಗಳನ್ನು ಸಾಕಲು ಸ್ಥಳವಿಲ್ಲ. ಇನ್ನು ಕೆಲವರಿಗೆ ದಿನವಿಡೀ ಅವುಗಳಿಗೆ ಮೇವು ಒದಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹಸುಗಳನ್ನು ಹಾಲು ಕರೆದ ನಂತರ ರಸ್ತೆಗಳಿಗೆ ಬಿಡುತ್ತಾರೆ. ನಿವಾಸಿಗಳು ಅವುಗಳ ಕಾಟವನ್ನು ಅನ್ಯ ಮಾರ್ಗವಿಲ್ಲದೆ ಸಹಿಸಿಕೊಳ್ಳುವಂತಾಗಿದೆ. ಜಾನುವಾರುಗಳನ್ನು ನಿಯಂತ್ರಿಸಲು ಪುರಸಭೆ ಕಠಿಣ ಕ್ರಮ ಕೈಗೊಳ್ಳಬೇಕು ಮಾಲೀಕರಿಗೆ ದಂಡ ವಿಧಿಸಬೇಕು ಎನ್ನುತ್ತಾರೆ ಸಾರ್ವಜನಿಕರು. ಕೆಲವರು ಹಳ್ಳಿ ಪ್ರದೇಶದಲ್ಲಿ ಹೋರಿ ಕರಗಳನ್ನು 1000, 2000 ಗೆ ಖರೀದಿಸಿ ತಂದು ಪ್ರಮುಖ ಮಾರುಕಟ್ಟೆ ಹಾಗೂ ಅಂಗಡಿ ಪ್ರದೇಶಗಳಲ್ಲಿ ಬಿಡುತ್ತಿದ್ದಾರೆ ಎನ್ನಲಾಗುತ್ತಿದೆ. ಹಣ್ಣು ಹಾಗೂ ತರಕಾರಿ ಮಾರುಕಟ್ಟೆಗಳಲ್ಲಿನ ತ್ಯಾಜ್ಯ ತಿಂದು ಅವುಗಳು ಬದುಕುತ್ತಿವೆ. ಈ ಕರುಗಳ ಒಂದು ವರ್ಷವಾದ ನಂತರ ಅಂದಾಜು 25,000 ಕ್ಕೆ ಮಾರಾಟವಾಗುತ್ತದೆ. ಕರು ತರುವುದು, ದೊಡ್ಡದಾದ ನಂತರ ಮಾರಾಟ ಮಾಡೋದು ಒಂದು ದಂಧೆಯಾಗಿ ಮಾರ್ಪಟ್ಟಿದೆ ಎಂಬುದು ಕೆಲವರ ಆರೋಪವಾಗಿದೆ.

ಬೀಡಾಡಿ ದನಗಳಿಂದ ರೈತರ ಹೊಲಗಳಿಗೆ ತಂಡೋಪ ತಂಡವಾಗಿ ನುಗ್ಗಿ, ಬೆಳೆಯುವ ಬೆಳೆಗಳನ್ನು ಹಾಳು ಮಾಡುತ್ತಿವೆ. ಪುರಸಭೆಯವರು ಕೂಡಲೇ ಇವುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ರೈತರೆಲ್ಲರೂ ಪುರಸಭೆ ಎದುರು ಹೋರಾಟ ನಡೆಸಬೇಕಾಗುತ್ತದೆ ಎನ್ನುತ್ತಾರೆ ರೈತ ಸಂಘಟನೆಯ ಮುಖಂಡ ಮಲ್ಲಪ್ಪ ಕುಂಬಾರ.
