ಅಲೆಮಾರಿಗಳ ಹಕ್ಕು ತಿರಸ್ಕರಿಸಿದ ಸಿಎಂ; ಹೋರಾಟ ತೀವ್ರಗೊಳಿಸಲು ನಿರ್ಧಾರ

Date:

Advertisements
"ನಾಗಮೋಹನ್‌ ದಾಸ್‌ ಅವರೂ ಕಣ್ಣೀರು ಹಾಕುತ್ತಿದ್ದಾರೆ. ನಾನಂದುಕೊಂಡ ಸಮುದಾಯಕ್ಕೆ ನ್ಯಾಯ ಕೊಡಲು ಸಾಧ್ಯವಾಗಿಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ."

ಅಲೆಮಾರಿಗಳಿಗೆ ಪ್ರತ್ಯೇಕವಾಗಿ ನೀಡಬೇಕಾದ ಶೇ.1ರಷ್ಟು ಮೀಸಲಾತಿಯನ್ನು ಸ್ಪೃಶ್ಯ ಸಮುದಾಯಗಳ ಗುಂಪಿನಲ್ಲಿ ವಿಸರ್ಜನೆ ಮಾಡಿರುವುದನ್ನು ಖಂಡಿಸಿ ಹೋರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದರು. ಕಾವೇರಿ ನಿವಾಸದಲ್ಲಿ ಅಲೆಮಾರಿ ಜನಾಂಗದ ಮುಖಂಡರು, ಹೋರಾಟಗಾರರು ಮತ್ತು ಚಿಂತಕರುಗಳ ಜೊತೆ ಸುದೀರ್ಘ ಮಾತುಕತೆ ನಡೆಸಿದ ಅವರು ಶೇ.1ರಷ್ಟು ಮೀಸಲಾತಿಯನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲವೆಂಬ ಅಭಿಪ್ರಾಯ ತಾಳಿದರು. ಸಿಎಂ ಜೊತೆಗಿನ ಮಾತುಕತೆ ವಿಫಲವಾದ ಬೆನ್ನಲ್ಲೇ ಹೋರಾಟಗಾರರು ಫ್ರೀಡಂಪಾರ್ಕ್‌ನ ಪ್ರತಿಭಟನಾ ಸ್ಥಳದಲ್ಲಿ ಸಭೆ ನಡೆಸಿದ್ದು, ಹೋರಾಟದ ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಿದರು.

“ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಲೆಮಾರಿಗಳ ಹೋರಾಟ ಮುಂದುವರಿಸಲಾಗುವುದು. ಶೇ. 1 ರಷ್ಟು ಒಳಮೀಸಲಾತಿ ಪಡೆಯುವವರೆಗೂ, A ಗುಂಪಿನಲ್ಲಿ ಸೇರಿಸುವವರೆಗೂ ಹೋರಾಟ ನಡೆಸಲಾಗುವುದು. ⁠ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲೂ ಹೋರಾಟವನ್ನು ತೀರ್ವಗೊಳಿಸಲಾಗುವುದು. ⁠ಅಲೆಮಾರಿಗಳನ್ನು ಮೀಸಲಾತಿಯಿಂದ ವಂಚಿಸುವ ಅನ್ಯಾಯ ಮಾಡಿದ ಸಚಿವ ಸಂಪುಟದ ಎಲ್ಲಾ ಮಂತ್ರಿಗಳಿಗೆ ಪ್ರತಿಭಟನಾ ಹಕ್ಕೊತ್ತಾಯ ಮಾಡಲಾಗುವುದು” ಎಂದು ಸಭೆ ನಿರ್ಧರಿಸಿತು.

ಸಭೆಯಲ್ಲಿ ಕೇಳಿಬಂದ ಅಭಿಪ್ರಾಯಗಳು:

Advertisements

‘ಸಾಂವಿಧಾನಿಕ ಪೀಠದ ಬೆಂಬಲವಿದೆ’

ಮುಖ್ಯಮಂತ್ರಿಗಳ ಬಗ್ಗೆ ನಮಗೆ ಭರವಸೆ ಇತ್ತು. ಆದರೆ ಅವರ ಮಾತಿನಲ್ಲಿ ವಿಷಾದ, ಹತಾಶೆ ಇತ್ತು. ಅವರಂತಹ ಗಟ್ಟಿ ಸೈದ್ಧಾಂತಿಕ ರಾಜಕಾರಣಿ ಇವತ್ತು ಹತಾಶೆಗೆ ಒಳಗಾಗಿದ್ದಾರೆ ಎಂದರೆ ದೊಡ್ಡ ದೊಡ್ಡ ಲಾಬಿಗಳು ಅವರನ್ನು ಮಣಿಸುತ್ತಿವೆ.

ನಾವು ಹೋರಾಟ ಮುಂದುವರೆಸಬೇಕು. ಆದರೆ ಅಲೆಮಾರಿಗಳು 90% ಕೂಲಿ ಕಾರ್ಮಿಕರು. ಅವರು ಬೆಂಗಳೂರಿಗೆ ಬರುವುದು ಬಹಳ ಕಷ್ಟ. ಹಾಗಾಗಿ ನಮ್ಮ ನಮ್ಮ ಜಿಲ್ಲೆಗಳಲ್ಲಿ ಹೋರಾಟ ಮುಂದುವರೆಸೋಣ. ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ತೀರ್ಪಿನ ದೊಡ್ಡ ಬಲವಿದೆ. ಸಂವಿಧಾನದ ಬಲವಿದೆ. ಕೋರ್ಟ್‌ಗೆ ಹೋಗುವುದು ಸೇರಿದಿದಂತೆ ಇನ್ನೂ ಯಾವ ಯಾವ ಸಾಧ್ಯತೆಗಳಿವೆ ಎಂಬುದನ್ನು ಪರಿಶೀಲಿಸುತ್ತೇವೆ. ನಮ್ಮವರು ಯಾರೂ ಕೂಡ ಹತಾಶರಾಗಬಾರದು.

101 ಸಮುದಾಯಗಳು ನಮ್ಮ ಸಹೋದರರು. ಇದೊಂದು ಸಣ್ಣ ದಾಯಾದಿ ಕಲಹ ಅಷ್ಟೇ. ನಾವು ಯಾರನ್ನೂ ದೂಷಿಸಬಾರದು. ಐಕ್ಯತೆ ಬಹಳ ಮುಖ್ಯ. ನಾವು ಅಲೆಮಾರಿಗಳು ಈ ವ್ಯವಸ್ಥೆಯ ಅಂತರಾತ್ಮವನ್ನು ಕಲಕುತ್ತೇವೆ, ನಮ್ಮ ಅನ್ನ ಕಸಿದುಕೊಂಡ ಪ್ರತಿಯೊಬ್ಬರ ಹೃದಯವನ್ನು ಕಾಡುತ್ತೇವೆ.

ಪ್ರೊ. ಎ. ಎಸ್.ಪ್ರಭಾಕರ್, ಹಂಪಿ ವಿಶ್ವವಿದ್ಯಾಲಯ

alemari 3

***

‘ಫ್ರೀಡಂ ಪಾರ್ಕ್‌ನಲ್ಲಿ ಅಲೆಮಾರಿಗಳು ಟೆಂಟ್ ಹಾಕುತ್ತೇವೆ’

