“ಅವರು (ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್) ಆರ್‌ಎಸ್‌ಎಸ್ ಗೀತೆ ಹಾಡಬಹುದು, ಖಾಸಗಿ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಅಮಿತ್ ಶಾ ಜೊತೆಗೆ ವೇದಿಕೆ ಹಂಚಿಕೊಳ್ಳಬಹುದು, ಏನು ಬೇಕಾದರೂ ಮಾಡಬಹುದು. ನಾವು ಏನೂ ಮಾತಾಡುವಂತಿಲ್ಲ” ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿಯವರು ನಡೆಸುತ್ತಿರುವ ‘ವೋಟ್ ಚೋರಿ ಅಭಿಯಾನ’ ಸಂದರ್ಭದಲ್ಲಿ ಟೀಕೆ ಮಾಡಿ, ಸಚಿವ ಸ್ಥಾನ ಕಳೆದುಕೊಂಡಿರುವ ರಾಜಣ್ಣ, ಇಂದು ತುಮಕೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಸದನದ ಒಳಗೆ ‘ನಮಸ್ತೆ ಸದಾ ವತ್ಸಲೆ’ ಹಾಡಿ ವಿವಾದ ಮೈಮೇಲೆ ಎಳೆದುಕೊಂಡಿರುವ ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿ ಟೀಕಾಪ್ರಹಾರ ನಡೆಸಿದ್ದಾರೆ.
“ಪ್ರಯಾಗ್‌ರಾಜ್‌ನ ಗಂಗೆಯಲ್ಲಿ ಸ್ನಾನ ಮಾಡಿದ ಮಾತ್ರಕ್ಕೆ ಬಡತನ ನಿವಾರಣೆಯಾಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಇದರ ನಂತರವೂ ಡಿ.ಕೆ.ಶಿವಕುಮಾರ್ ಹೋಗಿ ಪುಣ್ಯ ಸ್ನಾನ ಮಾಡಿದರು. ಅಂಬಾನಿ ಮಗನ ಮದುವೆಯ ಆಮಂತ್ರಣವನ್ನು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಸ್ವೀಕರಿಸುವುದಿಲ್ಲ. ಅಂತಹ ಮದುವೆಗೆ ಇವರು (ಡಿಕೆಶಿ) ಕುಟುಂಬ ಸಮೇತ ಹೋಗುತ್ತಾರೆ” ಎಂದು ಕಿಡಿಕಾರಿದರು.
ಇದನ್ನೂ ಓದಿರಿ: ಅಲೆಮಾರಿಗಳ ಹಕ್ಕು ತಿರಸ್ಕರಿಸಿದ ಸಿಎಂ; ಹೋರಾಟ ತೀವ್ರಗೊಳಿಸಲು ನಿರ್ಧಾರ
“ನಾವು ಯಾವುದೇ ಶಾಸಕರ, ಮಂತ್ರಿಗಳ ಸಭೆ ಕರೆಯುವ ಹಾಗಿಲ್ಲ. ಬೇರೆಯವರು ಕರೆಯಬಹುದು, ಮಾತಾಡಬಹುದು. ಇದಕ್ಕೆಲ್ಲ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಟೀಕೆಗೆ ಗುರಿಯಾಗಿರುವ ಡಿಕೆಶಿ
ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ಭಾರೀ ಟೀಕೆಗೆ ಒಳಗಾಗಿದ್ದಾರೆ. ಸೌಜನ್ಯ ಪರ ಹೋರಾಟಗಾರ ತಿಮರೋಡಿ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಅವರು, “ನಮ್ಮ ನಾಯಕ ಬಿ.ಎಲ್. ಸಂತೋಷ್ ಅವರನ್ನು ಟೀಕಿಸಿದವನನ್ನು ಒದ್ದು ಒಳಗೆ ಹಾಕಿಸಿದ್ದೇವೆ” ಎಂದಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನು ವಹಿಸಿಕೊಂಡು ಮಾತನಾಡಿ, ವ್ಯಂಗ್ಯಕ್ಕೆ ಗುರಿಯಾಗಿದ್ದರು.
ಧರ್ಮಸ್ಥಳ ಸತ್ತ ನಡೆಯುತ್ತಿರುವ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ, ತನಿಖೆ ನಡೆಸುತ್ತಿದೆ. ಎಸ್‌ಐಟಿ ರಚನೆ ವಿರುದ್ಧ ಮಾತನಾಡಿ ಡಿ.ಕೆ.ಶಿವಕುಮಾರ್ ಸುದ್ದಿಯಲ್ಲಿದ್ದರು. ತಮ್ಮದೇ ಸರ್ಕಾರ ರಚಿಸಿರುವ ಎಸ್‌ಐಟಿ ವಿರುದ್ಧ ಮಾತನಾಡುತ್ತಿರುವುದು ಸರಿಯೇ ಎಂದು ಜನರು ಪ್ರತಿಕ್ರಿಯಿಸಿದ್ದರು.
