ಘಟಪ್ರಭಾ ನದಿ ನೀರಿನ ಹರಿವು ಇಳಿಕೆ ಕಂಡಿದ್ದರೂ ತೀರದ ಕೆಲ ಗ್ರಾಮ ಹಾಗೂ ಬಾಗಲಕೋಟೆ ತಾಲೂಕಿನ ಕೆಲ ಊರುಗಳಲ್ಲಿ ಪ್ರವಾಹ ಪರಸ್ಥಿತಿ ಮುಂದುವರಿದಿದೆ. ಕೃಷ್ಣೆಯ ಹಿನ್ನೀರಿನ ಒತ್ತಡವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಕೃಷ್ಣಾ ನದಿಗೆ 2.60 ಲಕ್ಷಕ್ಕಿಂತ ಅಧಿಕ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಬೀಳಗಿ ತಾಲೂಕಿನ ಅನಗವಾಡಿ, ಕಾತರಾಕಿ ಬಳಿ ಕೃಷ್ಣೆಯ ಹಿನ್ನೀರು ಒತ್ತುತ್ತಿರುವುದರಿಂದ ಘಟಪ್ರಭಾ ನದಿ ನೀರು ವೇಗವಾಗಿ ಮುಂದೆ ಸಾಗದೆ ಪ್ರವಾಹ ಸ್ಥಿತಿ ಯಥಾಸ್ಥಿತಿ ಮುಂದುವರಿಯಲು ಕಾರಣವಾಗುತ್ತಿದೆ.
ಯುಕೆಪಿ 3ನೇ ಹಂತದ ಯೋಜನೆಯಲ್ಲಿ ಮುಳುಗಡೆಗೆ ಗುರುತಿಸಿರುವ ಬೀಳಗಿ ತಾಲೂಕಿನ ಎಸ್ ಕೆ ಕೊಪ್ಪ, ಚಿಕ್ಕಾಲಗುಂಡಿ, ಮುಧೋಳ ತಾಲೂಕಿನ ಆಲಗುಂಡಿ ಬಿ ಕೆ, ಜನ್ನೂರು, ಮಾಚಕನೂರ, ಬುದ್ನಿ ಬಿ ಕೆ, ಚಿಕ್ಕೂರ,ಬದ್ನೋರ, ಭಂಟನೂರ, ಹೆಬ್ಬಾಳ, ಕೆ ಡಿ ಬುದ್ನಿ, ಚಿಚಖಂಡಿ, ರೋಗಿ, ಜಂಬಗಿ, ಗುಲಗಾಲ ಜಂಬಗಿ, ಮಳಲಿ ಗ್ರಾಮಗಳ ಬಳಿ ಕೃಷ್ಣಾ ಹಿನ್ನೀರು ಒತ್ತುತ್ತಿದೆ. ಇದರಿಂದ ಈ ಗ್ರಾಮಗಳಿಗೆ ನೀರು ಸುತ್ತುವರಿದಿದೆ. ಹೊಲಗಳಿಗೆ ಹೋಗುವ ಸಣ್ಣಪುಟ್ಟ ಕಾಲು ದಾರಿಗಳು ಬಂದ್ ಆಗಿವೆ. ಬೆಳಗಾವಿ ಜಿಲ್ಲೆಯಿಂದ ಘಟಪ್ರಭಾ ನದಿಗೆ 16,500 ಕ್ಯೂಸೆಕ್ ನೀರು ಹರಿದು ಬರುತ್ತದೆ. ತೀರದ ಮಿರ್ಜಿ ಬಳಿ ನೀರು ಇಳಿಮುಖವಾಗುತ್ತಾ ಸಾಗಿದೆ. 12 ಬ್ರಿಡ್ಜ್ ಕಂ ಬ್ಯಾರೇಜು ಹಾಗೂ ಕ್ಯಾದವಾಡ ಸೇತುವೆ ಜಲಾವೃತವಾಗಿರುವುದರಿಂದ ಸಂಚಾರ ಸ್ಥಗಿತವಾಗಿದೆ.
ಇದನ್ನೂ ಓದಿ: ಬಾಗಲಕೋಟೆ | ಹಲವು ಬೇಡಿಕೆ ಈಡೇರಿಸುವಂತೆ ರೈತರ ಪ್ರತಿಭಟನೆ
ಚೆನ್ನಾಳದಿಂದ ಆಲಗುಂಡಿ ಬಿ ಕೆ ವರಿಗಿನ ನದಿ ತೀರದ ಗ್ರಾಮಗಳ ಜಮೀನು, ತೋಟದ ವಸತಿ, ಮನೆಗಳು ಜಲಾವೃತವಾಗಿವೆ. ಮಿರ್ಜಿ, ನಂದಗಂವಾ, ನಾಗರಹಾಳ ಬಳಿ ಸ್ವಲ್ಪ ಮಟ್ಟಿಗೆ ನೀರು ಇಳಿಮುಖವಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಘಟಪ್ರಭಾ ನದಿಯಲ್ಲಿ ನೀರು ಇಳಿದಿದ್ದರೂ ಇದಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆಗಳು ಜಾಲವೃತವಾಗಿ ಮುಂದುವರೆದಿದೆ. ಇದೆ ರೀತಿ ನೀರು ಇಳಿಮುಖವಾದರೂ ಸೇತುವೆ ಮೇಲಿನ ಸಂಚಾರಕ್ಕೆ ಎರಡಮೂರು ದಿನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.