ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ ಅನಿಲ್ ಅಂಬಾನಿ ಅವರ ಆಸ್ತಿಯನ್ನು ತನಿಖಾ ಸಂಸ್ಥೆಗಳು/ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದೇ? ಪ್ರಧಾನಿ ಮೋದಿ ಮನಸ್ಸು ಮಾಡಬಹುದೇ?
ಭಾರತದ ಭಾರೀ ಉದ್ಯಮಿ ಧೀರೂಭಾಯ್ ಅಂಬಾನಿ ನಿಧನದ ನಂತರ 2006ರಲ್ಲಿ ‘ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್’ ಸಂಸ್ಥೆಯು ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿ ಎಂಬ ಇಬ್ಬರು ಸಹೋದರರ ನಡುವೆ ಹಂಚಿಕೆಯಾಯಿತು. ಸಂಸ್ಥೆಯನ್ನು ಭಾಗ ಮಾಡಿಕೊಂಡ ಅಂಬಾನಿ ಸಹೋದರರು ಪ್ರತ್ಯೇಕವಾಗಿ ತಮ್ಮ ಉದ್ಯಮಗಳನ್ನು ಅಭಿವೃದ್ಧಿಪಡಿಸಲಾರಂಭಿಸಿದರು.
ಆರಂಭದಲ್ಲಿ ಅನಿಲ್ ಅಂಬಾನಿ, ತಮ್ಮ ಉದ್ಯಮ ಸಾಮ್ರಾಜ್ಯವನ್ನು ಬಹಳ ಚೆನ್ನಾಗಿಯೇ ವಿಸ್ತರಿಸಿದ್ದರು. ಆದರೆ, 2017ರ ನಂತರ ಅವರ ಕಂಪನಿಗಳು– ವಿಶೇಷವಾಗಿ ರಿಲಯನ್ಸ್ ಕಮ್ಯುನಿಕೇಷನ್ಸ್(ಆರ್‌ಕಾಮ್) ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಆಗ ಅನಿಲ್ ಅಂಬಾನಿ ಬ್ಯಾಂಕ್‌ಗಳಿಂದ ಹೆಚ್ಚು ಹೆಚ್ಚು ಸಾಲ ಪಡೆಯಲು ಮುಂದಾದರು. ಪಡೆದ ಸಾಲವನ್ನು ಉಲ್ಲೇಖಿತ ಉದ್ದೇಶಕ್ಕೆ ಬಳಸದೆ, ನಾನಾ ಉದ್ದೇಶಗಳಿಗಾಗಿ ಬಳಸಿಕೊಂಡರು. ಸಾಲ ನೀಡಿದ ಬ್ಯಾಂಕ್‌ಗಳಿಗೆ ವಂಚಿಸಿದರು.
ಈ ವಂಚನೆಯ ವಿರುದ್ಧ ಸ್ಟೇಟ್ ಬ್ಯಾಂಕ್ ಇಂಡಿಯಾ ಜೂನ್ 13ರಂದು ಸಿಬಿಐಗೆ ದೂರು ನೀಡಿತು. ದೂರು ಆಧರಿಸಿ ಅನಿಲ್ ಅಂಬಾನಿ ಮನೆ ಹಾಗೂ ಆರ್‌ಕಾಂಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯ ನಡೆಸಿದೆ. ವಂಚನೆ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 2 ಸಾವಿರ ಕೋಟಿ ನಷ್ಟವುಂಟು ಮಾಡಿದ ಆರೋಪದಡಿ ರಿಲಯನ್ಸ್ ಕಮ್ಯುನಿಕೇಷನ್ ಮತ್ತು ಅದರ ಪ್ರವರ್ತಕ ನಿರ್ದೇಶಕ ಅನಿಲ್ ಅಂಬಾನಿ ವಿರುದ್ಧ ಸಿಬಿಐ ಶನಿವಾರ ಪ್ರಕರಣ ದಾಖಲಿಸಿಕೊಂಡಿದೆ.
ಇದನ್ನು ಓದಿದ್ದೀರಾ?: ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯನ್ನು ಬಂಧಿಸಿದ ಇಡಿ: ನಗದು ಸಹಿತ ಚಿನ್ನಾಭರಣ ವಶಕ್ಕೆ
ಆಗಸ್ಟ್ 26, 2016ಕ್ಕೆ ಅನ್ವಯಿಸುವಂತೆ ಆರ್‌ಕಾಂ ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಅಸಲು ಹಾಗೂ ಬಡ್ಡಿ ಸಹಿತ 2,227 ಕೋಟಿಗಳನ್ನು ನೀಡಬೇಕಿತ್ತು. ಜತೆಗೆ ಬ್ಯಾಂಕ್ ಗ್ಯಾರಂಟಿ ಆಧಾರದಲ್ಲಿ ಪಡೆದ 786.52 ಕೋಟಿಯನ್ನೂ ಪಾವತಿಸಬೇಕಿತ್ತು. ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆಗೆ 2016ರಲ್ಲಿ ಆರ್‌ಕಾಂ ಒಳಗಾಗಿತ್ತು. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು 2020ರಲ್ಲಿ ಈ ನಿರ್ಣಯದ ಯೋಜನೆಯನ್ನು ಸಾಲಗಾರ ಸಮಿತಿ ಒಪ್ಪಿಕೊಂಡಿತ್ತು. ಇದೇ ವರ್ಷ ನವೆಂಬರ್‌ನಲ್ಲಿ ಕಂಪನಿಯ ಖಾತೆ ಮತ್ತು ಅದರ ಪ್ರವರ್ತಕ ಅನಿಲ್ ಅಂಬಾನಿಯನ್ನು ‘ವಂಚಕ’ ಎಂದು ಎಸ್‌ಬಿಐ ಪ್ರಕಟಿಸಿತು.
