ನಾಡಹಬ್ಬ ಮೈಸೂರು ದಸರಾ ಉದ್ಘಾಟಿಸಲು ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ ಬೆನ್ನಲ್ಲೇ, ಸರ್ಕಾರದ ನಿಲುವನ್ನು ವಿರೋಧಿಸಿ ಮತ್ತು ಬಾನು ಅವರ ಧಾರ್ಮಿಕ ಹಿನ್ನೆಲೆಯನ್ನು ಟಾರ್ಗೆಟ್ ಮಾಡಿ ಪೋಸ್ಟ್ ಹಾಕಿದ್ದ ಇಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಕೋಮುವಾದಿ ಹೇಳಿಕೆಗಳನ್ನು ಹರಡಿದ ಆರೋಪದ ಮೇಲೆ ಉಡುಪಿ ಜಿಲ್ಲಾ ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಆರೋಪಿಗಳನ್ನು ಜಗದೀಶ್ ಉಡುಪ ಮತ್ತು ಸುದೀಪ್ ಶೆಟ್ಟಿ ನಿಟ್ಟೆ ಎಂದು ಗುರುತಿಸಲಾಗಿದೆ.
ಕೊಲ್ಲೂರಿನ ನಿವಾಸಿ ಜಗದೀಶ್ ತಮ್ಮ ಪೋಸ್ಟ್‌ನಲ್ಲಿ, “ಇದು ತಪ್ಪು, ಇದು ಒಂದು ಧರ್ಮದ ತುಷ್ಟೀಕರಣ, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ. ಸರ್ಕಾರ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಬರೆದಿದ್ದರು. ಕೊಲ್ಲೂರು ಪೊಲೀಸರು ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 353(2) (ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾರ್ಕಳ ತಾಲೂಕಿನ ನಿಟ್ಟೆಯ ಸುದೀಪ್ ಶೆಟ್ಟಿ ಎಂಬವರು, “ದಸರಾ ಹಿಂದೂಗಳ ಸಾಂಸ್ಕೃತಿಕ ಉತ್ಸವ. ಹಿಂದೂ ಸಂಪ್ರದಾಯಗಳನ್ನು ಒಪ್ಪದ ವ್ಯಕ್ತಿಯಿಂದ ದಸರಾ ಉದ್ಘಾಟಿಸಿ ಹಿಂದೂ ಭಾವನೆಗಳಿಗೆ ಸರ್ಕಾರ ಪದೇ ಪದೇ ನೋವುಂಟು ಮಾಡುತ್ತಿದೆ” ಎಂದು ಪೋಸ್ಟ್ ಮಾಡಿದ್ದರು.
ಇದನ್ನೂ ಓದಿರಿ: ನಕಲಿ ಮಾಸ್ಕ್ ಮ್ಯಾನ್ ಬಳಸಿ ಸುಳ್ಳು ಸುದ್ದಿ ಹರಡಿದ ವಿಶ್ವವಾಣಿ; ಪ್ರಕರಣ ದಾಖಲಾಗುವುದೇ?
ಕಾರ್ಕಳ ಗ್ರಾಮೀಣ ಸಬ್ ಇನ್‌ಸ್ಪೆಕ್ಟರ್ ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ಮಾಡುವಾಗ ಈ ಪೋಸ್ಟ್‌ಗಳನ್ನು ಗಮನಿಸಿದ್ದಾರೆ. ಆರೋಪಿಯ ಮೇಲೆ ಬಿಎನ್‌ಎಸ್‌ನ ಸೆಕ್ಷನ್ 353(2)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಕೀಲೆ, ಬರಹಗಾರ್ತಿ ಮತ್ತು ಹೋರಾಟಗಾರ್ತಿ ಬಾನು ಮುಷ್ತಾಕ್ ಅವರ ಅನುವಾದಿತ ಕೃತಿ ‘ಹಾರ್ಟ್ ಲ್ಯಾಂಪ್’ಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊರಕಿತ್ತು. ಈ ಹೆಗ್ಗಳಿಕೆಗೆ ಪಾತ್ರವಾದ ಕನ್ನಡದ ಮೊದಲ ಲೇಖಕಿ ಇವರಾಗಿದ್ದಾರೆ. ಕನ್ನಡದ ಕೃತಿಯೊಂದು ಜಾಗತಿಕ ಮನ್ನಣೆ ಪಡೆಯಲು ಕಾರಣರಾದ ಬಾನು ಮುಷ್ತಾಕ್ ಅವರನ್ನು ನಾಡಿನ ಸಾಂಸ್ಕೃತಿಕ ಉತ್ಸವದ ಉದ್ಘಾಟನೆಗೆ ಆಹ್ವಾನಿಸಿರುವುದನ್ನು ನಾಡಿನ ಪ್ರಜ್ಞಾವಂತ ಜನ ಸ್ವಾಗತಿಸಿದ್ದಾರೆ. ಅಲ್ಲಲ್ಲಿ ಕೋಮುವಾದಿ ಹೇಳಿಕೆಗಳು ಹೊರಬಿದ್ದಿವೆ. ಆದರೆ ಇದು ಸರ್ಕಾರ ಆಚರಿಸುವ ಹಬ್ಬ, ನಾಡಹಬ್ಬ, ಇದು ಕೇವಲ ಹಿಂದೂಗಳ ಹಬ್ಬವಲ್ಲ. ಈ ಹಿಂದೆ ನಿಸಾರ್ ಅಹಮ್ಮದ್ ಅವರು ದಸರಾವನ್ನು ಉದ್ಘಾಟಿದ್ದರು ಎಂದು ಕೋಮುವಾದಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಲಾಗುತ್ತಿದೆ.
ತಮಗೆ ಬಂದ ಆಹ್ವಾನಕ್ಕೆ ಬಾನು ಮುಷ್ತಾಕ್ ಸಂತಸ ವ್ಯಕ್ತಪಡಿಸಿದ್ದಾರೆ. “ನಮ್ಮ ತಂದೆಯವರು ಕೃಷ್ಣ ರಾಜ ಸಾಗರ ಅಣೆಕಟ್ಟೆಯಲ್ಲಿ ಸೇವೆಯಲ್ಲಿದ್ದಾಗ ನಮ್ಮ ಕುಟುಂಬದೊಂದಿಗೆ ನಾಡಹಬ್ಬ ದಸರಾ ಉತ್ಸವ ನೋಡಿದ್ದೆ” ಎಂದು ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.
“ನಾನು ಜಯಚಾಮರಾಜೇಂದ್ರ ಒಡೆಯರ್ ಅವರ ಮೆರವಣಿಗೆಯನ್ನು ನೋಡಿದ್ದೇನೆ. ಒಂದು ದಿನ ನಾನು ದಸರಾ ಉದ್ಘಾಟಿಸುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ. ದಸರಾ ಏಕತೆಯನ್ನು ಪ್ರತಿನಿಧಿಸುತ್ತದೆ. ಅಂಚಿನಲ್ಲಿರುವ ಗುಂಪುಗಳು ಮತ್ತು ಮಹಿಳೆಯರು ದಸರಾ ಉದ್ಘಾಟಿಸಲು ಮತ್ತು ಭಾಗವಹಿಸಲು ಅವಕಾಶ ನೀಡಲಾಗುತ್ತಿದೆ. ಆ ಮೂಲಕ ದಸರಾ ಅರ್ಥಪೂರ್ಣವಾಗಿದೆ” ಎಂದಿದ್ದಾರೆ.
