- ಕಾರ್ಯಕರ್ತರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಹೇಳಿಕೆ
- ‘ಸರ್ಕಾರ ಉರುಳಿಸಲು ಡಿಕೆಶಿ ಷಡ್ಯಂತ್ರ ರೂಪಿಸುತ್ತಿದ್ದಾರೆ’
ಆರೇಳು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಿ, ನಮ್ಮ ಸರ್ಕಾರ ರಚನೆಯಾಗಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಭಾನುವಾರ ರಾತ್ರಿ ವಿಜಯಪುರದಲ್ಲಿ ಏರ್ಪಡಿಸಿದ್ದ ಔತಣಕೂಟದ ಸಂದರ್ಭದಲ್ಲಿ ಅವರು ಈ ಮಾತು ಆಡಿದ್ದಾರೆ.
“ಆರೇಳು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತದೆ. ಅಲ್ಲಿಯವರೆಗೆ ಸಮಾಧಾನದಿಂದ ಇರಬೇಕು. ಅವರ ಕಾಂಗ್ರೆಸ್ ಶಾಸಕರಿಗೇ ಕೊಡುವುದಕ್ಕೆ ಅನುದಾನ ಇಲ್ಲ. ರೊಕ್ಕ ಇಲ್ಲ, ಅನುದಾನ ಕೇಳಬೇಡಿ ಎನ್ನುತ್ತಿದ್ದಾರೆ. ಅವರ ಶಾಸಕರೇ ಅಳುತ್ತಿದ್ದಾರೆ” ಎಂದರು.
“ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಸರ್ಕಾರಕ್ಕೆ ಅಸ್ಥಿರತೆ ಭಯ ಕಾಡುತ್ತಿದೆ. ಸ್ವತಃ ಡಿಕೆ ಶಿವಕುಮಾರ್ ಅವರೇ ಸರ್ಕಾರ ಉರುಳಿಸಲು ಸಿಂಗಾಪುರದಲ್ಲಿ ಷಡ್ಯಂತ್ರ ರೂಪಿಸುತ್ತಿದ್ದಾರೆ. ಗೆದ್ದವರು, ಸೋತವರು ಸೇರಿಕೊಂಡು ಸರ್ಕಾರ ಬೀಳಿಸಲು ಸಂಚು ರೂಪಿಸುತ್ತಿದ್ದಾರೆ” ಎಂದು ಹೇಳಿದರು.
ದುಡ್ಡಿಗಾಗಿ ಪೈಪೋಟಿ
ಗ್ಯಾರಂಟಿ ಯೋಜನೆಯಿಂದಾಗಿ ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ದುಡ್ಡು ಮಾಡಿಕೊಳ್ಳಲು ಪೈಪೋಟಿಗೆ ಇಳಿದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಇದು ಕೊನೆಯ ಚುನಾವಣೆಯಾಗಿದ್ದು ಅವರು ಸಾಕಷ್ಟು ದುಡ್ಡು ಮಾಡಿಕೊಳ್ಳುತ್ತಿದ್ದಾರೆ” ಎಂದು ದೂರಿದರು.
“ಲೋಕಸಭಾ ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯ ತೆಗೆದು ಸಿಎಂ ಆಗಲು ಡಿಕೆ ಶಿವಕುಮಾರ್ ಹೊರಟಿದ್ದಾರೆ. ಇವರಿಬ್ಬರ ಮಧ್ಯೆ ಶಾಸಕರು ನಮಗೇನು ಸಿಗುತ್ತಿಲ್ಲ ಅಂತ ಅಸಮಾಧಾನಗೊಂಡಿದ್ದಾರೆ. ಆಡಳಿತ ಪಕ್ಷದ ಶಾಸಕರಿಗೆ ಅನುದಾನ ಈಗ ಕೇಳಿಬೇಡಿ ಅಂತಿದ್ದಾರೆ. ಇನ್ನೂ ವಿರೋಧ ಪಕ್ಷದ ಶಾಸಕರಿಗೆ ಅನುದಾನ ಕೊಡುವುದು ದೂರದ ಮಾತು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | 2 ಗಂಟೆ 10 ನಿಮಿಷಗಳ ಕ್ರೌರ್ಯ, 3 ನಿಮಿಷಗಳ ತೋರಿಕೆಯ ಕಾರ್ಯ
ಮೋದಿಯೇ ಮುಂದಿನ ಪ್ರಧಾನಿ
“ಯಾರೇ ಏನೇ ಭವಿಷ್ಯ ನುಡಿದರೂ ಮತ್ತೆ ನರೇಂದ್ರ ಮೋದಿ ಅವರೇ ದೇಶದ ಪ್ರಧಾನಿ ಆಗುತ್ತಾರೆ. ಮೋದಿ ನೋಡಿ ಲೋಕಸಭಾ ಚುನಾವಣೆಯಲ್ಲಿ ವೋಟ್ ಹಾಕೋಣ. ವಿಜಯಪುರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ” ಎಂದು ಕಾರ್ಯಕರ್ತರಿಗೆ ಯತ್ನಾಳ್ ಕರೆ ನೀಡಿದರು.
ಹಿಂದುತ್ವ ನಿರ್ಲಕ್ಷ್ಯ ಆಯ್ತು
“ಚುನಾವಣೆಯಲ್ಲಿ ಬಿಜೆಪಿ ಸೋಲಲು ಬಹಳಷ್ಟು ಕಾರಣಗಳಿವೆ. ಅನೇಕ ತಪ್ಪು ನಿರ್ಣಯಗಳು, ಕಾಂಗ್ರೆಸ್ ಗ್ಯಾರಂಟಿ ಘೋಷಣೆ, ಬಿಜೆಪಿ ಸರ್ಕಾರದಲ್ಲಿ ಕೆಲವು ಸಚಿವರು ಮಾಡಿದ ಭ್ರಷ್ಟಾಚಾರ. ಬಿಜೆಪಿ ಸರ್ಕಾರದಲ್ಲಿ ಹಿಂದುತ್ವ ನಿರ್ಲಕ್ಷ್ಯ ಆಯ್ತು. ಇವೆಲ್ಲ ಚುನಾವಣೆಯಲ್ಲಿ ಬಿಜೆಪಿಗೆ ಪೆಟ್ಟು ಬೀಳುವಂತಾಯಿತು” ಎಂದರು.
“ಪ್ರಧಾನಿ ನರೇಂದ್ರ ಮೋದಿಯವರು ಎಷ್ಟೊಂದು ಚುನಾವಣೆ ಪ್ರಚಾರ ಮಾಡಿದರು. ನರೇಂದ್ರ ಮೋದಿ ಪ್ರಚಾರಕ್ಕೆ ಬರದಿದ್ದರೆ ಇನ್ನೂ ಚಿಂತಾಜನಕವಾಗಿ ಸೋಲುತ್ತಿದ್ದೆವು. ಈಗ ರಾಜ್ಯದಲ್ಲಿ ಬಿಜೆಪಿ 66 ಸ್ಥಾನ ಗೆಲ್ಲಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಕಾರಣ. ಮೋದಿಯವರ ಪರಿಶ್ರಮ, ಪ್ರವಾಸದಿಂದಾಗಿ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದ್ದೇವೆ” ಎಂದು ಹೇಳಿದರು.