ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆ ಕಾರ್ಯಕ್ರಮದಲ್ಲಿ ‘ಸ್ವಾತಂತ್ರ್ಯ ಚಳವಳಿ ಮತ್ತು ಕನ್ನಡ ಸಾಹಿತ್ಯ’ ಎಂಬ ವಿಷಯ ಕುರಿತು ಮಾತನಾಡಿದ ಹಿರಿಯ ಸಾಹಿತಿ ಕೆ. ವೆಂಕಟರಾಜು “ಸ್ವಾತಂತ್ರ್ಯ ಚಳವಳಿ ಇತಿಹಾಸ ಸೇರಿರುವ ಚಳವಳಿ ಮಾತ್ರವಲ್ಲ. ಈ ದೇಶದ ಅಸ್ತಿತ್ವ ಇರುವ ಪರ್ಯಂತ. ಅದನ್ನು ನೆನಪಿಸಿಕೊಂಡು, ಅದರ ವಿವಿಧ ಆಯಾಮಗಳು ಪರಿಶೀಲನೆಗೆ ಒಳಪಡುತ್ತಿರಬೇಕು. ಈ ದೃಷ್ಟಿಯಿಂದ 25 ವರ್ಷಗಳ ಹಿಂದೆ ಪ್ರಕಟವಾದ ಹೆಚ್. ನಾಗವೇಣಿಯವರ ‘ಗಾಂಧಿ ಬಂದ’ ಕೃತಿ ಅತ್ಯುನ್ನತವಾದದ್ದು ” ಎಂದು ಹೇಳಿದರು.
” ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಚಳವಳಿ ಪ್ರಪಂಚದಲ್ಲಿಯೇ ವಿಶಿಷ್ಡವಾದುದು. ನಮ್ಮ ಸ್ವಾತಂತ್ರ್ಯ ಚಳವಳಿ ಏಷ್ಯಾ ಮತ್ತು ಆಫ್ರಿಕಾದ ಅನೇಕ ರಾಷ್ಟ್ರಗಳ ಸ್ವಾತಂತ್ರ್ಯ ಚಳವಳಿಗೆ ಸ್ಪೂರ್ತಿ ಮತ್ತು ಪ್ರೇರಣೆ ಒದಗಿಸಿದೆ. ಶಸ್ತ್ ಕ್ರಾಂತಿ ನಡೆಸದೇ ಸತ್ಯ ಮತ್ತು ಅಹಿಂಸೆಯ ಅಸ್ತ್ರ ಬಳಸಿ ಜಗತ್ತೇ ಬೆರಗಾಗುವ ರೀತಿಯಲ್ಲಿ ನಾವು ಸ್ವಾತಂತ್ರ್ಯ ಪಡೆದಿದ್ದೇವೆ”.
“ಗಾಂಧಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿ ಕೇವಲ ಬ್ರಿಟಿಷರಿಂದ ಅಧಿಕಾರ ಪಡೆಯುವುದಕ್ಕೆ ಸೀಮಿತವಾಗಿರಲಿಲ್ಲ. ಹೊಸ ನಾಗರೀಕತೆ ಮತ್ತು ಸಂಸ್ಕೃತಿಯ ನಿರ್ಮಾಣ. ಹೊಸ ಆಲೋಚನೆಯೊಂದಿಗೆ ಬದುಕನ್ನು ರೂಪಿಸುವುದು ಗುರಿಯಾಗಿತ್ತು. ಅಸ್ಪೃಶ್ಯತಾ ನಿವಾರಣೆ, ಸರ್ವಧರ್ಮಸಮ ಭಾವ, ಖಾದಿ ಮತ್ತು ಗ್ರಾಮೀಣ ಗುಡಿ ಕೈಗಾರಿಕೆ, ಸರಳ ಬದುಕು, ಜನಜೀವನದ ಪ್ರತಿ ಅಂಶದಲ್ಲಿಯೂ ವೈಜ್ಞಾನಿಕತೆ ಮೌಲ್ಯಗಳನ್ನು ಮುಂದಿಟ್ಟಿತು”.

“ವಾಟ್ಸಾಪ್ ವಿಶ್ವವಿದ್ಯಾನಿಲಯಗಳ ಸುಳ್ಳು ಪ್ರಚಾರಗಳಿಗೆ ವಿದ್ಯಾರ್ಥಿಗಳು ಕಿವಿಗೊಡದೆ ಸತ್ಯ ಅರಿಯುವ ಪ್ರಯತ್ನ ಮಾಡಬೇಕು. ಕನ್ನಡ ಸಾಹಿತಿಗಳು ಕೇವಲ ಹೋರಾಟದ ಚಿತ್ರಣ ಮಾತ್ರವಲ್ಲ ಈ ಮೌಲ್ಯಗಳ ಪರಿಶೀಲನೆಯನ್ನು ಮಾಡಿದ್ದಾರೆ. ಬೇಂದ್ರೆಯವರು ತಮ್ಮ ಬರವಣಿಗೆಯ ಕಾರಣಕ್ಕೆ ಜೇಲಿಗೆ ಹೋದರು. ಕುವೆಂಪು ರವರ ಎರಡು ಸಂಕಲನ ‘ಅಗ್ನಿಹಂಸ ಮತ್ತು ಕೋಗಿಲೆ ಹಾಗೂ ಸೋವಿಯತ್ ರಷ್ಯಾ’ ದ ಅನೇಕ ಕವನಗಳು ಇದೇ ಕಥಾ ಹಂದರ ಹೊಂದಿವೆ”.
“ಸ್ವತಂತ್ರ ಭಾರತ ಮತ್ತು ಸಂಯುಕ್ತ ಕರ್ನಾಟಕ ನಮ್ಮ ಗುರಿಯಾಗಿತ್ತು. ಕುವೆಂಪು ಅವರ ಕವನಗಳಲ್ಲಿ ವೈಙ್ಞನಿಕತೆಯ ಮೂರನೆ ಅಯಾಮವೂ ಇದೆ. ಪುತಿನ, ರಾಜರತ್ನಮ್ ,ಗೊರೂರು ರಾಮಸ್ವಾಮಿ ಅಯ್ಯಂಗಾರ್, ಬಸವರಾಜ ಕಟ್ಟೀಮನಿ, ನಿರಂಜನ, ಅನಕೃ ರವರ ಬರಹಗಳಲ್ಲಿ ಇವುಗಳನ್ನು ಕಾಣಬಹುದು. ಪಂಜೆ ಮಂಗೇಶರಾಯರ ನಾಗರ ಹಾವು ಮಕ್ಕಳ ಪದ್ಯ ಎಂದು ಬಿಂಬಿತವಾಗಿದ್ದರೂ ಅದು ಮಾರ್ಮಿಕವಾಗಿ ನಮ್ಮನ್ನು ಆಳುವವರನ್ನು ಹಂಗಿಸುತ್ತಿತ್ತು” ಎಂದು ಹೇಳಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಕೃಷಿ ಇಲಾಖೆಯಿಂದ ಕಳಪೆ ಬಿತ್ತನೆ ಬೀಜ ಪೂರೈಕೆ; ಸಂಕಷ್ಟದಲ್ಲಿ ರೈತರು
ಖ್ಯಾತ ಸುಗಮ ಸಂಗೀತ ಗಾಯಕ ಸಿ. ಎಂ. ನರಸಿಂಹಮೂರ್ತಿ ದೇಶಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಪವಿತ್ರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಕಾಶ್ ರಾಜ್ ಮೇಹು, ಕನ್ನಡ ಪ್ರಾಧ್ಯಾಪಕಿ ಡಾ. ಜ್ಯೋತಿ, ಸಂಚಾಲಕ ಪ್ರೊ. ಎ. ಎಂ. ಶಿವಸ್ವಾಮಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.