ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು ಸಾಧ್ಯವಿಲ್ಲ. ರೈತರೇ ಕಷ್ಟಕ್ಕೆ ತಮ್ಮನ್ನು ತಾವು ಒಗ್ಗಿಸಿಕೊಳ್ಳಬೇಕು ಎಂದು ಮಹಾರಾಷ್ಟ್ರ ಕೃಷಿ ಬೆಲೆ ಆಯೋಗದ ಅಧ್ಯಕ್ಷ, ಬಿಜೆಪಿ ನಾಯಕ ಪಾಷಾ ಪಟೇಲ್ ಹೇಳಿದ್ದಾರೆ. ಈ ರೈತ ವಿರೋಧಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಟೇಲ್, “ಮರಾಠವಾಡ ಮತ್ತು ಇತರೆಡೆಗಳಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರವನ್ನು ಪಾವತಿಸಲು ಸರ್ಕಾರದಿಂದ ಸಾಧ್ಯವಿಲ್ಲ. ನಷ್ಟದ ಪ್ರಮಾಣ ಎಷ್ಟಿದೆಯೆಂದರೆ, ಯಾವುದೇ ಪ್ರಾಧಿಕಾರವು ಅವರಿಗೆ ಸಂಪೂರ್ಣವಾಗಿ ಮರುಪಾವತಿ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಸರ್ಕಾರವು ಸಹಾಯವನ್ನು ಮಾತ್ರ ನೀಡುತ್ತದೆ, ಅದು ನಷ್ಟವನ್ನು ಸರಿದೂಗಿಸಲು ಸಾಕಾಗುವುದಿಲ್ಲ. ರೈತರು ಈ ಕಷ್ಟಕ್ಕೆ ಒಗ್ಗಿಕೊಳ್ಳಬೇಕು, ತಮ್ಮ ಭವಿಷ್ಯವನ್ನು ಸಹಿಸಿಕೊಳ್ಳಬೇಕಾಗುತ್ತದೆ” ಎಂದು ಪಟೇಲ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ತುಮಕೂರು | ಬೆಳೆ ನಷ್ಟ : ಸೂಕ್ತ ಪರಿಹಾರಕ್ಕೆ ರೈತ ಸಂಘ ಒತ್ತಾಯ
“ಅತಿವೃಷ್ಟಿ, ಬರ, ಆಲಿಕಲ್ಲು ಮಳೆ ಅಥವಾ ಪ್ರವಾಹದಂತಹ ಪ್ರಕೃತಿ ವಿಕೋಪದಿಂದಾಗಿ ರೈತರು ವರ್ಷದ 365 ದಿನಗಳಲ್ಲಿ 322 ದಿನಗಳು ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ನಾವು ಪ್ರಕೃತಿಯನ್ನು ಎಷ್ಟು ಕೆಟ್ಟದಾಗಿ ಹಾನಿಗೊಳಿಸಿದ್ದೇವೆ ಎಂದರೆ ಈಗ ಅದರ ಪರಿಣಾಮಗಳನ್ನು ನಾವು ಭರಿಸಬೇಕಾಗಿದೆ. ಆದ್ದರಿಂದ ರೈತರೇ ಒಗ್ಗಿಕೊಳ್ಳಬೇಕು” ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ.
ಸದ್ಯ ಪಾಷಾ ಪಟೇಲ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ನಾಯಕನ ಹೇಳಿಕೆಗೆ ರೈತ ನಾಯಕ ರಾಜು ಶೆಟ್ಟಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, “ಕೃಷಿ ಸರಕುಗಳ ರಫ್ತು ನಿರ್ಬಂಧಿಸುವಂತಹ ಸರ್ಕಾರದ ರೈತ ವಿರೋಧಿ ನೀತಿಗಳೇ ಈ ದುಸ್ಥಿತಿಗೆ ಕಾರಣ” ಎಂದು ಹೇಳಿದ್ದಾರೆ.
365 दिवसांपैकी 332 दिवस शेतकऱ्यांना संकटाला तोंड द्यावे लागत
— Shekhar (@Shekharcoool5) August 23, 2025
आहे. त्यामुळे शेतकऱ्यांनी आता नुकसानीची सवय लावून घ्यावी असा
अजब सल्ला केंद्रीय कृषी मूल्य आयोगाचे अध्यक्ष पाशा पटेल यांनी
दिला आहे.
मग सरकारांनी मदत करायची की नाही ? pic.twitter.com/RcBpQUzWpN
“ರೈತರು ನಷ್ಟಗಳಿಗೆ ಒಗ್ಗಿಕೊಳ್ಳಬೇಕೆಂದು ಪಟೇಲ್ ಒತ್ತಾಯಿಸುತ್ತಾರೆ. ಸರ್ಕಾರವನ್ನು ಅವಲಂಬಿಸಬೇಡಿ ಎಂದು ಎಚ್ಚರಿಸುತ್ತಾರೆ. ಆದರೆ ಬೆಲೆಗಳು ಏರಿದಾಗ ರಫ್ತು ನಿಷೇಧಿಸುವುದು, ತೆರಿಗೆ ಹೆಚ್ಚಿಸುವುದು ಅಥವಾ ಈರುಳ್ಳಿ, ಹತ್ತಿ ಮತ್ತು ಸಕ್ಕರೆಯಂತಹ ಸರಕುಗಳ ಮೇಲೆ ನಿರ್ಬಂಧಗಳನ್ನು ಹೇರುವುದರ ಮೂಲಕ ರೈತರ ಪ್ರಗತಿಯನ್ನು ಕುಂಠಿತಗೊಳಿಸಲು ಸರ್ಕಾರ ವಹಿಸುತ್ತಿರುವ ಮಧ್ಯಸ್ಥಿಕೆ ಸ್ಪಷ್ಟವಾಗಿ ಗೋಚರಿಸುತ್ತದೆ” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಪಾವಗಡ | ಟೊಮ್ಯಾಟೋ ಬೆಲೆ ಕುಸಿತದಿಂದ ನಷ್ಟ; ರೈತ ದಂಪತಿ ಆತ್ಮಹತ್ಯೆ
“ಹಿಂಜರಿತದ ಸಮಯದಲ್ಲಿ ವ್ಯಾಪಾರಿಗಳು ಲಾಭ ಗಳಿಸುತ್ತಾರೆ, ಆದರೆ ರೈತರು ಲಾಭ ಪಡೆದಾಗ, ಸರ್ಕಾರವು ಲಾಭದ ಎಲ್ಲಾ ಮಾರ್ಗಗಳನ್ನು ಮುಚ್ಚುತ್ತವೆ. ಯುಎಸ್ ಒತ್ತಡದ ಅಡಿಯಲ್ಲಿ ಹತ್ತಿಯ ಮೇಲಿನ ಆಮದು ಸುಂಕವನ್ನು ಏಕೆ ಕಡಿಮೆ ಮಾಡಲಾಯಿತು? ಭಾರೀ ತೆರಿಗೆಯಿಂದಾಗಿ ಸಕ್ಕರೆ ರಫ್ತು ಏಕೆ ಕಷ್ಟವಾಗಿದೆ” ಎಂದು ರೈತ ಮುಖಂಡರು ಪ್ರಶ್ನಿಸಿದ್ದಾರೆ.
“ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ರೈತರನ್ನು ಬೆಂಬಲಿಸುವುದಿಲ್ಲ. ಆದರೆ ರೈತರು ಲಾಭ ಗಳಿಸಲು ಅವಕಾಶವಿರುವಾಗ ಅದಕ್ಕೆ ತಡೆ ನೀಡಲು ಮಧ್ಯಪ್ರವೇಶ ಮಾಡುತ್ತದೆ” ಎಂದೂ ಹೇಳಿದರು. ಹಾಗೆಯೇ ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರ್ಕಾರದ ನೀತಿಗಳನ್ನು ದೂಷಿಸಿ ಪತ್ರ ಬರೆದಿಟ್ಟು ಅಹಲ್ಯಾನಗರ ಜಿಲ್ಲೆಯ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸಹ ಶೆಟ್ಟಿ ಉಲ್ಲೇಖಿಸಿದರು.