2021ರಲ್ಲಿ ದೆಹಲಿ ಹೈಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿತ್ತು. ”ತಮ್ಮ ಖಾತೆಯನ್ನು ಬ್ಯಾಂಕ್ ‘ವಂಚಕ’ ಎಂದು ವರ್ಗೀಕರಿಸುವ ಮೊದಲು ಸಾಲ ಪಡೆದವರಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡಬೇಕು” ಎಂಬ 2023ರ ಸುಪ್ರೀಂ ಕೋರ್ಟ್‌ನ ಆದೇಶದಂತೆ ಎಸ್‌ಬಿಐ ಕಂಪನಿ ಮತ್ತು ಪ್ರವರ್ತಕರಿಗೆ ಅವಕಾಶ ನೀಡಿತ್ತು. ಇದಾದ ಬಳಿಕ 2024ರ ಜುಲೈ 15ರಂದು ಆರ್‌ಬಿಐನ ಸುತ್ತೋಲೆಯಂತೆ ಆರ್‌ಕಾಂ ಕಂಪನಿ ಮತ್ತು ಅದರ ಪ್ರವರ್ತಕ ಅನಿಲ್ ಅಂಬಾನಿಯನ್ನು ‘ವಂಚಕ’ ಎಂದು ಎಸ್‌ಬಿಐ ಗುರುತಿಸಿದೆ.
ಇದಿಷ್ಟೇ ಅಲ್ಲ, ಅನಿಲ್ ಅಂಬಾನಿ ಸುಮಾರು 20,380 ಕೋಟಿ ರೂ.ಗಳಷ್ಟು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅನಿಲ್ ಅಂಬಾನಿ ಅವರು ‘ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ಸ್'(ಎಡಿಎಜಿ)ನ ಭಾಗವಾಗಿರುವ ಕಂಪನಿಗಳು ದೂರಸಂಪರ್ಕ, ಮೂಲಸೌಕರ್ಯ ಹಾಗೂ ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದ ವ್ಯಾಪಾರ ವಿಸ್ತರಣೆಗಾಗಿ ಬರೋಬ್ಬರಿ 20,380 ಕೋಟಿ ರೂ.ಗಳಷ್ಟು ಸಾಲ ಪಡೆದಿವೆ. ಮುಖ್ಯವಾಗಿ, ಈ ಸಾಲಗಳನ್ನು ದೇಶದ ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿಐ, ಎಸ್ ಬ್ಯಾಂಕ್, ಕೆನರಾ ಬ್ಯಾಂಕ್, ಎಚ್‌ಡಿಎಫ್‌ಸಿ ಹಾಗೂ ಆಕ್ಸಿಸ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳಿಂದ ಪಡೆಯಲಾಗಿದೆ.
ಆದರೆ, ಸಾಲ ಪಡೆದ ಸಂಸ್ಥೆಗಳು ಯಾವುದೇ ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡಿಲ್ಲ. ಅಲ್ಲದೆ, ರಿಲಯನ್ಸ್ ಕಮ್ಯುನಿಕೇಷನ್ಸ್ ಹೆಸರಿನಲ್ಲಿ ಪಡೆದಿದ್ದ ಸಾಲದ ಮೊತ್ತವನ್ನು ಉದ್ದೇಶಿತ ಯೋಜನೆಗಳಿಗೆ ಬಳಸದೆ, ಇತರ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ ಎಂಬ ಗುರುತರ ಆರೋಪವಿದೆ.
