ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ದಲಿತ ಎಂಜಿನಿಯರ್ ಮೇಲೆ ಕಚೇರಿಯೊಳಗೆ ಶೂನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಜೆಪಿ ಮುಖಂಡನನ್ನು ಬಂಧಿಸಲಾಗಿದೆ. ವಿದ್ಯುತ್ ಇಲಾಖೆಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಲಾಲ್ ಸಿಂಗ್ ಅವರನ್ನು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಪೊಲೀಸರ ಪ್ರಕಾರ ಶನಿವಾರ ಈ ಘಟನೆ ನಡೆದಿದೆ. “ಮುನ್ನಾ ಬಹದ್ದೂರ್ ಎಂಬ ವ್ಯಕ್ತಿ ಕೆಲವು ಅಪರಿಚಿತ ವ್ಯಕ್ತಿಗಳೊಂದಿಗೆ ಅನುಮತಿಯಿಲ್ಲದೆ ತನ್ನ ಕಚೇರಿಗೆ ಪ್ರವೇಶಿಸಿದ್ದಾನೆ. ಬಳಿಕ ಜಾತಿ ನಿಂದನೆ ಮಾಡಿ, ನಿಂದನೀಯ ಭಾಷೆಯನ್ನು ಬಳಸಿ ಒದೆ, ಶೂನಿಂದ ಹಲ್ಲೆ ನಡೆಸಿದ್ದಾನೆ” ಎಂದು ಲಾಲ್ ಸಿಂಗ್ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಓಂವೀರ್ ಸಿಂಗ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬಹಳ ಜನ ದಲಿತರು ನನಗೆ ಬಿಜೆಪಿ ಸೇರಬೇಡಿ ಎಂದಿದ್ದರು: ಸಂಸದ ರಮೇಶ ಜಿಗಜಿಣಗಿ
ಇನ್ನು ದಾಳಿಕೋರರು ಕೆಲವು ಪ್ರಮುಖ ಫೈಲ್‌ಗಳನ್ನು ಹರಿದು ಹಾಕಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ಲಾಲ್ ಸಿಂಗ್ ಮತ್ತು ಅವರ ಕುಟುಂಬಸ್ಥರ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿಡಿಯೋವನ್ನು ಹಂಚಿಕೊಂಡಿದ್ದು, “ಅಧಿಕಾರದ ಅರ್ಥ ಹಿಂಸೆ ನೀಡುವುದಲ್ಲ” ಎಂದು ಹೇಳಿದ್ದಾರೆ.
“ಮುನ್ನಾ ಬಹದ್ದೂರ್ ಮತ್ತು ಅವರ ಜೊತೆಗಿನ ಇತರರ ವಿರುದ್ಧ ಬಿಎನ್‌ಎಸ್ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮುನ್ನಾ ಬಹದ್ದೂರ್ ಅವರನ್ನು ಬಂಧಿಸಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ. ಭಾಗಿಯಾಗಿರುವ ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
