“ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ (ಒಳಮೀಸಲಾತಿ) ತೀರ್ಪಿನ ಕಾರಣದಿಂದಾಗಿ ನನ್ನ ಸಮುದಾಯದಿಂದಲೇ ಟೀಕೆಗೆ ಒಳಗಾದೆ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೇಳಿದ್ದಾರೆ.
ಗೋವಾ ಹೈಕೋರ್ಟ್ ಬಾರ್ ಅಸೋಸಿಯೇಷನ್ ವತಿಯಿಂದ ಶನಿವಾರ ಪಣಜಿಯಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.
“ಸ್ವಂತ ನನ್ನ ಸಮುದಾಯಕ್ಕೆ ಸೇರಿದ ಜನರಿಂದಲೇ ನಾನು ಈ ತೀರ್ಪಿ ವಿಚಾರವಾಗಿ ವ್ಯಾಪಕವಾಗಿ ಟೀಕೆಗೆ ಒಳಗಾಗಿದ್ದೇನೆ. ಆದರೆ ಜನರ ಬೇಡಿಕೆಗಳು ಅಥವಾ ಜನರ ಆಸೆಗಳ ಆಧಾರದ ಮೇಲೆ ತೀರ್ಪುಗಳನ್ನು ಬರೆಯಬಾರದು ಎಂದು ನಂಬಿದವನು ನಾನು. ಆತ್ಮಸಾಕ್ಷಿಗೆ ಅನುಗುಣವಾಗಿ, ಕಾನೂನು ಪ್ರಕಾರವಾಗಿ ತೀರ್ಪು ಬರೆಯಬೇಕೆಂದು ನಂಬಿದ್ದೇನೆ” ಎಂದಿದ್ದಾರೆ.
ಇದನ್ನೂ ಓದಿರಿ: ಅಲೆಮಾರಿಗಳ ಹಕ್ಕು ತಿರಸ್ಕರಿಸಿದ ಸಿಎಂ; ಹೋರಾಟ ತೀವ್ರಗೊಳಿಸಲು ನಿರ್ಧಾರ
2024ರ ಆಗಸ್ಟ್ 1ರಂದು ಒಳಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣದ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಕೋರ್ಟ್ ಒದಗಿಸಿತು. ತೀರ್ಪಿನ ಭಾಗವಾಗಿದ್ದ ಜಸ್ಟಿಸ್ ಗವಾಯಿಯವರು, ಕ್ರೀಮಿಲೇಯರ್ ಪ್ರಸ್ತಾಪಿಸಿದ್ದರು. ಆ ಕಾರಣಕ್ಕೆ ಟೀಕೆಗೆ ಒಳಗಾಗಿದ್ದರು. ಈ ಸಂಬಂಧ ಮಾತನಾಡಿರುವ ಅವರು, “ಒಂದು ಕುಟುಂಬಕ್ಕೆ ಸೇರಿದವರು ಮೀಸಲು ವರ್ಗದಿಂದ ಐಎಎಸ್ ಅಧಿಕಾರಿಗಳಾಗುತ್ತಾ ಹೋಗುತ್ತಾರೆ. ನಾನು ನನ್ನನ್ನು ಕೇಳಿಕೊಂಡ ಪ್ರಶ್ನೆಯೆಂದರೆ- ಮುಂಬೈ ಅಥವಾ ದೆಹಲಿಯ ಅತ್ಯುತ್ತಮ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಮಕ್ಕಳನ್ನು, ಹಳ್ಳಿಯಲ್ಲಿ ವಾಸಿಸುವ, ಜಿಲ್ಲಾ ಪರಿಷತ್ ಅಥವಾ ಗ್ರಾಮ ಪಂಚಾಯತ್ ಶಾಲೆಯಲ್ಲಿ ಶಿಕ್ಷಣ ಪಡೆಯುವ ಬಡ, ಕೃಷಿಕಾರ್ಮಿಕರ ಮಕ್ಕಳನ್ನು ಒಂದೇ ತಕ್ಕಡಿಯಲ್ಲಿ ತೂಗಬಹುದೇ ಎಂಬುದಾಗಿತ್ತು” ಎಂದು ತಿಳಿಸಿದ್ದಾರೆ.