ಕಷ್ಟಪಟ್ಟು ಬಿತ್ತಣಿಕೆ ಮಾಡಿ ಬೆಳೆ ಬೆಳೆದಿದ್ದೇವೆ. ಒಂದಿಲ್ಲೊಂದು ಸಮಸ್ಯೆಯಲ್ಲಿ ನಡುಗುತ್ತಿರುವ ರೈತರಿಗೆ ಬೀಡಾಡಿ ದನಗಳ ಹಾವಳಿ ಮತ್ತೊಂದು ಗಂಭೀರ ಸಮಸ್ಯೆಯಾಗಿ ಕಾಡತೊಡಗಿದೆ. ಒಂದು ಕಡೆ ಅನಾವೃಷ್ಟಿ ಮಗದೊಂದು ಕಡೆ ಅತಿವೃಷ್ಟಿ ಇವುಗಳ ಮಧ್ಯೆ ಇರುವ ನಾವು ಏನು ಮಾಡುವುದು ಎಂದೇ ತೋಚುವುದಿಲ್ಲ ಎನ್ನುತ್ತಾರೆ ಯಾಸಿನ ದೇಸಾಯಿ.
ಪ್ರತಿನಿತ್ಯ 45- 50 ದನಗಳು ತಂಡ ತಂಡವಾಗಿ ಬೇಲಿ ಜಿಗಿದು ಹೊಲಗಳಿಗೆ ದಾಳಿ ಇಡುತ್ತವೆ. ಸಾಲ ಮಾಡಿ ಬಿತ್ತನೆ ಬೀಜ ತಂದು ಬಿತ್ತಿರುವ ನಮ್ಮ ಬೆಳೆಯುವ ಹಂತದಲ್ಲಿರುವ ಬೆಳೆಗಳನ್ನು ನಾಶ ಮಾಡುತ್ತಿವೆ. ಇವುಗಳನ್ನು ತಡೆಯಲು ಹೋದರೆ ಮದ ಏರಿದಂತೆ ವರ್ತಿಸಿ ತಡೆಯಲು ಹೋದವರನ್ನೇ ಬೆನ್ನು ಹತ್ತಿ ಹಿರಿಯುತ್ತವೆ. ಇವುಗಳನ್ನು ನಿಯಂತ್ರಿಸಲು ಹೆದರುವಂಥ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಾರೆ ರೇವಣಸಿದ್ದಪ್ಪ ನಡಿಗೇರಿ.
ಪಟ್ಟಣದ ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್, ಹುಣಸಗಿ ರಸ್ತೆ ಸೇರಿದಂತೆ ಹೆದ್ದಾರಿಯಲ್ಲಿ ಬೀಡಾಡಿ ದನಗಳು ರಸ್ತೆಯಲ್ಲಿ ಹಿಂಡಾಗಿ ನಿಲ್ಲುತ್ತವೆ. ವಾಹನ ಸವಾರರು ವಿದ್ಯಾರ್ಥಿಗಳು ತೀವ್ರ ತೊಂದರೆ ಪಡುವಂತಾಗಿದೆ ತಕ್ಷಣವೇ ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಗೋಪಾಲ ಕಟ್ಟಿಮನಿ.
ಈ ಕುರಿತು ಪುರಸಭೆ ಮುಖ್ಯ ಅಧಿಕಾರಿ ಮೋಹನ ಜಾಧವ ಮಾತನಾಡಿ, “ಬೀಡಾಡಿ ದನಗಳ ಹಾವಳಿ ಬಗ್ಗೆ ಈಗಾಗಲೇ ಡಂಗುರ ಹೊಡೆಸಿ, ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಆದರೂ ನಿಯಂತ್ರಣಕ್ಕೆ ಬಂದಿಲ್ಲ. ನಿಯಂತ್ರಣಕ್ಕೆ ತುರ್ತಾಗಿ ಕ್ರಮ ಕೈಗೊಳ್ಳುವೆ” ಎಂದು ಭರವಸೆ ನೀಡಿದ್ದಾರೆ.
ಒಂದು ಕಡೆ ಗೋಶಾಲೆಯ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು, ಬೀಡಾಡಿ ದನಗಳನ್ನು ತಮ್ಮ ಗೋಶಾಲೆಗೆ ಕರೆದುಕೊಂಡು ಹೋಗಿ ಸಾಕುವವರೇ ಅಥವಾ ಪುರಸಭೆ ಮುಖ್ಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಕ್ರಮ ಜರುಗಿಸುವವರೇ ಕಾದು ನೋಡಬೇಕಿದೆ.