ಗಡಿ ಭಾಗದ ಜಿಲ್ಲೆಗಳಲ್ಲಿ ಕನ್ನಡ ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಬಡಮಕ್ಕಳಿಗೆ ಶಿಕ್ಷಣ ಕೊಡಲು ಸಾಧ್ಯ. ಇಲ್ಲದಿದ್ದರೆ ಶಿಕ್ಷಣ ಎಂಬುದು ಬಡವರ ಮಕ್ಕಳಿಗೆ ಗಗನ ಕುಸುಮವಾಗುತ್ತದೆ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸುಭಾಷ ರತ್ನ ತಿಳಿಸಿದರು.
ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕಮಂಚ್ ಟ್ರಸ್ಟ್ ವತಿಯಿಂದ ಬೀದರ್ ನಗರದ ಮೈಲೂರ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ಅವರ 105ನೇ ಜಯಂತಿ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ʼಅಣ್ಣಾಭಾವು ಸಾಠೆಯವರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಉತ್ತುಂಗಕ್ಕೇರಿದ್ದು ಜ್ವಲಂತ ಸಾಕ್ಷಿ. ಅವರ ಸದಾಶಯದಂತೆ ಅವರ ಹೆಸರಿನಲ್ಲಿ 300 ಬಡ ನಿರ್ಗತಿಕ ಮಕ್ಕಳಿಗೆ ತಲಾ ನಾಲ್ಕರಂತೆ 1,200 ನೋಟ್ ಬುಕ್ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ವಿರಚಿತ ಭಾಗ್ಯವಿಧಾತಾ ಪುಸ್ತಕ ವಿತರಣೆ ಕಾರ್ಯ ಶ್ಲಾಘನೀಯʼ ಎಂದರು.
ಹಿರಿಯ ಸಾಹಿತಿ ರಮೇಶ ಬಿರಾದಾರ ಮಾತನಾಡಿ, ʼಖಾಸಗೀಕರಣ ಪೋಷಣೆ, ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸರ್ಕಾರಿ ಶಾಲೆಗಳು ಅವನತಿಯ ಅಂಚಿನಲ್ಲಿವೆ. ಸರ್ಕಾರ, ಅಧಿಕಾರಿಗಳು, ಶಿಕ್ಷಕರು ಮತ್ತು ಪಾಲಕರು ಜಾಗೃತಿ ವಹಿಸಿದರೆ ಸರ್ಕಾರಿ ಶಾಲೆ ಉಳಿಸಬಹುದು. ಖಾಸಗಿ ಶಾಲೆಯಲ್ಲಿ ಸಂಬಳ ಕಡಿಮೆ ಇದ್ದರೂ ಪರಿಶ್ರಮ ಇದೆ. ಕೆಲ ಸರ್ಕಾರಿ ಶಾಲಾ ಶಿಕ್ಷಕರಿಗೆ ವೇತನ ಅಧಿಕ ಪಡೆದರೂ ಸೋಮಾರಿತನ ಹೆಚ್ಚುತ್ತಿದೆ. ಇದು ಹೀಗೆ ಮುಂದುವರೆದರೆ ಮತ್ತು ನಮ್ಮ ದೇಶ ಖಾಸಗೀಕರಣವಾಗಿ ಮುಂದಿನ ಪೀಳಿಗೆಗೆ ಸರ್ಕಾರಿ ನೌಕರಿ ಎಂಬುದು ಮರೀಚಿಕೆಯಾಗಲಿದೆʼ ಎಂದು ಕಳವಳ ವ್ಯಕ್ತಪಡಿಸಿದರು.
ಅಣ್ಣಾಭಾವು ಸಾಠೆ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮನೋಹರ ಪ್ರಾಸ್ತಾವಿಕ ಮಾತನಾಡಿ, ʼಟ್ರಸ್ಟ್ ವತಿಯಿಂದ ಪ್ರತಿ ವರ್ಷ ಬಡ ಮಕ್ಕಳ ಅಧ್ಯಯನಕ್ಕಾಗಿ ಉಚಿತ ನೋಟ್ ಬುಕ್ ವಿತರಣೆ, ಸಾಹಿತ್ಯ ಮತ್ತು ಜನಪದ ಸಂಸ್ಕೃತಿ ಸಂವರ್ಧಿಸುವ ಕಾರ್ಯ ಮಾಡಲಾಗುತ್ತಿದೆ. ನಶೆಮುಕ್ತ ಸಮಾಜಕ್ಕಾಗಿ ಮಕ್ಕಳಿಗೆ ಪ್ರತಿಜ್ಞೆ ಬೋಧಿಸಲಾಗಿದೆʼ ಎಂದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಾಲಿವಾನ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ : ಬೀದರ್ | ಈ ತಾಂಡಾಕ್ಕೆ ದಾರಿ ಯಾವುದಯ್ಯಾ?
ಕಾರ್ಯಕ್ರಮದಲ್ಲಿ ಉರ್ದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಖಾದರ, ಸ.ಪ್ರೌ.ಶಾಲೆಯ ಮುಖ್ಯಗುರು ರಾಘವೇಂದ್ರ ಕುಲಕರ್ಣಿ, ಪ್ರಮುಖರಾದ ವಿಜಯಕುಮಾರ ಸಾಗರ, ಆಲಿಯಾ ಬೇಗಂ ಸೇರಿದಂತೆ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು. ವಿಜ್ಞಾನ ಶಿಕ್ಷಕ ದೇವಿಪ್ರಸಾದ ಕಲಾಲ್ ನಿರೂಪಿಸಿದರು. ಟ್ರಸ್ಟ್ ಕಾರ್ಯದರ್ಶಿ ಪ್ರವೀಣ ಮೀರಾಗಂಜಕರ ಸ್ವಾಗತಿಸಿದರು. ಮನೋಹರ ಮರ್ಜಾಪುರಕರ ವಂದಿಸಿದರು.