ಹೋರಾಟದ ಮಾದರಿ ಬದಲಿಸೋಣ. ನಮ್ಮ ಕಷ್ಟ ಜನರಿಗೆ ಗೊತ್ತಾಗಲಿ. ಅಲೆಮಾರಿಗಳು ವಾಪಸ್‌ ಹೋರಾಟಕ್ಕೆ ಬರುವಾಗ ಟೆಂಟ್‌ಗಳು, ಕೌದಿಗಳನ್ನು ತನ್ನಿ. ಫ್ರೀಡಂ ಪಾರ್ಕ್‌ನಲ್ಲಿ ಟೆಂಟ್‌ ಹಾಕಿ ಇಲ್ಲಿಯೇ ಊಟ ಮಾಡಿಕೊಂಡು ಜೀವನ ಮಾಡೋಣ. ತಂಗಡಗಿಯಂತಹ ಸಚಿವರಿಗೆ ಹಸಿದಿದ್ದರೆ ಅವರಿಗೂ ಊಟ ಹಾಕೋಣ. ನಾವು ನ್ಯಾಯ ಪಡದೇ ವಾಪಸ್‌ ಹೋಗೋಣ.

ಚಾವಡಿ ಲೋಕೇಶ್‌ ಗೋಸಂಗಿ, ಹೋರಾಟಗಾರರು

***

ಬಲಾಢ್ಯರ ಒತ್ತಡಕ್ಕೆ ಮಣಿದ ಸಿಎಂ

ಈ ರಾಜ್ಯದ ದುರ್ಬಲ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯನವರು ಮಾತ್ರ. ನಾವು ಅವರನ್ನು ಧೀಮಂತ ನಾಯಕ ಎಂದುಕೊಂಡಿದ್ದೆವು. ಆದರೆ ಇವತ್ತು ಕೆಲವರ ಬಲಾಢ್ಯರ ಒತ್ತಡಕ್ಕೆ ರಾಜ್ಯದ ಮುಖ್ಯಮಂತ್ರಿ ಮಣಿದಿದ್ದಾರೆ. ಆದರೆ ನಾವು ಕುಗ್ಗಬಾರದು. ಹೋರಾಟ ಮುಂದುವರೆಸೋಣ.

ಸಣ್ಣ ಮಾರಣ್ಣ, ಹೋರಾಟಗಾರರು

***

‘ಸುಪ್ರೀಂಕೋರ್ಟ್ ಕದ ತಟ್ಟೋಣ’

ನನಗೆ ಮಾತೇ ತೋಚುತ್ತಿಲ್ಲ. ನನ್ನ ಎರಡು ವರ್ಷದ ಅವಧಿಯಲ್ಲಿ ಕುಟುಂಬದಿಂದ ಹೊರಗಿದ್ದು ಒಳಮೀಸಲಾತಿಯ ಹೋರಾಟಕ್ಕೆ ಮೀಸಲಿಟ್ಟಿದ್ದೆ. ಈ ಹಿಂದೆಯೇ ನಾಗಮೋಹನ್‌ ದಾಸ್‌ರವರಿಗೆ 3% ಮೀಸಲಾತಿ ಕೊಡಬೇಕೆಂದು ಮನವಿ ಕೊಟ್ಟಿದ್ದೆವು. ಅವರು ಸೂಕ್ತ ದತ್ತಾಂಶದೊಂದಿಗೆ ಉತ್ತಮ ವರ್ಗೀಕರಣ ಮಾಡಿ ವರದಿ ನೀಡಿದ್ದರು. 59 ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ಮಾಡಿ 1% ಮೀಸಲಾತಿ ನಿಗದಿ ಮಾಡಿದ್ದರು. ಆದರೆ ಸರ್ಕಾರ ಅಲೆಮಾರಿಗಳಿಗೆ ಅನ್ಯಾಯ ಮಾಡಿ ನಮ್ಮಿಂದ 1% ಕಿತ್ತುಕೊಂಡಿದೆ. ನಮಗೆ ಶಿಕ್ಷಣ, ಉದ್ಯೋಗ, ಮನೆ, ಬಂಡವಾಳ ಇಲ್ಲದೇ ನಮಗೆ ಮರಣಶಾಸನ ಬರೆಯಲಾಗಿದೆ. ಮುಖ್ಯಮಂತ್ರಿಗಳು ಒತ್ತಡಕ್ಕೆ ಮಣಿದು ನಮ್ಮ ಕತ್ತು ಕುಯ್ದಿದ್ದಾರೆ. ನಮ್ಮನ್ನು ಮತ್ತೆ ಜೀತಕ್ಕೆ, ಭಿಕ್ಷೆಗೆ ಕಳಿಸುತ್ತಿದ್ದಾರೆ. ಮಾನವೀಯತೆ, ಮನುಷ್ಯತ್ವ ಸರ್ಕಾರಕ್ಕೆ ಇದ್ದಿದ್ದರೆ ಈ ರೀತಿ ಮಾಡುತ್ತಿರಲಿಲ್ಲ. ನಾವು ಹೋರಾಟವನ್ನು ಮುಂದುವರೆಸುತ್ತೇವೆ. ನಾವು ಸುಪ್ರೀಂ ಕೋರ್ಟ್‌ ಕದ ತಟ್ಟಿ ನ್ಯಾಯ ಪಡೆಯೋಣ.

