ಬೆಂಗಳೂರು ನಗರದ ನವರಂಗ ಸರ್ಕಲ್‌ನಲ್ಲಿ ಬೆಳಿಗ್ಗೆ 11ರಿಂದಲೂ ವಾಹನ ಸಂಚಾರ ದಟ್ಟಣೆ ಉಂಟಾಗಿದ್ದು, ಸಾರ್ಜನಿಕರಿಗೆ ಅನಾನುಕೂಲವಾಗಿರುವ ಘಟನೆ ಸಂಭವಿಸಿತು. ಇದರಿಂದ ವಾಹನ ಸವಾರರು ಮತ್ತು ಪ್ರಯಾಣಿಕರು ಕೆಲಕಾಲ ಸಿಗ್ನಲ್‌ನಲ್ಲಿಯೇ ಹೈರಾಣಾದ ಪರಿಸ್ಥಿತಿ ಕಂಡುಬಂದಿತು.
ನಾಲ್ಕೂ ಕಡೆ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಒಮೊಮ್ಮೆ 15 ನಿಮಿಷಕ್ಕೂ ಅಧಿಕ ಸಮಯ ಸಂಚಾರ ದಟ್ಟಣೆ ಉಂಟಾಗಿತ್ತು. ಅಲ್ಲದೆ ಕಿಕ್ಕಿರಿದ ಜನಸಂದಣಿಯಿಂದ ವಾಹನ ಸಂಚಾರಕ್ಕೆ ಕಿರಿಕಿರಿಯಾಗಿದ್ದು, ಪ್ರಯಾಣಿಕರು ಪರದಾಡುವಂತಾಯಿತು.
ಬಿಎಂಟಿಸಿ ನಿರ್ವಾಹಕರೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬೆಳಿಗ್ಗೆಯಿಂದಲೂ ಇದೇ ರೀತಿ ಸಂಚಾರ ದಟ್ಟಣೆ ಉಂಟಾಗಿದೆ. ಅರ್ಧ ಗಂಟೆ ಸಮಯ ವ್ಯರ್ಥವಾಗುತ್ತಿದೆ. ಯಾವುದೋ ಅಂಗಡಿಯವರು ಏನೋ ಆಫರ್ ನೀಡಿದ್ದಾರೆಂಬ ಕಾರಣಕ್ಕೆ ಜನದಟ್ಟಣೆ ಉಂಟಾಗಿದೆ. ಟ್ರಾಫಿಕ್ ಪೊಲೀಸ್‌ನವರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಯಾಣಿಕರೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಅರ್ಧ ಗಂಟೆಯಿಂದ ಬಸ್‌ನಲ್ಲಿಯೇ ಕೂತಿದ್ದೇವೆ. ಯಾವುದೇ ವಾಹನಗಳು ಚಲಿಸದೆ ದಟ್ಟಣೆ ಉಂಟಾಗಿದೆ. ನಾವು ತುರ್ತಾಗಿ ಹೋಗಬೇಕಿದೆ. ಇಲ್ಲಿ ನೋಡಿದರೆ ಇಷ್ಟೊತ್ತಿನಿಂದ ಕಾಯುವಂತಹ ಪರಿಸ್ಥಿತಿ ಎದುರಾಗಿದೆ. ಇತ್ತ ಇಳಿದು ಹೋಗುವಂತೆಯೂ ಇಲ್ಲ, ಕಾದು ಕೂರುವಂತೆಯೂ ಇಲ್ಲ ಎನ್ನುವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಇಂತಹ ಸಂದರ್ಭಗಳಿದ್ದಾಗ ಹೆಚ್ಚಿನ ಟ್ರಾಫಿಕ್ ಸಿಬ್ಬಂದಿಗಳು ಕಾರ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲಿ ನೋಡಿದರೆ ಒಬ್ಬರೇ ಒಬ್ಬರು ಸಿಬ್ಬಂದಿ ಕಾಣುತ್ತಿದ್ದು, ನಿಯಂತ್ರಿಸಲು ಅಸಹಾಯಕರಾಗಿದ್ದಾರೆ. ಸಂಚಾರ ದಟ್ಟಣೆ ತಡೆಯುವಲ್ಲಿ ವಿಫಲರಾಗಿದ್ದಾರೆ” ಎಂದರು.

ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಮಲ್ಲೇಶ್ವರಂ ಟ್ರಾಫಿಕ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಮಾತನಾಡಿದ ಸಿಬ್ಬಂದಿ, “ಅಲ್ಲಿಯ ಅಂಗಡಿಯೊಂದರಲ್ಲಿ ವಸ್ತುಗಳ ಆಫರ್ ಬಿಟ್ಟಿದ್ದಾರೆಂದು ಜನಸಂದಣಿ ಉಂಟಾಗಿದೆ. ಅಂಗಡಿಯವರು ನಮ್ಮಿಂದ ಯಾವುದೇ ರೀತಿಯ ಪರ್ಮಿಷನ್ ತೆಗೆದುಕೊಂಡಿರಲಿಲ್ಲ. ಆದ ಕಾರಣ ನಮಗೆ ಜನಸಂದಣಿಯಾಗುವ ಕುರಿತು ತಿಳಿದಿರಲಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಡಿ ಕೆ ಶಿವಕುಮಾರ್ ಬಳಿಕ ಕಾಂಗ್ರೆಸ್ ಶಾಸಕ ರಂಗನಾಥ್‌ರಿಂದ ಆರ್‌ಎಸ್‌ಎಸ್ ಗೀತೆ ಗುಣಗಾನ!
“ಈಗ ನಮ್ಮ ಟ್ರಾಫಿಕ್ ಸಿಬ್ಬಂದಿ ಹಾಗೂ ಹೊಯ್ಸಳ ಪೊಲೀಸರು ಸೇರಿಕೊಂಡು ಸಂಚಾರ ತೆರವು ಕಾರ್ಯ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
ನವರಂಗ ಸರ್ಕಲ್‌ನಲ್ಲಿ ಜನದಟ್ಟಣೆ ಉಂಟಾದ ಕಾರಣ ಅಂಗಡಿಯೊಂದರ ಬಾಗಿಲನ್ನು ಮುಚ್ಚಿಸಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.