ಕರ್ನಾಟಕದ ನಾಡಹಬ್ಬವೆಂದೇ ಪ್ರಸಿದ್ಧವಾಗಿರುವ ಮೈಸೂರು ದಸರಾ ಮಹೋತ್ಸವದ ಈ ಬಾರಿಯ ಉದ್ಘಾಟನೆಗೆ ಖ್ಯಾತ ಕನ್ನಡ ಲೇಖಕಿ ಮತ್ತು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವ ನಿರ್ಧಾರವನ್ನು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಸ್ವಾಗತಿಸಿದ್ದಾರೆ.
ಕೊಡಗಿನ ವಿರಾಜಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾನು ಮುಷ್ತಾಕ್ ಅವರು ಪ್ರಸಿದ್ಧ ಬರಹಗಾರ್ತಿ ಮತ್ತು ಸಾಮಾಜಿಕ ಹೋರಾಟಗಾರ್ತಿ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮುಸ್ಲಿಂ ಸಮುದಾಯದ ಮಹಿಳೆಯರ ಹಕ್ಕುಗಳಿಗಾಗಿ, ಸಮಾನತೆಗಾಗಿ ಮತ್ತು ಮಸೀದಿಗಳಲ್ಲಿ ಮಹಿಳೆಯರ ಪ್ರವೇಶಕ್ಕಾಗಿ ಹೋರಾಡಿ ಸಾಮಾಜಿಕ ಬಹಿಷ್ಕಾರವನ್ನೂ ಎದುರಿಸಿದ್ದಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಲೆಮಾರಿ ಸಮುದಾಯಗಳಿಗೆ ಅನ್ಯಾಯ – ಜಾತಿಗಣತಿಯ ಮೇಲೂ ಕರಿನೆರಳು: ರಾಹುಲ್ ಗಾಂಧಿ ಗಮನಿಸುವರೇ?
ಇನ್ನೂ ಈ ಬಗ್ಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಯಾವುದೇ ಧಾರ್ಮಿಕ ಪೂಜೆ ಇರಲಾರದು ಎಂದು ಯದುವೀರ್ ಸ್ಪಷ್ಟಪಡಿಸಿದ್ದಾರೆ.
“ದಸರಾ ಸರ್ಕಾರಕ್ಕೆ ಒಂದು ಸಾಂಸ್ಕೃತಿಕ ಉತ್ಸವ. ಇದು ಜಾತ್ಯತೀತ ವ್ಯವಸ್ಥೆಯಾಗಿದ್ದು, ಪೂಜೆಗಳನ್ನು ನಾವು ವೈಯಕ್ತಿಕವಾಗಿ ಮನೆಯಲ್ಲಿ ಮಾಡಿಕೊಳ್ಳುತ್ತೇವೆ. ಬಾನು ಮುಷ್ತಾಕ್ ಅವರ ಆಯ್ಕೆಯ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ” ಎಂದು ಅವರು ಹೇಳಿದ್ದಾರೆ.