ವೀರೇಶ್‌, ಹೋರಾಟಗಾರರು

alemari 1 1

***

‘ವಿಶೇಷ ಮಂಡಳಿಗಿಂತ ಮೀಸಲಾತಿಯೇ ಮುಖ್ಯ’

1% ಮೀಸಲಾತಿ ಕೊಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ. ಅಲೆಮಾರಿಗಳಿಗೆ ವಿಶೇಷ ಮಂಡಳಿ ರಚನೆ ಮಾಡಬಹುದು, ಅನುದಾನ ಕೊಡಬಹುದು ಇತ್ಯಾದಿ ಹೇಳಿದರು. ಅದಕ್ಕೆ ನಾವು ಒಪ್ಪಿಲ್ಲ. ನಮಗೆ ವರ್ಗೀಕರಣವೇ ಬಹಳ ಮುಖ್ಯ ಎಂದು ಪಟ್ಟು ಹಿಡಿದೆವು. ಕಟ್ಟಕಡೆಯ ಅಲೆಮಾರಿ ಜನರು ನೋವಿನಲ್ಲಿರುವಾಗ ಖುಷಿಯ ಮಾತೆಲ್ಲಿ?

ಬಾಲಗುರುಮೂರ್ತಿ

***

‘ಚಾಟಿಯಲ್ಲಿ ಹೊಡೆದುಕೊಳ್ಳದಿರೋಣ’

ನಮ್ಮ ಸಿಂಧೋಳ್‌ ಸಮುದಾಯದವರು ಇನ್ನು ಮುಂದೆ ಚಾಟಿಯಲ್ಲಿ ನಮಗೆ ನಾವೇ ಹೊಡೆದುಕೊಳ್ಳಬಾರದು. ಕಾನೂನು ರೂಪದಲ್ಲಿ ಸರ್ಕಾರಕ್ಕೆ ಚಾಟಿ ಬೀಸೋಣ. ಆ ಶಕ್ತಿಯನ್ನು ಬಾಬಾ ಸಾಹೇಬರು ನಮಗೆ ಕೊಟ್ಟಿದ್ದಾರೆ.

ಹನುಮಂತು, ಹೋರಾಟಗಾರರು

***

‘ಜಸ್ಟಿಸ್ ನಾಗಮೋಹನ ದಾಸ್ ಅವರೂ ಕಣ್ಣೀರು ಹಾಕಿದ್ದಾರೆ’

