ಒನ್ ಟೈಮ್ ಸೆಟಲ್‌ಮೆಂಟ್ ಮೂಲಕ ಅರಣ್ಯ-ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ-ವಸತಿ ಹಕ್ಕು ಮಾನ್ಯ ಮಾಡುವ ಸಾಮಾಜಿಕ ನ್ಯಾಯಕ್ಕಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಬಳ್ಳಾರಿ ಜಿಲ್ಲಾ ಘಟಕ ಆಗ್ರಹಿಸಿತು.
ಲಕ್ಷಾಂತರ ದಲಿತ-ಹಿಂದುಳಿದ ಸಮುದಾಯಗಳಿಗೆ ಭೂಮಿ ಹಕ್ಕು ದೊರಕಿಸಿಕೊಟ್ಟ ಅಂದಿನ ಕಾಂಗ್ರೆಸ್ ಸರ್ಕಾರದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸುರವರ 110 ನೇ ಜನ್ಮದಿನೋತ್ಸವದಂದು ಪತ್ರಿಕಾಗೋಷ್ಠಿ ನಡೆಸಿ ಭೂಮಿ ವಂಚಿತರಿಗೆ ಭೂಮಿ ಮಂಜೂರು ಮಾಡುವಂತೆ ಮನವಿ ಮಾಡಲಾಯಿತು.
ರಾಜ್ಯ ಸಂಚಾಲಕ ವಸಂತ ಕಹಾಳೆ ಮಾತಾನಾಡಿ, “ಸ್ವಾತಂತ್ರ್ಯ ಪೂರ್ವದಿಂದಲೂ ಭೂಮಿಯ ಕನಸು ಕಂಡ ಅದೆಷ್ಟೋ ಜೀತಗಾರರು ಇನ್ನೊಬ್ಬರ ಭೂಮಿಯನ್ನೇ ಆಧರಿಸಿ ಗೇಣಿಯಲ್ಲೇ ಜೀವನ ಕಳೆದವರು ಒಪ್ಪತ್ತು ಊಟಕ್ಕಾಗಿ ಬದುಕು ಸವೆಸುತ್ತಿದ್ದ ಬಡ ಕೂಲಿಕಾರರ ಬದುಕಿಗೆ ತೆರೆ ಎಳೆದು ʼಉಳುವವನೇ ಭೂ ಒಡೆಯʼ ಕಾನೂನು ಜಾರಿ ಮಾಡುವ ಮೂಲಕ, ಅಂದಿನ ಜನ ಹೋರಾಟಗಳ ಒತ್ತಡದಿಂದಲೂ ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಒಂದಷ್ಟು ಭೂಮಿ ದೊರಕಿತಾದರೂ ಇನ್ನು ಅಷ್ಟೇ ಸಂಖ್ಯೆಯಲ್ಲಿ ಹಲವು ದಶಕಗಳ ಕಾಲದಿಂದಲೂ ನೆನೆಗುದಿಗೆ ಬಿದ್ದಿರುವ ಬಗರ್ ಹುಕುಂ ಸಾಗುವಳಿದಾರರ ಭೂಮಿ ಹಕ್ಕಿಗಾಗಿನ ಹೋರಾಟವು ಮುಂದುವರೆದೇ ಇದೆ. ಆಗ ಭೂಮಿಗಳ ಒಡೆತನ ಭೂಮಾಲೀಕರದ್ದಾಗಿತ್ತು. ಈಗ *ಬಗರ್ ಹುಕುಂ ಸಾಗುವಳಿದಾರರ ಮಾಲೀಕರು ಸರಕಾರವಾಗಿದೆ. ಈಗಲೂ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ. ಭೂ ಒಡೆಯರು ಬದಲಾಗಿದ್ದಾರೆ. ಬಡವರಿಗೆ ಭೂಮಿ ಎಂದರೆ ನೂರೆಂಟು ಕಥೆ ಕಟ್ಟುವ ಸರಕಾರ ಕಾರ್ಪೋರೇಟ್ ಕಂಪನಿಗಳಿಗೆ ಯಾವ ನೀತಿಯೂ ಇಲ್ಲದಂತೆ ಕಂಡಲ್ಲಿ, ಕೇಳಿದಲ್ಲಿ ಭೂಮಿ ನೀಡುವ ಕಾನೂನು ಜಾರಿ ಮಾಡುತ್ತಿದೆ. ಕೇಂದ್ರದ ಮೋದಿ ಸರ್ಕಾರ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಭೂಮಿ ವಿಚಾರದಲ್ಲಿ ಅತ್ಯಂತ ಜನ ವಿರೋಧಿಯಾಗಿ ಕಾರ್ಪೋರೇಟ್ ಪರವಾಗಿ ಟೊಂಕ ಕಟ್ಟಿ ನಿಂತು