ಇಡೀ ದೇಶದಲ್ಲೇ ಸುಮಾರು ಒಂದು ಲಕ್ಷ ನೋಂದಾಯಿತ ವಲಸೆ ಕಾರ್ಮಿಕರಿಗೆ ನೆಲೆಯಾಗಿರುವ ಕರ್ನಾಟಕದಲ್ಲಿ ಶೇಕಡ 85ರಷ್ಟು ವಲಸಿಗರು ಕೇವಲ ಆರು ರಾಜ್ಯಗಳಿಂದ ಬಂದವರಾಗಿದ್ದಾರೆ. ಶೇಕಡ 85ರಷ್ಟು ವಲಸೆ ಕಾರ್ಮಿಕರು ಬಿಹಾರ, ಅಸ್ಸಾಂ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಿಂದ ಬಂದವರಾಗಿದ್ದಾರೆ ಎಂದು ಕಾರ್ಮಿಕ ಇಲಾಖೆಯ ದತ್ತಾಂಶವನ್ನು ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಇನ್ನು ಕಾರ್ಮಿಕರ ನಿಜವಾದ ಸಂಖ್ಯೆಯನ್ನು ನಿರ್ಧರಿಸಲು ಕಾರ್ಮಿಕ ಇಲಾಖೆಯು ಸಮೀಕ್ಷೆಯನ್ನು ನಡೆಸಿಲ್ಲವಾದರೂ, ವಿವಿಧ ಕಾನೂನುಗಳ ಅಡಿಯಲ್ಲಿ ಉದ್ಯೋಗದಾತರು ಸಲ್ಲಿಸಿದ ದತ್ತಾಂಶದಿಂದ ಅಧಿಕೃತ ಅಂಕಿಅಂಶಗಳನ್ನು ನಿರ್ಧರಿಸಲಾಗಿದೆ. ಈ ಮಾಹಿತಿ ಪ್ರಕಾರ ರಾಜ್ಯದಲ್ಲಿ 78,289 ಕಾರ್ಮಿಕರು ಅಂತರರಾಜ್ಯ ವಲಸೆ ಬಂದು ಉದ್ಯೋಗ ಮಾಡುತ್ತಿದ್ದಾರೆ.
ಇದನ್ನು ಓದಿದ್ದೀರಾ? ವಲಸೆ ಕಾರ್ಮಿಕರ ಮಕ್ಕಳ ರಕ್ಷಣೆ ಯಾರ ಹೊಣೆ?; ಅವರೂ ನಮ್ಮ ಮಕ್ಕಳಂತೆ ಅಲ್ಲವೇ?
ಇದರ ಜೊತೆಗೆ, 18,865 ಕಾರ್ಮಿಕರು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ನೋಂದಣಿ ಮಾಡಿಕೊಂಡವರು ಆರೋಗ್ಯ ರಕ್ಷಣೆ, ಮಕ್ಕಳ ಶಿಕ್ಷಣ ಮತ್ತು ಮದುವೆಗೆ ಆರ್ಥಿಕ ನೆರವು ಸೇರಿದಂತೆ ವಿವಿಧ ಕಲ್ಯಾಣ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ವರದಿಯಾಗಿದೆ.
97,154 ವಲಸಿಗರ ಪೈಕಿ ಹೆಚ್ಚಿನವರು ಬಿಹಾರ, ಅಸ್ಸಾಂ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಮೂಲದ ವಲಸಿಗರು. ಅಲ್ಲದೆ, ಈ ವಲಸೆ ಕಾರ್ಮಿಕರಲ್ಲಿ ಹೆಚ್ಚಿನವರು ಬೆಂಗಳೂರಿನಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ.
