ನಿರ್ಲಕ್ಷ್ಯಕ್ಕೆ ಗುರಿಯಾಗಿ ದುಸ್ಥಿತಿಗೆ ಬಿದ್ದ ರಾಜ್ಯ ಹೆದ್ದಾರಿ; ಶಾಸಕರ ವಿರುದ್ಧ ಸಾರ್ವಜನಿಕರ ಆಕ್ರೋಶ

Date:

Advertisements

ಕಲಬುರಗಿ ಜಿಲ್ಲೆಯ ರಾಜ್ಯ ಹೆದ್ದಾರಿ 125, ಶಹಾಬಾದ್ ತಾಲೂಕಿನಿಂದ ಜೇವರ್ಗಿಯ ರಾಷ್ಟ್ರೀಯ ಹೆದ್ದಾರಿ 150ಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಇದೀಗ ಅದರ ದುಸ್ಥಿತಿ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜುಲೈ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಈ ಮಾರ್ಗದಲ್ಲಿ ಹಲವೆಡೆ ದೊಡ್ಡದಾದ ತಗ್ಗು ಗುಂಡಿಗಳು ನಿರ್ಮಾಣವಾಗಿದ್ದು, ಇದರಿಂದಾಗಿ ಲಾರಿ, ಟ್ರಾಕ್ಟರ್‌ಗಳು ಪಲ್ಟಿಯಾದ ಘಟನೆಯೂ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ. ಆದರೂ ಶಾಸಕರಾಗಲೀ, ಅಧಿಕಾರಿಗಳಾಗಲೀ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯೊಂದು ತೀವ್ರ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಆದರೆ, ತಾತ್ಕಾಲಿಕ ತಿದ್ದುಪಡಿಯಂತೆ ಗುಂಡಿಗಳಿಗೆ ಮಣ್ಣು ಸುರಿದು ಮುಚ್ಚಿದ್ದಾರೆ. ಇದರಿಂದ ಯಾವ ರೀತಿಯ ಪ್ರಯೋಜನ ನಿರೀಕ್ಷಿಸಲು ಸಾಧ್ಯ? ಮಳೆ ಬಿದ್ದ ತಕ್ಷಣ ಮಣ್ಣು ವಿಕ್ಷಿಪ್ತವಾಗಿ ರಸ್ತೆ ಮತ್ತೆ ಗುಂಡಿಗಳ ಗುಡ್ಡೆಗಳಾಗಿ ಮಾರ್ಪಡುತ್ತದೆ ಎನ್ನುತ್ತಾರೆ ವಾಹನ ಸವಾರರು.

ಬರೋಬ್ಬರಿ 14 ಕಿ. ಮೀಟರ್‌ ಉದ್ದವಿರುವ ಈ ಹೆದ್ದಾರಿಯು, ಇಬ್ಬರು ಶಾಸಕರ ಕಾರ್ಯ ವ್ಯಾಪ್ತಿಗೆ ಒಳಪಡುತ್ತದೆ. ಕಲಬುರಗಿ ಗ್ರಾಮಾಂತರ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮುಡ್ ವ್ಯಾಪ್ತಿಗೆ 7 ಕಿಮೀ ರಸ್ತೆ ಬಂದರೆ, ಅಫಜಲಪುರ ತಾಲೂಕಿನ ಶಾಸಕ ಎಂ ವೈ ಪಾಟೀಲ್ ವ್ಯಾಪ್ತಿಗೆ 7 ಕಿಮೀ ರಸ್ತೆ ಹಂಚಿಕೆಯಾಗಿದೆ. ಈ ಇಬ್ಬರೂ ಶಾಸಕರ ಅನಗತ್ಯ ಜಟಾಪಟಿಯ ನಡುವೆ ರಸ್ತೆ ದುರಸ್ತಿ ಕಾಣದಂತಾಗಿದೆ.