ರೈತ ಸಮೂಹವನ್ನೇ ನಾಶ ಮಾಡಲು ಹೊರಟಿದೆ. ಹಿಂದೆ ಇದ್ದ ಜನಕಲ್ಯಾಣದ ನೀತಿಯಿಂದ ಹಿಂದೆ ಸರಿದಿರುವ ಸರಕಾರಗಳು ಕುಂಟು ನೆಪಗಳನ್ನು ಹೇಳುತ್ತಾ ಬಡ ಜನರ ಭೂಮಿಯ ಕನಸಿಗೆ ತಣ್ಣೀರೆರಚುತ್ತಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ಸರಕಾರದ ಲೆಕ್ಕದಲ್ಲೇ 33 ಲಕ್ಷಕ್ಕೂ ಹೆಚ್ಚು ಅಕ್ರಮ ಸಕ್ರಮ ಅರ್ಜಿಗಳಿದ್ದು, ಇದರಲ್ಲಿ ಶೇ.90ರಷ್ಟು ಜನರಿಗೆ ಅರ್ಜಿಗಳ ವಿಲೇವಾರಿ ಹೆಸರಲ್ಲಿ ತಿರಸ್ಕರಿಸಲಾಗಿದೆ. ಅಂದರೆ ಭೂಮಿಯನ್ನು ಕೊಡುವುದಕ್ಕೆ ಭೂ ಕಾಯ್ದೆಯನ್ವಯ ಕಾನೂನು ತೊಡಕುಗಳಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕೊಡಬೇಕಾದ ಭೂಮಿಗಳನ್ನೂ ಕೊಡುತ್ತಿಲ್ಲ. ಹಿಂದೆ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಲಕ್ಷಾಂತರ ಜನರಿಗೆ ಜೀವನದ ಆಸರೆ ನೀಡಿದ ಸರಕಾರ ಇಂದು ಕಾನೂನುಗಳನ್ನು ಮುಂದೆ ಮಾಡಿ ಬಗರ್ ಹುಕುಂ ಸಾಗುವಳಿದಾರರ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ” ಎಂದರು.
ಇದನ್ನೂ ಓದಿ: ಬಳ್ಳಾರಿ | ಸಮರ್ಪಕ ರಸಗೊಬ್ಬರ ಪೂರೈಕೆಗೆ ಪ್ರಾಂತ ರೈತ ಸಂಘ ಆಗ್ರಹ
“ರಾಜ್ಯದಲ್ಲಿ ಕೆಲ ಭಾಗಗಳಲ್ಲಂತೂ ಬ್ರಿಟೀಷರ ಕಾನೂನುಗಳ ಮಾನದಂಡವನ್ನೇ ಪಾಲಿಸಲಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆಯಿದ್ದರೂ ಅದನ್ನು ಜಾರಿ ಮಾಡದೆ ಅರಣ್ಯ ಅಧಿಕಾರಿಗಳು ಪರಿಸರದ ಹೆಸರಲ್ಲಿ ಜನರಲ್ಲಿ ಅರಣ್ಯ ಎಂದರೆ ಮಾರುವ ಓಡಿ ಹೋಗುವ ಗುಮ್ಮನನ್ನಾಗಿ ಮಾಡಿ ಅರಣ್ಯ ಹಕ್ಕು ಕಾಯ್ದೆ ಅನ್ವಯ ಆದಿವಾಸಿಗಳಿಗೆ ಇನ್ನಿತರೆ ಜನ ಸಮುದಾಯಗಳಿಗೆ ಸಂವಿಧಾನ ಬದ್ಧ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಕಾನೂನು ಬದ್ಧವಾಗಿರುವ ಆರಣ್ಯ ಹಕ್ಕು ಕಾಯ್ದೆಯನ್ನು ನಿರ್ಜೀವಗೊಳಿಸಲಾಗುತ್ತಿದೆ” ಎಂದು ಅಸಹನೆ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಧನಂಜಯ ಕೆಎಮ್‌ಆರ್‌ವಿ, ಎ ಎಸ್ ಯಲ್ಲಪ್ಪ, ಎಸ್ ಬಸವರಾಜಯ್ಯ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಜಿಲ್ಲಾ ಸಮಿತಿ ಹಾಗೂ ಇತರರು ಉಪಸ್ಥಿತರಿದ್ದರು.