ಅನಿಲ್ ಅಂಬಾನಿ ಅವರ ಎಡಿಎಜಿಯ ಭಾಗವಾಗಿರುವ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್, ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ ಹಾಗೂ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಮೇಲೆ ಎಸ್ ಬ್ಯಾಂಕ್ ಬರೋಬ್ಬರಿ 3,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಿತ್ತು. ಆದರೆ, ಸಾಲ ಪಡೆದ ಅನಿಲ್ ಅಂಬಾನಿ ಸಂಸ್ಥೆ ಆ ಹಣವನ್ನು ಅಕ್ರಮವಾಗಿ ಬಳಸಿಕೊಂಡಿದ್ದು, ಬ್ಯಾಂಕ್‌ಗೆ ಮೋಸ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇದೇ ಆರೋಪಗಳ ಮೇಲೆ ಆಗಸ್ಟ್ 5ರಂದು ಜಾರಿ ನಿರ್ದೇಶನಾಲಯ (ಇಡಿ) ಸುಮಾರು 10 ಗಂಟೆಗಳ ಕಾಲ ಅಂಬಾನಿಯನ್ನು ಪ್ರಶ್ನಿಸಿದೆ. ಹಾಗೆಯೇ 17,000 ಕೋಟಿ ರೂ.ಗೂ ಹೆಚ್ಚು ಒಳಗೊಂಡ ಬಹು ಬ್ಯಾಂಕ್ ಸಾಲ ವಂಚನೆಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯಲ್ಲಿ ಅನಿಲ್ ಅಂಬಾನಿ ನಿವಾಸ ಇತರೆಡೆ ದಾಳಿ ನಡೆಸಿದೆ. ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದೆ.
ಬ್ಯಾಂಕ್‌ನಿಂದ ಪಡೆದ ಸಾಲವನ್ನು ರಿಲಯನ್ಸ್ ಗ್ರೂಪ್‌ನ ಇತರ 50ಕ್ಕೂ ಹೆಚ್ಚು ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ ಎಂಬುದು ಇಡಿ ತನಿಖೆಯಲ್ಲಿ ಗೊತ್ತಾಗಿದೆ. ಹಾಗೆಯೇ ಆ ಕಂಪನಿಗಳು ಸರಿಯಾದ ದಾಖಲೆಗಳನ್ನು ಹೊಂದಿಲ್ಲ. ಸರಿಯಾದ ವಿಳಾಸಗಳು ಮತ್ತು ನಿರ್ದೇಶಕರೇ ಇಲ್ಲ. ಹಣಕಾಸಿನ ಲೆಕ್ಕಾಚಾರಗಳನ್ನೂ ಇಟ್ಟಿಲ್ಲ. ಇದೆಲ್ಲವೂ ಹಣಕಾಸಿನ ದುರುಪಯೋಗ ಮತ್ತು ಅಕ್ರಮವೆಸಗಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ?: ಟ್ರಂಪ್ ಸುಂಕ ವಿಧಿಸಿದ ಬೆನ್ನಲ್ಲೇ ಅಮೆರಿಕಕ್ಕೆ ಅಂಚೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಭಾರತ
ಸದ್ಯ, ಇಡಿ ತನಿಖೆ ನಡೆಸುತ್ತಿದೆ. ತನಿಖೆಯಲ್ಲಿ ಇನ್ನೂ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಅನಿಲ್ ಅಂಬಾನಿ ಅವರ ಕಂಪನಿಗಳಿಗೆ ಸಾಲ ನೀಡುವ ಎಸ್ ಬ್ಯಾಂಕ್ ಸಾಲದ ಅನುಮೋದನೆ ವೇಳೆ ಹಲವಾರು ನಿಯಮಗಳನ್ನು ಉಲ್ಲಂಘಿಸಿದೆ. ವ್ಯವಸ್ಥಿತ ಲೋಪ ಎಸಗಿದೆ. ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂಬುದೂ ಇಡಿ ಗಮನಕ್ಕೆ ಬಂದಿದೆ. ಇಡಿಯ ತನಿಖೆಗೆ ಸಿಬಿಐ, ಸೆಬಿ, ನ್ಯಾಷನಲ್ ಹೌಸಿಂಗ್ ಬ್ಯಾಂಕ್, ನ್ಯಾಷನಲ್ ಫೈನಾನ್ಷಿಯಲ್ ರಿಪೋರ್ಟಿಂಗ್ ಅಥಾರಿಟಿ (ಎನ್‌ಎಫ್‌ಆರ್‌ಎ) ಹಾಗೂ ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಹಲವಾರು ನಿಯಂತ್ರಕ ಮತ್ತು ಹಣಕಾಸು ಸಂಸ್ಥೆಗಳು ಮಾಹಿತಿ ಒದಗಿಸಿವೆ.

ಸದ್ಯಕ್ಕೆ, ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ ಅನಿಲ್ ಅಂಬಾನಿ ಅವರ ಆಸ್ತಿಯನ್ನು ತನಿಖಾ ಸಂಸ್ಥೆಗಳು/ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ, ಅನಿಲ್ ಸಹೋದರ ಮುಖೇಶ್ ಅಂಬಾನಿಯ ಆಪ್ತರಾಗಿರುವ ಪ್ರಧಾನಿ ಮೋದಿಯವರು ಹಾಗೂ ಮೋದಿ ಸರ್ಕಾರದ ಕೈಗೊಂಬೆಯಾಗಿರುವ ಇಡಿ ಮತ್ತು ಸಿಬಿಐ ಸಂಸ್ಥೆಗಳು ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.