ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಕ್ರಿಕೆಟ್ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ದಕ್ಷಿಣ ಆಫ್ರಿಕಾದ ಪ್ರೀಮಿಯರ್ ಟಿ20 ಲೀಗ್ “ಎಸ್ಎ20” ಮುಂದಿನ ಆವೃತ್ತಿಯಲ್ಲಿ ಗಂಗೂಲಿಯನ್ನು “ಪ್ರಿಟೋರಿಯಾ ಕ್ಯಾಪಿಟಲ್ಸ್” ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.
ಇದಕ್ಕೂ ಮುನ್ನ ಗಂಗೂಲಿ ಐಪಿಎಲ್ ಹಾಗೂ ಡಬ್ಲ್ಯುಪಿಎಲ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಇದರ ಜೊತೆಗೆ ಅವರು ಬಿಸಿಸಿಐ ಅಧ್ಯಕ್ಷರ ಹುದ್ದೆಯನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದರು. ಆದರೆ, ಇದೇ ಮೊದಲ ಬಾರಿಗೆ ಗಂಗೂಲಿ ವೃತ್ತಿಪರ ಕ್ರಿಕೆಟ್ ತಂಡವೊಂದಕ್ಕೆ ಪೂರ್ಣಕಾಲಿಕ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇಂಗ್ಲೆಂಡ್ನ ಮಾಜಿ ಬ್ಯಾಟ್ಸ್ಮನ್ ಜೊನಾಥನ್ ಟ್ರಾಟ್ ಕೋಚ್ ಹುದ್ದೆಯಿಂದ ಕೆಳಗಿಳಿದ ಒಂದು ದಿನದ ನಂತರ ಗಂಗೂಲಿಯವರನ್ನು ನೇಮಕ ಮಾಡಲಾಗಿದೆ. “ಕೋಲ್ಕತ್ತಾ ರಾಜಕುಮಾರರಿಗೆ ಹೊಸ ಆರಂಭ. ನಮ್ಮ ಹೊಸ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿಯನ್ನು ಘೋಷಿಸುವಲ್ಲಿ ನಮಗೆ ತುಂಬಾ ಸಂತೋಷವಾಗಿದೆ” ಎಂದು ಪ್ರಿಟೋರಿಯಾ ಕ್ಯಾಪಿಟಲ್ಸ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಕಟಿಸಿದೆ.
ಇದನ್ನು ಓದಿದ್ದೀರಾ? ಮಹಿಳಾ ವಿಶ್ವಕಪ್, ಆಸೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ
2012ರಲ್ಲಿ ಐಪಿಎಲ್ ನಿವೃತ್ತಿ ಘೋಷಿಸಿದ ನಂತರ, ಗಂಗೂಲಿ 2015ರಿಂದ 2019ರವರೆಗೆ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು. 2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸಲಹೆಗಾರರಾಗಿ ನೇಮಕಗೊಂಡ ಅವರು ಅದೇ ವರ್ಷ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2022ರವರೆಗೆ ಆ ಹುದ್ದೆ ನಿರ್ವಹಿಸಿದ ನಂತರ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿ ಕ್ರಿಕೆಟ್ ನಿರ್ದೇಶಕರಾದರು.
ಮುಂದಿನ ಎಸ್ಎ20 ಟೂರ್ನಿ ಡಿಸೆಂಬರ್ 26, 2025ರಿಂದ ಜನವರಿ 25, 2026ರವರೆಗೆ ನಡೆಯಲಿದೆ. ಪ್ಲೇಆಫ್ ಪಂದ್ಯಗಳನ್ನು ಡರ್ಬನ್, ಸೆಂಚುರಿಯನ್ ಹಾಗೂ ಜೋಹಾನ್ಸ್ಬರ್ಗ್ನಲ್ಲಿ ಆಯೋಜಿಸಲಾಗಿದ್ದು, ಅಂತಿಮ ಪಂದ್ಯ ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯಲಿದೆ.