ವಿಜಯನಗರದ ಕೂಡ್ಲಿಗಿ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ನಗರದಲ್ಲಿ 2 ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿದ ಪರಿಣಾಮ, ಮಗು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಕಳೆದ ವಾರ ಜರುಗಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜೈ ಭೀಮ (2) ಮಗು ಮನೆಯ ಅಂಗಳದಲ್ಲಿ ಆಟ ವಾಡುತ್ತಿದ್ದ ಸಮಯದಲ್ಲಿ ಬೀದಿ ನಾಯಿ ದಿಢೀರ್ ದಾಳಿ ನಡೆಸಿದ್ದು, ಮಗುವಿನ ತಲೆ ಹಾಗೂ ಕಣ್ಣಿನ ಭಾಗದಲ್ಲಿ ಚರ್ಮ ಕಿತ್ತು ಬಂದಿದೆ. ಕೂಡಲೇ ಸ್ಥಳೀಯರು ಹಾಗೂ ಪೋಷಕರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೀದಿ ನಾಯಿಗಳ ದಾಳಿಗಳು ಆಗಾಗ ನಡೆಯುತ್ತಲೇ ಇದ್ದು, ತೀವ್ರ ಆತಂಕ ಸೃಷ್ಟಿಸಿದೆ ಎಂದು ಮಗು ತಾಯಿ ಶೃತಿ ಹೇಳಿದ್ದಾರೆ.
ಘಟನೆ ಜರುಗಿ ಮೂರು ದಿನಗಳಾದರೂ ಗಾಯದ ಸ್ಥಿತಿ ಗತಿ ಸುಧಾರಿಸಿಲ್ಲ, ನೋವು ಕಡಿಮೆಯಾಗಿಲ್ಲ. ವಿಪರೀತ ಬಾವು ಉಂಟಾಗಿದೆ. ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅಶಕ್ತರಾಗಿದ್ದು, ಹೆಚ್ಚಿನ ಚಿಕಿತ್ಸೆಯನ್ನು ಒದಗಿಸುವ ಆರ್ಥಿಕ ಶಕ್ತಿ ನನ್ನ ಬಳಿ ಇಲ್ಲ. ಗಾಯ ಗುಣಮುಖವಾಗುವವರೆಗೆ ನಿರಂತರ ಚಿಕಿತ್ಸೆ ಒಸಗಿಸಬೇಕಿದ್ದು, ಚಿಕಿತ್ಸೆ ದೊರಕಿಸುವ ಶಕ್ತಿ ತನ್ನ ಬಳಿ ಇಲ್ಲ ಎಂದು ತಾಯಿ ಶೃತಿ ಅಳಲು ತೋಡಿಕೊಂಡಿದ್ದಾರೆ.
ಗಾಯಾಳು ಮಗುವಿನ ಮನಗೆ ಜನಪ್ರತಿನಿಧಿಗಳು, ಪಪಂ ಅಧಿಕಾರಿಗಳು, ಶಾಸಕರ ಕಚೇರಿಯ ಸಿಬ್ಬಂದಿಯವರು ಶೀಘ್ರವೇ ಭೇಟಿ ನೀಡಿ, ವಸ್ತು ಸ್ಥಿತಿಯನ್ನರಿತು ಅಗತ್ಯ ನೆರವು ನೀಡಬೇಕಿದೆ ಎಂದು ವಂದೇ ಮಾತರಂ ಜಾಗೃತಿ ವೇದಿಕೆ, ಮಾದಿಗ ದಂಡೋರ ಹೋರಾಟ ಸಮತಿ, ದಲಿತ ಸಂಘರ್ಷ ಸಮಿತಿ, ಬಾಬು ಜಗ ಜೀವನ್ ರಾಮ್ ಸಂಘ, ಅಂಬೇಡ್ಕರ್ ಸಂಘ ಸೇರಿದಂತೆ ವಿವಿದ ಸಂಘಟನೆಗಳು ಒತ್ತಾಯಿಸಿವೆ.
ಇದನ್ನೂ ಓದಿ: ವಿಜಯನಗರ | ಶಂಕರರ ‘ಅನ್ಯ’ ಕಾದಂಬರಿ ಅವಲೋಕನ; ಹಂಪಿ ವಿವಿ ವಿದ್ಯಾರ್ಥಿಗಳಿಂದ ಸಂವಾದ
ಪಟ್ಟಣದ ಪ್ರತಿ ಗಲ್ಲಿಗಳಲ್ಲಿ ಹತ್ತಾರು ಬೀದಿನಾಯಿಗಳಿವೆ. ಅವು ಮಕ್ಕಳ ಮಹಿಳೆಯರ ವೃದ್ಧರ ಮೇಲೆ ದಾಳಿ ಮಾಡುತ್ತಿವೆ. ಮನೆಯಂಗಳದಲ್ಲಿ ಕಟ್ಟಿಹಾಕಿರುವ ದನಕರು ಸಾಕು ಪ್ರಾಣಿಗಳನ್ನು ಕಚ್ವುತ್ತಿವೆ, ಮಕ್ಕಳ ಮೇಲೆ ಮಾರಣಾಂತಿಕ ದಾಳಿ ಪ್ರಕರಣಗಳು ಅತೀ ಹೆಚ್ಚಾಗಿ ಜರುಗುತ್ತಿವೆ. ಆದ್ದರಿಂದ ಅಧಿಕಾರಿಗಳು ಶೀಘ್ರವೇ ಸೂಕ್ತ ಕ್ರಮವಹಿಸಬೇಕು ಎಂದು ಒತ್ತಾಯಿಸಲಾಗಿದೆ.