ಗಡಿಭಾಗದಲ್ಲಿ ವಚನ ಸಾಹಿತ್ಯ ಮತ್ತು ಕನ್ನಡ ಭಾಷೆ ಸಂರಕ್ಷಣೆಯಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಕೊಡುಗೆ ಅನನ್ಯವಾಗಿದೆ ಎಂದು
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಅಮೃತ ಮಹೋತ್ಸವ ಸ್ವಾಗತ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ನಡೆದು ಬಂದ ದಾರಿ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ʼನಿಜಾಂನ ಆಳ್ವಿಕೆಯಲ್ಲಿ ಶತಾಯಿಷಿ ಡಾ.ಚನ್ನಬಸವ ಪಟ್ಟದ್ದೇವರು ಈ ಭಾಗದ ಜನರಿಗೆ ಕನ್ನಡ ಕಲಿಸಿ ಭಾಷೆಯ ಅಭಿಮಾನ ಮೆರೆದು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಸ್ವತಂತ್ರ ಪೂರ್ವ ಮತ್ತು ನಂತರದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಈ ಭಾಗವನ್ನು ಬೆಳಗಿಸುವ ಕೆಲಸ ಮಾಡಿದ್ದಾರೆ. ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಕೂಡ ತಮ್ಮ ಹಿರಿಯ ಪೂಜ್ಯರ ದಾರಿಯಲ್ಲಿ ನಡೆದು ಬಡವರು, ದುರ್ಬಲ ವರ್ಗದವರಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸಿ ಆದರ್ಶಪ್ರಾಯವಾಗಿದ್ದಾರೆ. ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯ ಮಾಡುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆ ತರಿಸಿದೆʼ ಎಂದರು.
ಕನ್ನಡ ಭಾಷೆ ದಯನೀಯ ಸ್ಥಿತಿಗೆ ತಲುಪಿದೆ :
ʼವಚನ ಸಾಹಿತ್ಯದಲ್ಲಿ ಅದ್ಭುತ ಶಕ್ತಿ ಅಡಗಿದೆ. ದೇವರಿಗೆ ಕನ್ನಡ ಭಾಷೆ ಕಲಿಸಿದ ಹಿರಿಮೆ 12ನೇ ಶತಮಾನದ ವಚನಕಾರರಿಗೆ ಸಲ್ಲುತ್ತದೆ. ಇಂದಿನ 21ನೆಯ ಶತಮಾನಕ್ಕೆ ವಚನ ಸಾಹಿತ್ಯ ಮಾರ್ಗದರ್ಶನವಾಗಬೇಕಿದೆ. ರಾಜ್ಯದಲ್ಲಿ ಅನ್ಯ ಭಾಷೆಗಳ ಹಾವಳಿ ಹೆಚ್ಚಿದೆ ಕನ್ನಡ ಭಾಷೆ ದಯನೀಯ ಸ್ಥಿತಿಗೆ ತಲುಪಿದೆ. ಇದು ಹೀಗೆ ಮುಂದುವರೆದರೇ ಮುಂದಿನ ಎರಡ್ಮೂರು ದಶಕಗಳಲ್ಲಿ ಕನ್ನಡ ಕೇವಲ ಮಾತನಾಡುವ ಭಾಷೆಯಾಗಿ ಉಳಿಯಲಿದೆʼ ಎಂದು ಆತಂಕ ವ್ಯಕ್ತ ಪಡಿಸಿದರು.
ʼದೇಶದಲ್ಲಿ ಇದು ವರೆಗೂ 250 ಭಾಷೆಗಳು ಅಸ್ತಿತ್ವ ಕಳೆದು ಕೊಂಡಿವೆ. ಅನ್ಯ ಭಾಷೆಗಳು ವೇಗವಾಗಿ ಬೆಳೆಯುತ್ತಿವೆ. ರಾಜ್ಯದಲ್ಲಿ ಆಂಗ್ಲ ಶಾಲೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದರಿಂದ ಕನ್ನಡ ಭಾಷೆ ಬೆಳವಣಿಗೆ ಕುಸಿಯುತ್ತಿದೆ. ಹಾಗಾಗಿ ಕನ್ನಡ ಭಾಷೆ ಉಳಿಯಬೇಕಾದರೆ ಸರಕಾರ ರಾಜ್ಯ ಶಿಕ್ಷಣ ನೀತಿ ತರುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಭಾಲ್ಕಿಯ ಪೂಜ್ಯರು ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲು ಧ್ವನಿಯೆತ್ತಬೇಕುʼ ಎಂದು ಮನವಿ ಮಾಡಿದರು.