Advertisements

ಕಳೆದ ವಾರ ಸುರಿದ ಮಳೆಯಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ಉದ್ದಕ್ಕೂ ದೊಡ್ಡ ದೊಡ್ಡ ತಗ್ಗು ಗುಂಡಿಗಳು ಬಿದ್ದಿವೆ. ಇದರಿಂದ ಆಟೋ, ಬಸ್, ಟ್ರ್ಯಾಕ್ಟರ್, ಲಾರಿ ಚಾಲಕರಿಗೆ, ಬೈಕ್ ಸವಾರರಿಗೆ, ತುಂಬಾ ತೊಂದರೆ ಉಂಟಾಗುತ್ತಿದೆ. ದಿನ ನಿತ್ಯ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರ ಜಗಳಕ್ಕೆ ಕೂಸು ಬಡವಾಯಿತು ಎಂಬಂತೆ ಇಬ್ಬರು ಶಾಸಕರ ಮಧ್ಯೆ ಸಿಲುಕಿ ರಾಜ್ಯ ಹೆದ್ದಾರಿಯು ನಿರ್ವಹಣೆ ಇಲ್ಲದೆ ನೆನೆಗುದಿಗೆ ಬಿದ್ದಿದೆ. ಅಪಘಾತಗಳಿಗೆ ಆಹ್ವಾನ ನೀಡುತ್ತಿದ್ದು, ಶಹಾಬಾದ್ ಸಂಚಾರಸ್ಥರ ನರಕಯಾತನೆ ಮುಂದುವರೆದಿದೆ. ಓಟು ಕೇಳಿದವರಿ ಏಟು ಹಾಕಬೇಕೆಂದು ಶಾಸಕರ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.

WhatsApp Image 2025 08 24 at 10.15.24 AM 1

“ಗ್ರಾಮೀಣ ಪ್ರದೇಶದ ರಸ್ತೆಗಳೂ ಕೂಡಾ ಈ ರೀತಿ ಇರುವುದಿಲ್ಲ. ಅಷ್ಟೊಂದು ಕೆಟ್ಟದಾಗಿದೆ ಈ ರಸ್ತೆ. ಏನಾದರೂ ಮೆಡಿಕಲ್ ಎಮರ್ಜೆನ್ಸಿ (Medical Emergency) ಬಂದರೆ ಇಲ್ಲಿಯೇ ಪ್ರಾಣ ಬಿಡುವಂತಹ ಪರಿಸ್ಥಿತಿ ಇದೆ. ಜಿಲ್ಲಾಧಿಕಾರಿ ಕೂಡಲೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು. ಆಗುವ ಅನಾಹುತಗಳನ್ನು ತಪ್ಪಿಸಬೇಕು. ಇಲ್ಲವಾದರೆ ನೀವು ಬಂದಾಗ ಘೇರಾವ್ ಮಾಡಿ ನಿಮ್ಮ ವಿರುದ್ಧ ಘೋಷಣೆ ಕೂಗಾಬೇಕಾಗುತ್ತದೆ” ಎಂದು ಸಾರ್ವಜನಿಕರು, ಹೋರಾಟಗಾರರು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಂಚಾರಸ್ಥ ವೃದ್ದೆ ಗುಂಡಮ್ಮ ಈದಿನ.ಕಾಮ್ನೊಂದಿಗೆ ಮಾತನಾಡಿ, “ಅಧಿಕಾರಿಗಳು ಜನಪ್ರತಿನಿಧಿಗಳು ಏನು ಮಾಡುತ್ತಿದ್ದೀರಿ? ಈ ದಾರಿಯಲ್ಲಿ ಬಂದವರು ಬಿದ್ದು ಸಾಯಬೇಕಾ? ಯಾರ ಜೀವಕ್ಕೂ ಬೆಲೆಯಿಲ್ಲವೇ? ಏನಾದರೂ ಹೆಚ್ಚು ಕಡಿಮೆಯಾದರೆ ಜವಾಬ್ದಾರಿ ಹೊತ್ತುಕೊಳ್ಳುವವರು ಯಾರು? ಚುನಾವಣೆ ಬಂದಾಗ ಕೈಕಾಲು ಮುಗಿದು ಬೇಡಿಕೊಂಡು ನಮ್ಮಿಂದ ಓಟು ಹಾಕಿಸಿಕೊಂಡು ಗೆದ್ದು ಹೊರಟುಬಿಡುತ್ತೀರಿ. ಬಡವರಿಗೆ ಸರಿಯಾದ ರಸ್ತೆ ಕೂಡ ನಿಮ್ಮಿಂದ ನಿರ್ಮಾಣ ಮಾಡಲು ಸಾಧ್ಯವಾಗುವುದಿಲ್ಲವೇ? ಎಂದು ಪ್ರಶ್ನೆಸಿದರು.