ನಾವು ಸೋತಿದ್ದೇವೆ ಎಂಬುದು ಸುಳ್ಳು. ದಯವಿಟ್ಟು ಯಾರೂ ನಿರಾಶರಾಗಬೇಡಿ. ನಾವು 11ನೇ ತಾರೀಖು ಹೋರಾಟಕ್ಕೆ ಕೂತಾಗ ಕೆಲವರು ಮುಖ್ಯವಾಗಿ ರಾಜಕಾರಣಿಗಳು ಇದು ಆಗುವ ಮಾತಲ್ಲ, ಹೋರಾಟ ಕೈಬಿಡಿ ಎಂದರು. ಮಳೆ ಗಾಳಿ ಚಳಿ ಎಂದು ಹೆದರಿಸಿದರು, ಜನ ಬರುವುದಿಲ್ಲ ಎಂದರು. ಆದರೆ ಕೊನೆಗೆ ಏನಾಯಿತು? ಸರ್ಕಾರದ ಮೇಲೆ ಒತ್ತಡ ತಂದು ಒಳಮೀಸಲಾತಿ ಜಾರಿಗೊಳಿಸಿದ್ದೀವಿ. ಆದರೆ 6% ನಮಗೆ ಸಮಾಧಾನ ತಂದಿಲ್ಲ. ನಾವು ಸಂತಸಪಟ್ಟಿಲ್ಲ. ನಾವು 35 ವರ್ಷ ಹೋರಾಡಿದ್ದು ಇದಕ್ಕೆ ಮಾತ್ರವೇ? ಅಲೆಮಾರಿಗಳನ್ನು ಮರೆತುಬಿಡಲು ಸಾಧ್ಯವೇ?

ನಾಗಮೋಹನ್‌ ದಾಸ್‌ರವರು ಸಹ ಕಣ್ಣೀರು ಹಾಕುತ್ತಿದ್ದಾರೆ. ನಾನಂದುಕೊಂಡ ಸಮುದಾಯಕ್ಕೆ ನ್ಯಾಯ ಕೊಡಲು ಸಾಧ್ಯವಾಗಿಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ. ಅವರು ವೇತನ ಪಡೆಯದೇ ಕೆಲಸ ಮಾಡಿದ್ದಾರೆ. ನಾವು ಹೋರಾಟ ಮುಂದುವರೆಸೋಣ. ಹೋರಾಟದ ಟೆಂಟ್‌ ಮುಂದುವರೆಯುತ್ತದೆ. ಪ್ರತಿದಿನ 50ಜನ ಇದ್ದು ಹೋರಾಟ ಮುಂದುವರೆಸೋಣ. ಬಾಬಾ ಸಾಹೇಬರು ಹೇಳಿದಂತೆ ಮಹಾತ್ಮರು ಬರುವರು, ಮಹಾತ್ಮರು ಹೋಗುವರು. ಮಂತ್ರಿಗಳು ಬಂದು ಹೋಗುವರು ಯಾರೂ ಉದ್ದಾರ ಮಾಡುವುದಿಲ್ಲ. ನಿಮ್ಮ ಉದ್ಧಾರ ನಿಮ್ಮ ಕೈಯಲ್ಲಿದೆ ಎಂದು ಹೇಳಿದ್ದಾರೆ. ಹಾಗಾಗಿ ನಮ್ಮ ಹೋರಾಟವೇ ನಮಗೆ ಹಕ್ಕು ಕೊಡಿಸುತ್ತದೆ.

