ಬೀಡಿ ಕಾರ್ಮಿಕರಿಗೆ ಬೀಡಿ ಕಾರ್ಡ್ ದೊರೆಯದಿರುವುದರಿಂದ ಇಎಸ್‌ಐ, ಪಿಎಫ್ ಹಾಗೂ ಯಾವುದೇ ರೀತಿಯ ಇತರ ಸೌಲಭ್ಯಗಳು ದೊರೆಯುತ್ತಿಲ್ಲ. ಕಾರ್ಮಿಕರಿಗೆ ವಸತಿ ಇಲ್ಲದಿರುವುದರಿಂದ ಕಡಿಮೆ ಆದಾಯದಲ್ಲಿ ಮನೆ ಬಾಡಿಗೆ ಕಟ್ಟುವುದು ಕಷ್ಟಕರವಾಗಿದೆ ಎಂದು ಬೀಡಿ ಕಾರ್ಮಿಕರಾದ ಶಾಹ್ ತಾಜ್ ಹಾಗೂ ಶಾಹ್ ತಾಜ್ ಉನ್ನಿಸಾ, ತರನ್ನುಮ್ ಅಳಲು ತೋಡಿಕೊಂಡರು.
ಕಾರ್ಮಿಕ ಮುಖಂಡರಾದ ರಾಘವೇಂದ್ರ ಹಾಗೂ ಜಗದೀಶ್ ನಗರಕೆರೆಯವರೊಂದಿಗೆ ಸ್ಪೂರ್ತಿ ರಾಮನಗರದ ಸ್ಪಂದನ ಸಂಸ್ಥೆಯಲ್ಲಿ ನಡೆದ ಸಂವಾದ ಸಭೆಯಲ್ಲಿ ಬೀಡಿ ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು.
“ನಾಲ್ಕೈದು ವರ್ಷಗಳಿಂದ ಮಕ್ಕಳಿಗೆ ಸ್ಕಾಲರ್‌ಶಿಪ್ ದೊರೆತಿಲ್ಲ. ಈ ಕಾರಣದಿಂದ ಅವರಿಗೆ ಶಿಕ್ಷಣ ಕೊಡಿಸುವುದು ಸಮಸ್ಯೆಯಾಗುತ್ತಿದೆ. ಮನೆಯ ಬಳಿ ಕಸದ ಗಾಡಿ ಬರುವುದಿಲ್ಲ, ರಸ್ತೆ, ಚರಂಡಿಯಂತಹ ಮೂಲಭೂತ ವ್ಯವಸ್ಥೆಯೂ ಇಲ್ಲ. ಕೂಡಲೇ ತಮ್ಮ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು” ಎಂದು ಮನವಿ ಮಾಡಿದರು.

ಕಾರ್ಮಿಕ ಮುಖಂಡ ರಾಘವೇಂದ್ರ ಮಾತನಾಡಿ, “ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಹಾಗಾದರೆ ಮಾತ್ರ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ. ಹಾಗಾಗಿ ಬೀಡಿ ಕಾರ್ಡ್ ಇಲ್ಲದ ಕಾರ್ಮಿಕರು ತಮ್ಮ ಬೀಡಿ ಮಾಲೀಕರ ಬಳಿ ಬೀಡಿ ಕಾರ್ಡ್ ಮಾಡಿಸಿಕೊಡಲು ತಿಳಿಸಬೇಕು. ಬೀಡಿ ಕಾರ್ಮಿಕರೆಲ್ಲರೂ ಸಂಘಟಿತರಾಗಬೇಕು. ಸಂಘಟಿತರಾಗುವ ಅಧಿಕಾರ ಪ್ರತಿಯೊಂದು ಕಾರ್ಮಿಕರಿಗೂ ಇದೆ. ಆದ ಕಾರಣ ಸಂಘಟಿತರಾಗಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸೋಣ” ಎಂದು ಕರೆ ನೀಡಿದರು.
“ಬೀಡಿ ಕಾರ್ಮಿಕರ ಸೆಸ್ ಕಾನೂನು ಪ್ರಕಾರ ಕಾರ್ಮಿಕರ ಕೂಲಿ ಹಣದಿಂದ ಬೋನಸ್ ಹಣವನ್ನು ಕೊಡುವಂತಿಲ್ಲ. ಬದಲಾಗಿ ಬೀಡಿ ಕಂಪನಿಯ ಸಾವಿರ ರೂಪಾಯಿ ಲಾಭಕ್ಕೆ ಪ್ರತಿಯಾಗಿ ಒಂದು ಕಾರ್ಮಿಕರಿಗೆ ಐದು ರೂಪಾಯಿಗಳಂತೆ ವಿನಿಯೋಗಿಸಿ ವರ್ಷದಲ್ಲಿ ಒಂದು ಬಾರಿ ಕಾರ್ಮಿಕರಿಗೆ ನೀಡಬೇಕು. ಇದನ್ನೂ ಕೂಡ ನೀವು ಪ್ರಶ್ನಿಸಬೇಕು. ನಿಮಗೆ ಕಾನೂನು ಮತ್ತು ಹಕ್ಕುಗಳ ಕುರಿತು ಮಾಹಿತಿ ತಿಳಿದಾಗ ಅವುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವುದರ ಮೂಲಕ ಸಮುದಾಯವನ್ನು ಮೇಲಕ್ಕೆತ್ತಲು ಪ್ರಯತ್ನಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು ಡಿಸಿಸಿ ಬ್ಯಾಂಕ್ ಚುನಾವಣೆ : ಕೆ.ಎನ್ ರಾಜಣ್ಣ ಬೆಂಬಲಿಗರ ಭರ್ಜರಿ ಗೆಲುವು
ಪ್ರಗತಿಪರ ಹೋರಾಟಗಾರ ಜಗದೀಶ್ ನಗರಕೆರೆ ಮಾತನಾಡಿ, “ಬೀಡಿ ಕಾರ್ಮಿಕರು ಒಗ್ಗಟ್ಟಾಗಿ ನಿಲ್ಲದ ಹೊರತು ಯಾವುದೇ ರೀತಿಯ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ” ಎಂದು ಸಂಘಟಿತರಾಗುವುದರ ಮೌಲ್ಯವನ್ನು ತಿಳಿಸಿದರು.
ಕಾರ್ಮಿಕರು ಕಾರ್ಯಕ್ರಮದ ಕೊನೆಯಲ್ಲಿ, “ತಮಗೆ ಬಹಳಷ್ಟು ಮಾಹಿತಿ ದೊರೆತಿದೆ ಮತ್ತು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ತಯಾರಿದ್ದೇವೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಮನಗರದ ವಿವಿಧ ವಾರ್ಡ್‌ಗಳ ನೂರಕ್ಕೂ ಹೆಚ್ಚು ಬೀಡಿ ಕಾರ್ಮಿಕರು, ಸ್ಪಂದನ ಸಂಸ್ಥೆಯ ಮಾಲಿನಿ, ಅಶ್ವಥ, ಕಾವ್ಯ, ಜಯಶ್ರೀ, ಮಹಾಲಕ್ಷ್ಮಿ, ಸುಪ್ರಿತಾ, ಮೇಘನಾ, ಕಾರ್ಮಿಕ ಮುಖಂಡರಾದ ಇಬ್ರಾಹಿಮ್ ಸೇರಿದಂತೆ ಇತರರು ಇದ್ದರು.