ಈದಿನ.ಕಾಮ್ನೊಂದಿಗೆ ಎಐಡಿಎಸ್‌ಒ ಜಗನ್ನಾಥ ಎಸ್‌ ಹೆಚ್ ಮಾತನಾಡಿ, “ಚಿತ್ತಾಪುರದಿಂದ ಜೇವರ್ಗಿಗೆ ಹೋಗುವ ಸೆಂಟ್ರಲ್ ರಾಜ್ಯ ಹೆದ್ದಾರಿ ಇದಾಗಿದ್ದು,‌ ಇದರ ದುಸ್ಥಿತಿ ಬಗ್ಗೆ ಪ್ರಗತಿಪರ ಸಂಘಟನೆಗಳು ಮತ್ತು ಎಸ್‌ಯುಸಿಐ ಕಮ್ಯುನಿಸ್ಟ್ ಸಂಘಟನೆಯಿಂದ ಶಹಾಬಾದ್ ಪಟ್ಟಣದ ಮುಖ್ಯ ಚೌಕಗಳು ಹಾಗೂ ಹೆದ್ದಾರಿಗಳನ್ನು ಬಂದ್ ಮಾಡಿ ಅನೇಕ ಬಾರಿ ಹೋರಾಟ ಮಾಡಿದ್ದೇವೆ. ಹೋರಾಟ ಮಾಡಿದಾಗ ತಾತ್ಕಾಲಿಕ ಮುರಮ್, ಕಂಕರ್ ಹಾಕುತ್ತಾರೆಯೇ ಹೊರತು, ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಹೆಚ್‌ಕೆಆರ್‌ಡಿಬಿಯಲ್ಲಿ ಕೋಟ್ಯಂತರ ಹಣ ಇದೆ ಎದು ಹೇಳುತ್ತಾರೆ. ಹಣ ಎಲ್ಲಿಗೆ ಪೋಲಾಗುತ್ತಿದೆ?” ಎಂದ ಅವರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸಂಬಂಧಪಟ್ಟ ಶಾಸಕರು, ಜಿಲ್ಲಾಧಿಕಾರಿಗಳು ಗಮನಹರಿಸಿ ಆದಷ್ಟು ಬೇಗ ರಸ್ತೆ ದುರಸ್ತಿಗೆ ಮುಂದಾಗಬೇಕು. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಶಹಾಬಾದ್ ನಿವಾಸಿ ಶಕುಂತಲಾ ಮಾತನಾಡಿ, “ರಸ್ತೆ ಸಂಪೂರ್ಣ ಹದಗೆಟ್ಟಿದೆ. ಬಸ್‌ಗಳು, ಗಾಡಿಗಳು ಈ ರಸ್ತೆಗೆ ಬರಲು ಹಿಂದೇಟು ಹಾಕುತ್ತವೆ. ಇದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ. ಯಾರೊಬ್ಬರೂ ಜವಾಬ್ದಾರಿ ತೆಗೆದುಕೊಂಡು ರಸ್ತೆ ಸರಿಪಡಿಸುವುದಿಲ್ಲ. ಒಬ್ಬರ ಮೇಲೊಬ್ಬರು ತೋರಿಸಿ ಸುಮ್ಮನಾಗುತ್ತಾರೆ. ಈಗಲಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ರಸ್ತೆ ಕಾಮಗಾರಿ ಕೈಗೊಳ್ಳಬೇಕು. ಸಾರ್ವಜನಿಕರಿಗೆ, ವಾಹನ ಸವಾರರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು” ಎಂದರು.

ತೋನಸನಳ್ಳಿ ಗ್ರಾಮದ ನಿವಾಸಿ ಬಸವರಾಜ್ ಮಾತನಾಡಿ, “ಹತ್ತು ವರ್ಷಗಳಿಂದ ರಸ್ತೆ ದುರಸ್ತಿ ಕಂಡಿಲ್ಲ. ನಮಗೆ ಸಂಚಾರ ಮಾಡಲು ತೀರಾ ತೊಂದರೆ ಉಂಟಾಗಿದೆ. ವಾಹನ ಸವಾರಕ್ಕೆ ಬಿಡಿ, ಸಾರ್ವಜನಿಕರು ನಡೆದಾಡಲೂ ಈ ರಸ್ತೆ ಯೋಗ್ಯವಿಲ್ಲ” ಎಂದು ದೂರಿದರು.