ನವದೆಹಲಿ ಸೂರ್ಯ ಫೌಂಡೇಶನ್ ಅಧ್ಯಕ್ಷ ಅನಂತ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿಯ ಹಿರಿಯ ಸಾಹಿತಿ ಡಾ.ಕಲ್ಯಾಣರಾವ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾಣಿಕನಗರ ಮಾಣಿಕಪ್ರಭು ಸಂಸ್ಥಾನದ ಆನಂದ ಮಹಾರಾಜರು, ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ.ಗೀತಾ ಈಶ್ವರ ಖಂಡ್ರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಗುರುನಾನಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರೇಷ್ಮಾ ಕೌರ, ಹಿರಿಯ ಸಾಹಿತಿ ಜಗನ್ನಾಥ ಹೆಬ್ಬಾಳೆ ಸೇರಿದಂತೆ ಹಲವರು ಇದ್ದರು. ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ್ ನಿರೂಪಿಸಿದರು. ರಾಜು ಜುಬರೆ ವಂದಿಸಿದರು.
ಕನ್ನಡ ತಾಯಿ ಭಾಷೆಯಾದರೆ, ಇಂಗ್ಲಿಷ್ ಗೆಳತಿ ಆಗಿರಲಿ :
ಗಡಿಭಾಗದಲ್ಲಿ ಸರ್ವ ಸಮಾನತೆಯನ್ನು ಸ್ಥಾಪಿಸಲು ದಿಟ್ಟ ಹೆಜ್ಜೆಯನ್ನಿಟ್ಟ ಮಠ ಭಾಲ್ಕಿಯ ಹಿರೇಮಠ. ಇದರ ಹಿರಿಯ ಸ್ವಾಮೀಜಿ ಆಗಿರುವ ಬಸವಲಿಂಗ ಪಟ್ಟದ್ದೇವರು ಶರಣ ತತ್ವದ ಕುಸುಮ ಆಗಿದ್ದಾರೆ ಎಂದು ಸಾಹಿತಿ ಸೋಮನಾಥ ಯಾಳವಾರ ಹೇಳಿದರು
ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನಡೆದ ʼಶ್ರೀಗಳ ಜೀವನ ಸಾಧನೆʼ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಮಾಗಿದ್ದು ಬಾಗುತ್ತದೆ ಎಂಬ ಮಾತಿಗೆ ಪರಿಪೂರ್ಣ ಹೋಲಿಕೆ ಆಗುವವರು ಪಟ್ಟದ್ದೇವರು. ಓದಿದವರು ದಣಿಯುವಷ್ಟು, ತಣಿಯುವಷ್ಟು ಸಾಧನೆಯನ್ನು ಬಸವಲಿಂಗ ಪಟ್ಟದ್ದೇವರು ಮಾಡಿದ್ದಾರೆʼ ಎಂದು ತಿಳಿಸಿದರು.
ಕಲಬುರಗಿಯ ಪ್ರಗತಿಪತ ಚಿಂತಕ ಆರ್.ಕೆ,ಹುಡುಗಿ ಮಾತನಾಡಿ, ʼಮಾತೃ ಭಾಷೆಯ ಬಗ್ಗೆ ನಮಗೆ ಅಪಾರ ಗೌರವ, ಪ್ರೀತಿ ಇರಬೇಕು. ಕನ್ನಡ ಭಾಷೆ ನಮ್ಮ ತಾಯಿ ಆಗಿರಬೇಕು. ಇಂಗ್ಲಿಷ್ ನಮ್ಮ ಗೆಳತಿ ಆಗಿರಬೇಕು. ಚನ್ನಬಸವ ಪಟ್ಟದ್ದೇವರು ಇದ್ದದ್ದಕ್ಕಾಗಿಯೇ ಶ್ರಮಿಸಿದರು, ಅವರ ಪಥದಲ್ಲಿ ಬಸವಲಿಂಗ ಪಟ್ಟದ್ದೇವರು ನಮ್ಮ ಮಧ್ಯದಲ್ಲಿ ಇದ್ದಾರೆʼ ಎಂದು ತಿಳಿಸಿದರು.

ಪತ್ರಕರ್ತ ಸಿದ್ದಪ್ಪ ಮೂಲಗೆ ಮಾತನಾಡಿ, ʼಜನಮುಖಿಯಾಗಿ ಬಾಳುತ್ತಿರುವ ಕೆಲವೇ ಕೆಲವು ಮಠಾಧೀಶರಲ್ಲಿ ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಒಬ್ಬರು. ಬಸವಲಿಂಗ ಪಟ್ಟದ್ದೇವರು ಮಠದ ಆಸ್ತಿ ಕರಗಿಸದೆ, ಕಪ್ಪುಚುಕ್ಕೆ ಇಲ್ಲದೆ ಬದುಕಿರುವ ರೀತಿ ಅವರ್ಣನೀಯ. ಇವರು ಸಾಕಷ್ಟು ನೋವು, ಅಪಮಾನ, ಬಡತನವನ್ನು ಅನುಭವಿಸಿ ಮಠ ಬೆಳೆಸಿರುವ ರೀತಿ ಮಾದರಿಯಾಗಿದೆʼ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ, ದಾಸ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಾಲಾಜಿ ಅಮರವಾಡಿ ಇದ್ದರು.