ಪೂನಾ ಒಪ್ಪಂದ ಆದಾಗ ಬಾಬಾಸಾಹೇಬರು ಸೋತರೆ? ಹತಾಶರಾಗಿ ಕೈಬಿಟ್ಟರೆ? ಇಲ್ಲ ಅವರು ಹೋರಾಟ ಮುಂದುವರೆಸಿ ನಮಗೆಲ್ಲ ಮೀಸಲಾತಿ ಕೊಡಲಿಲ್ಲವೇ? ಅದೇ ರೀತಿ ಒಳಮೀಸಲಾತಿಗಾಗಿಯೂ ಯಾವ ಸರ್ಕಾರ, ಯಾವ ರಾಜಕಾರಣಿಗಳು ಮಾಡದ್ದನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಮೂಲಕ ಜಾರಿ ಮಾಡಿಸಿಕೊಂಡಿದ್ದೀವಿ. 370ಜೆ, ಒಳ ಮೀಸಲಾತಿ ಎಲ್ಲವೂ ಸಂವಿಧಾನದ ಮೂಲಕ ಜಾರಿಯಾಗಿದೆ. ಸುಪ್ರೀಂ ಕೋರ್ಟ್‌ನ ತೀರ್ಪು ಸತ್ತಿಲ್ಲ. ಅದನ್ನು ಇಟ್ಟುಕೊಂಡು ಕಾನೂನು ಹೋರಾಟ ಸಹ ಮಾಡೋಣ. 1% ಮೀಸಲಾತಿ ನಮಗೆ ಧಕ್ಕೇ ದಕ್ಕುತ್ತದೆ. ನಮ್ಮ ಪರವಾಗಿ ಪ್ರೊ.ಹರಗೋಪಾಲ್‌ ನಮ್ಮ ಹೋರಾಟಕ್ಕೆ ಬೆಂಬಲ ಘೋಷಿಸಿ ಇಲ್ಲಿಗೆ ಬರುತ್ತಿದ್ದಾರೆ. ಮೀಸಲಾತಿ ನಮ್ಮ ಭಿಕ್ಷೆಯಲ್ಲ, ಹಕ್ಕು ಎಂದು ಸಾರಿದ್ದಾರೆ. ಪ್ರೊ.ಸಾಯಿಬಾಬಾರವರು ಎಷ್ಟು ಹೋರಾಟ ಮಾಡಿದ್ದಾರೆ? ಪಾಪಾ ಅವರನ್ನು ಜೈಲಿಗೆ ಹಾಕಿದರೂ ಹೋರಾಟ ಬಿಡಲಿಲ್ಲ. ಹಾಗಾಗಿ ನಾವು ಹತಾಶರಾಗುವುದು ಬೇಡ. ನಿಮ್ಮ ಕೈಮುಗಿದು ಹೇಳುತ್ತೇನೆ, ನಿರಾಶರಾಗಬೇಡಿ, ಜೊತೆಗೂಡಿ ಹೋರಾಡೋಣ ಬನ್ನಿ.

ಅಂಬಣ್ಣ ಅರೋಲಿಕರ್‌, ಹೋರಾಟಗಾರರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಗಸ್ಟ್ 23ರಿಂದ ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು...

ಬೀದರ್‌ | ಈ ತಾಂಡಾಕ್ಕೆ ದಾರಿ ಯಾವುದಯ್ಯಾ?

ʼನಾವು ಹುಟ್ಟಿನಿಂದ ಅಲ್ಲ, ಈ ತಾಂಡಾ ಹುಟ್ಟಿನಿಂದಲೂ ರಸ್ತೆಯೇ ಕಂಡಿಲ್ಲ. ಸ್ವಲ್ಪ...

ಕರಾವಳಿಯಲ್ಲಿ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ: ಡಿಸಿಎಂ ಡಿ ಕೆ ಶಿವಕುಮಾರ್

"ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ...

ಧರ್ಮಸ್ಥಳ ಪ್ರದೇಶದಲ್ಲಿ ಮೃತದೇಹ ಹೂತು ಹಾಕಿದ ಪ್ರಕರಣ: ಸಾಕ್ಷಿ ದೂರುದಾರನ ಬಂಧನ

ಧರ್ಮಸ್ಥಳ ಪ್ರದೇಶದಲ್ಲಿ ಹಲವು ಕಡೆಗಳಲ್ಲಿ ಅಕ್ರಮವಾಗಿ ಮೃತದೇಹ ಹೂತು ಹಾಕಲಾಗಿದೆ ಎಂಬ...

Download Eedina App Android / iOS

X