ಸುಭಾಷ್‌ ಚಂದ್ರ ಹೂಗಾರ ಮಾತನಾಡಿ, “ಶಾಸಕರುಗಳು ಗಾಢ ನಿದ್ರೆಗೆ ಜಾರಿದ್ದಾರೆಂದು ಅನ್ನಿಸುತ್ತೆ. ರಸ್ತೆ ಸ್ಥಿತಿ ಇಷ್ಟು ಭೀಕರವಾಗಿದ್ದರೂ ಅವರಿಗೆ ಅರಿವಾಗುತ್ತಿಲ್ಲವೆ? ನಾನು ಒಬ್ಬ ರೈತ. ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಈ ರಸ್ತೆ ಮೂಲಕ ಸಂಚಾರ ಮಾಡುತ್ತೇನೆ. ಹಾಗಾಗಿ ದಯವಿಟ್ಟು ಅಧಿಕಾರಿಗಳು, ಶಾಸಕರು, ಗ್ರಾಮ ಪಂಚಾಯತಿ ಅಧಿಕಾರಿಗಳು ಈ ರಸ್ತೆ ಸರಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಮಾತನಾಡಿ, “ಈ ರಸ್ತೆ ನಿರ್ಮಾಣಕ್ಕಾಗಿ ಪ್ರಗತಿಪರ ಸಂಘನೆಗಳು ಸುತ್ತಮುತ್ತ ಹಳ್ಳಿ ಗ್ರಾಮಸ್ಥರು ಸೇರಿಕೊಂಡು ರಸ್ತೆ ತಡೆದು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದೇವೆ. ಸ್ಥಳೀಯ ಶಾಸಕರು, ಸಚಿವರು, ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಹಿಂದೆ ಮಳೆ ಬಂದಾಗ ದೊಡ್ಡ ತಗ್ಗು ಗುಂಡಿಗಳಿಗೆ ಹೆದರಿ ಸರಕಾರಿ ಬಸ್‌‌ಗಳೇ ಈ ರಸ್ತೆಗೆ ಬರುತ್ತಿರಲಿಲ್ಲ. ಹಾಗಾಗಿ ಜೇವರ್ಗಿ ತಾಲೂಕು ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು, ನೌಕರಸ್ಥರು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಾಸಕ ಬಸವರಾಜ್ ಮತ್ತಿಮುಡ್ ರಸ್ತೆ ನಿರ್ಮಾಣಕ್ಕೆ ಬಜೆಟ್ ಇಲ್ಲ ಕೆಕೆಆರ್‌ಡಿಬಿಗೆ ಲೆಟರ್ ಬರೆದಿರುವೆ ಜಿಲ್ಲಾಧಿಕಾರಿಗಳಿಗೆ ಲೆಟರ್ ಬರೆದಿರುವೆ ಎಂದು ಕುಂಟು ನೆಪ ಒಡ್ಡಿ ರಸ್ತೆ ದುರಸ್ತಿ ಮಾಡದೇ ನೆನಗುದಿಗೆ ಹಾಕಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಸ್ತೆ ವೀಕ್ಷಣೆ ಮಾಡಿ ಪರಿಸ್ಥಿತಿ ಮನಗಂಡು ಕೂಡಲೇ ರಸ್ತೆ ದುರಸ್ತಿಗೆ ಮುಂದಾಗಬೇಕು” ಎಂದು ಮನವಿ ಮಾಡಿದರು.

ಇದನ್ನೂ ಓದಿ: ಕಲಬುರಗಿ | 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಈದಿನ.ಕಾಮ್ ನೊಂದಿಗೆ ಶಾಸಕ ಬಸವರಾಜ್ ಮತ್ತಿಮುಡ್ ಮಾತನಾಡಿ, “ತಾತ್ಕಾಲಿಕ ರಸ್ತೆ ದುರಸ್ತಿ ಮಾಡಿದರೆ ಏನೂ ಪ್ರಯೋಜನವಾಗುವುದಿಲ್ಲ. ರಸ್ತೆ ಮರು ನಿರ್ಮಾಣ ಮಾಡಬೇಕು. (Reconstruction) ಅದಕ್ಕೆ 15 ರಿಂದ 20 ಕೋಟಿ ವೆಚ್ಚ ತಗಲುತ್ತದೆ. ಅಷ್ಟು ಬಜೆಟ್ ನಮ್ಮಲ್ಲಿ ಇಲ್ಲದಿರುವುದರಿಂದ ಜಿಲ್ಲಾಧಿಕಾರಿಗಳಿಗೆ ಲೆಟರ್ ಬರೆದಿರುವೆ. ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವೆ” ಎಂದು ತಿಳಿಸಿದರು.

ಅಫಜಲಪುರ ಶಾಸಕರಿಗೆ ಸಂಪರ್ಕಿಸಲಾಗಿ ಕರೆ ಸ್ವೀಕರಿಸಿರುವುದಿಲ್ಲ.

ಇದೀಗ ಸಾರ್ವಜನಿಕರ ಆಕ್ರೋಶವು ನಿಜಕ್ಕೂ ತೀವ್ರಗೊಂಡಿದ್ದು, ಶಾಶ್ವತ ಪರಿಹಾರಕ್ಕಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಜವಾಬ್ದಾರಿ ಹೊತ್ತು ಕ್ರಮ ಕೈಗೊಳ್ಳಬೇಕು. ಹೆದ್ದಾರಿ ಸಂಪರ್ಕ ಎಂದರೆ ವಾಹನ ಸಂಚಾರವಷ್ಟೆ ಅಲ್ಲ – ಅದು ಆರೋಗ್ಯ, ಶಿಕ್ಷಣ, ಆರ್ಥಿಕತೆ, ಬಾಳ್ವೆ ಎಲ್ಲಕ್ಕೂ ನೇರವಾಗಿ ಸಂಬಂಧಿಸಿದ್ದಾಗಿದೆ. ರಾಜಕೀಯ ಜಟಾಪಟಿಗೆ ಜನರ ಜೀವವನ್ನು ಬಲಿಗೆಡವಲು ಬಿಡುವುದೆಂದರೆ ಅದು ಸಮ್ಮತಿಯಾಗುವುದಿಲ್ಲ. ಸರ್ಕಾರ, ಇಲಾಖೆಗಳು ಮತ್ತು ಸಂಬಂಧಪಟ್ಟ ಶಾಸಕರು ಇನ್ನು ಹೆಚ್ಚು ತಡವಾಗುವುದಕ್ಕಿಂತ ಮುಂಚಿತವಾಗಿ ಎಚ್ಚೆತ್ತುಕೊಂಡು ಶಾಶ್ವತ ದುರಸ್ತಿ ಕಾರ್ಯ ಆರಂಭಿಸಬೇಕು ಎಂಬುದು ಜನಮನದ ಒತ್ತಾಯವಾಗಿದೆ.

WhatsApp Image 2024 11 08 at 12.18.37 667ed234 e1731048718511
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಬಸವಲಿಂಗ ಪಟ್ಟದ್ದೇವರು ಸುದೈವಿ ಮಕ್ಕಳ ಪೋಷಕರು : ನವೀಲಕುಮಾರ್ ಉತ್ಕಾರ್

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ತಮ್ಮ ಜೀವನದುದ್ದಕ್ಕೂ ಸಾಮಾಜಿಕ,...

ದಸರಾ | ಬಾನು ಮುಷ್ತಾಕ್‌ಗೆ ವಿರೋಧ; ಮಹಿಳಾ ವಿರೋಧಿಗಳ ಹಳಹಳಿಕೆ

ಕೆ ಎಸ್ ನಿಸಾರ್ ಅಹಮದ್ ಅವರು ನಾಡಹಬ್ಬ ಉದ್ಘಾಟನೆ ಮಾಡಿದಾಗ ಇವರೆಲ್ಲ...

ಕಲಬುರಗಿ | ಬೆಳೆ ಹಾನಿ: ಎಕರೆಗೆ 25 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿ ಎಐಕೆಕೆಎಂಎಸ್‌ ಪ್ರತಿಭಟನೆ

ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ನಷ್ಟಕ್ಕೆ ಕೂಡಲೇ ಪರಿಹಾರವನ್ನು ಬಿಡುಗಡೆ...

ಚಿಕ್ಕಬಳ್ಳಾಪುರ | ಮಂತ್ರಾಲಯದಲ್ಲಿ ಡಾ.ಕೈವಾರ ಶ್ರೀನಿವಾಸ್‌ರವರಿಗೆ ಕನ್ನಡಸಿರಿ ಪ್ರಶಸ್ತಿ ಪ್ರದಾನ

ಮಂತ್ರಾಲಯದ ಸದ್ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಪ್ರಪ್ರಥಮ ಅಂತಾರಾಜ್ಯ ಕನ್ನಡ...

Download Eedina App Android / iOS

X