ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಒಟ್ಟು 853 ಹುದ್ದೆಗಳ ಪೈಕಿ, 36 ಪಿಯು ಉಪನ್ಯಾಸಕರ ಹುದ್ದೆ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಈಚೆಗೆ ನಡೆದ ಮುಂಗಾರು ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಸಚಿವರು, ʼಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಮಂಜೂರಾದ ಒಟ್ಟು 2,156 ಪಿಯು ಉಪನ್ಯಾಸಕರ ಪೈಕಿ 1,303 ಭರ್ತಿಯಾಗಿದ್ದು, 853 ಹುದ್ದೆಗಳು ಖಾಲಿ ಇವೆʼ ಎಂದು ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 853 ಹುದ್ದೆಗಳ ಪೈಕಿ ವಿವಿಧ ವಿಷಯಗಳ 36 ಉಪನ್ಯಾಸಕರ ಹುದ್ದೆ ಭರ್ತಿಗೆ ಈಗಾಗಲೇ ಸರ್ಕಾರ ಅನುಮತಿ ನೀಡಿದೆ. ಕನ್ನಡ-5 ಇತಿಹಾಸ-4, ಇಂಗ್ಲಿಷ್-5, ಅರ್ಥಶಾಸ್ತ್ರ-4, ಸಮಾಜಶಾಸ್ತ್ರ-4, ವಾಣಿಜ್ಯಶಾಸ್ತ್ರ-10 ಹಾಗೂ ರಾಜ್ಯಶಾಸ್ತ್ರ-4 ವಿಷಯಗಳ ಪಿಯು ಉಪನ್ಯಾಸಕರ ಹುದ್ದೆಗೆ ನೇರ ನೇಮಕಾತಿ ನಡೆಯಲಿದೆʼ ಎಂದರು.
ʼಕಲ್ಯಾಣ ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದ ಮತ್ತು ರಾಜ್ಯ ಮಟ್ಟದ ಸ್ಥಳೀಯ ವೃಂದ ಒಳಗೊಂಡಂತೆ ಅವಶ್ಯಕವಾಗಿ ನೇಮಕಾತಿ ಮಾಡಬೇಕಾದ ನೇರ ನೇಮಕಾತಿ ಕೋಟಾದ ಒಟ್ಟು 405 ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಆರ್ಥಿಕ ಇಲಾಖೆಯ ಸಹಮತಿ ಕೋರಲಾಗಿ, ಆರ್ಥಿಕ ಇಲಾಖೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಹೊರಡಿಸಿರುವ ಸುತ್ತೋಲೆ ಹಿನ್ನೆಲೆ ನೇರ ನೇಮಕಾತಿ ಮೂಲಕ ಹುದ್ದೆಗಳ ಭರ್ತಿ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ವಿಧಿಸಿರುವ ನಿರ್ಬಂಧವನ್ನು ಹಿಂಪಡೆದು/ತೆರವುಗೊಳಿಸಿದ ಪ್ರಸ್ತಾವನೆಯನ್ನು ಸಲ್ಲಿಸಲು ತಿಳಿಸಿರುತ್ತದೆ. ಅದರಂತೆ ನೇರ ನೇಮಕಾತಿ ನಿರ್ಭಂದ ತೆರವಾದ ನಂತರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕ್ರಮವಹಿಸಲಾಗುವುದುʼ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ : ಹೆಸರಾಯಿತು ಕರ್ನಾಟಕ, ಹಸಿರಾಯಿತೆ ಬದುಕು?
ʼ2025-26ನೇ ಶೈಕ್ಷಣಿಕ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ಎದುರಾಗಿ 787 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ಕಾರ್ಯಭಾರ ಕಡಿಮೆ ಇರುವ ಉಪನ್ಯಾಸಕರನ್ನು ಅಗತ್ಯವಿರುವ ಕಾಲೇಜುಗಳಿಗೆ ನಿಯೋಜಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಿರ್ವಹಿಸಲಾಗುತ್ತಿದೆʼ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.