ವೈದಿಕ ಆಚರಣೆ ಪರ್ಯಾಯ ಧರ್ಮ ‘ಶರಣ ಧರ್ಮ’ :
‘ಬಸವತತ್ವವನ್ನು ಎಲ್ಲೆಡೆ ಪಸರಿಲು ಪಟ್ಟದ್ದೇವರು ಮಾಡುತ್ತಿರುವ ಕಾರ್ಯ ಪ್ರಶಂಸನೀಯ. ಕನ್ನಡ ಬಾರದ ತೆಲುಗು ನಿವಾಸಿಗಳಿಗಾಗಿ ಬಸವಲಿಂಗ ಪಟ್ಟದ್ದೇವರು ಬಸವಣ್ಣನವರ ವಚನಗಳನ್ನು ಅನುವಾದಿಸುವ ಮೂಲಕ, ತಾವು ಬರೆದ ಮತ್ತು ಇತರರ ಅನೇಕ ಮೌಲಿಕ ಕೃತಿಗಳನ್ನು ತೆಲುಗು ಭಾಷೆಗೆ ಅನುವಾದಿಸುವ ಮುಖಾಂತರ ಬಸವತತ್ವವನ್ನು ಎಲ್ಲೆಡೆ ಪಸರಿಸುವ ಕಾರ್ಯ ಮಾಡುತ್ತಿದ್ದಾರೆ’ ಎಂದು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಲಿಂಗಣ್ಣ ಗೊನಾಳ ಹೇಳಿದರು.
ಬಸವತತ್ವ ಸಾರ್ವಕಾಲಿಕತೆಗೊಳಿಸುವಲ್ಲಿ ಬಸವಲಿಂಗ ಪಟ್ಟದ್ದೇವರ ಕೊಡುಗೆಯ 2ನೇ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ‘ಶರಣರ ಚಿಂತನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ನಿಟ್ಟಿನಲ್ಲಿ ಪ್ರವಚನ, ನಾಟಕ, ಬಸವ ಸಂದೇಶ ಯಾತ್ರೆಯ ಮೂಲಕ ಅವಿರತ ಪ್ರಯತ್ನ ಮಾಡುತ್ತಿರುವ ರೀತಿ ಅದ್ಭುತ’ ಎಂದರು.

ಧಾರವಾಡದ ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ ಮಾತನಾಡಿ, ‘ಬಸವಣ್ಣ ಜಾತಿ ವ್ಯವಸ್ಥೆಯನ್ನು ತೊಲಗಿಸಿ ಸಮ ಸಮಾಜವನ್ನು ನಿರ್ಮಿಸಲು ಶ್ರಮಿಸಿದ್ದ ಮಹಾನ್ ದಾರ್ಶನಿಕ. ವೈದಿಕ ಚಿಂತನೆ, ಆಚರಣೆಗಳಿಗೆ ಪರ್ಯಾಯ ಧರ್ಮವೇ ಶರಣ ಧರ್ಮ. ಲಿಂಗಾಯತ ಧರ್ಮ ಹುಟ್ಟಲೇ ಇಲ್ಲ ಎಂದು ಬಿಂಬಿಸುವ ಹುನ್ನಾರ ನಡಿಯುತ್ತಿದೆ’ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಸುಳ್ಳು ದಾಖಲೆ ಸೃಷ್ಟಿಸಿ ₹9.25 ಕೋಟಿ ತೆರಿಗೆ ವಂಚಿಸಿದ ವ್ಯಕ್ತಿ ಬಂಧನ : ಯಾಸ್ಮಿನ್ ವಾಲಿಕಾರ
ಲಾತೂರ್‌ನ ಪ್ರಗತಿಪರ ಚಿಂತಕ ರಾಜಶೇಖರ ಸೋಲಾಪೂರೆ ಉಪನ್ಯಾಸ ಮಾಡಿದರು. ಬೀದರ್ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಂ.ಜನವಾಡಕರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧಕ್ಷ ಶಂಭುಲಿಂಗ ಕಾಮಣ್ಣ, ಆದಿವಾಸಿ ಸಾಹಿತ್ಯ ಪರಿಷತ್ ಜಿಲ್ಲಾಧಕ್ಷ ವಿಜಯಕುಮಾರ ಡುಮ್ಮೆ, ಸಾಂಗ್ಲಿಯ ಸುಭಾಷ ಪಾಟೀಲ, ಉಮರ್ಗಾದ ಬಸವತತ್ವ ಪ್ರಸಾಕರು ಜವಾಹರ ಚನ್ನಶೆಟ್ಟಿ ಇದ್ದರು. ಲಕ್ಷ್ಮಣ ಮೇತ್ರೆ ನಿರೂಪಿಸಿದರು.