ಕೋಲಾರ ತಾಲೂಕಿನ ನರಸಾಪುರ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗೆ ಕಾನೂನು ಬಾಹಿರವಾಗಿ ಜಾಗ ಅತಿಕ್ರಮಣ ಮಾಡಿಕೊಂಡಿದ್ದಾರೆ. ಲೋಕೋಪಯೋಗಿ, ತಾಪಂ ಇಒ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೇ ಕಟ್ಟಡದ ಖಾತೆ ರದ್ದು ಮಾಡಿದ್ದಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಿಯಮಬದ್ಧವಾಗಿ ನೋಟಿಸ್ ನೀಡಿ ಪರಿಹಾರ ನೀಡಿ ಖಾಸಗಿ ಸ್ವತ್ತು ತೆಗೆದುಕೊಳ್ಳಬೇಕು. ಆದರೆ, ಅಧಿಕಾರಿಗಳು ಸರ್ವಾಧಿಕಾರಿ ವರ್ತನೆ ತೋರಿದ್ದಾರೆ. ರಸ್ತೆ ಯೋಜನೆಗೆ ನಿಯಮಾನುಸಾರ ಜಾಗ ತೆಗೆದುಕೊಂಡಿಲ್ಲ. ಕಾನೂನು ಕೂಡ ಲೆಕ್ಕಿಸಿಲ್ಲ. ಖಾಸಗಿ ಆಸ್ತಿ ಹಕ್ಕುಗಳಿಗೆ ನ್ಯಾಯ ಒದಗಿಸದೆ ಜಾಗ ತೆಗೆದುಕೊಂಡಿದ್ದಾರೆ. ಜನಪ್ರತಿನಿಧಿಗಳನ್ನು ದಿಕ್ಕು ತಪ್ಪಿಸಿ ದೌರ್ಜನ್ಯ ಎಸಗುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಅಭಿವೃದ್ಧಿಯನ್ನು ನಾವು ವಿರೋಧಿಸುವುದಿಲ್ಲ. ಆದರೆ, ನರಸಾಪುರ ರಸ್ತೆ ವಿಸ್ತರಣೆ ಕಾಮಗಾರಿಯೇ ನಿಯಮ ಬಾಹಿರವಾಗಿದೆ. ಖಾಸಗಿ ಸ್ವತ್ತುಗಳ ಹಿತಾಸಕ್ತಿಗೆ ಧಕ್ಕೆಯಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿಯಮ ಉಲ್ಲಂಘಿಸಿದ್ದಾರೆ. ಅಳತೆ ಕಾರ್ಯವನ್ನು ನಿಯಮಾನುಸಾರ ಖಾಲಿ ಇರುವ ಗ್ರಾಮ ಠಾಣಾ ಗಡಿಯಿಂದ ಸರ್ಕಾರಿ ಜಾಗದಲ್ಲಿ ಉತ್ತರ ದಿಕ್ಕಿನಿಂದ ಅಳತೆ ಮಾಡಿ ಜಾಗ ಗುರುತಿಸಬೇಕಿತ್ತು. ರಸ್ತೆ ವಿಸ್ತರಣೆ ಕಾರ್ಯವನ್ನು ಉತ್ತರ ದಿಕ್ಕಿನಲ್ಲಿರುವ ಸರ್ಕಾರಿ ಖಾಲಿ ಜಾಗದಿಂದ ತೆಗೆದುಕೊಂಡು ದಕ್ಷಿಣ ದಿಕ್ಕಿಗೆ ರಸ್ತೆ ವಿಸ್ತರಣೆ ಮಾಡಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ದಕ್ಷಿಣ ದಿಕ್ಕಿನಲ್ಲಿ ಗ್ರಾಮದ ಕಡೆಯಿಂದ ಈಗಾಗಲೇ ಕಟ್ಟಡ ಅಭಿವೃದ್ಧಿಪಡಿಸಿರುವ ಹಾಗೂ ಖಾಲಿ ನಿವೇಶನಗಳು ಇರುವಂಥ ಜಾಗದಿಂದ ಅಳತೆ ಮಾಡಿದ್ದಾರೆ” ಎಂದು ದೂರಿದರು.
“ಗ್ರಾಮ ಪಂಚಾಯಿತಿಯವರು ಸಾರ್ವಜನಿಕರಿಂದ ಆಧಾರ ರಹಿತ ಅರ್ಜಿಗೆ ಮಾನ್ಯತೆ ನೀಡಿ ಕಾನೂನು ಬಾಹಿರವಾಗಿ, ಒತ್ತುವರಿ ಹೆಸರಿನಲ್ಲಿ ಖಾತೆಯನ್ನೇ ರದ್ದು ಮಾಡಲು ಹೊರಟಿದ್ದಾರೆ. ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಯಾವುದೇ ಉತ್ತರ ನೀಡುತ್ತಿಲ್ಲ. ಹಿಂದೆ ಗ್ರಾಮ ಪಂಚಾಯತಿಯಲ್ಲಿ ತೆಗೆದುಕೊಂಡಿರುವ ನಿರ್ಣಯವು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ಈ ಸಂಬಂಧ ನ್ಯಾಯಾಲಯ ಮೊರೆ ಕೂಡ ಹೋಗಿದ್ದು, ತಡೆಯಾಜ್ಞೆ ಲಭಿಸಿದೆ. ಸುಮಾರು 1971ರಿಂದ ದಾಖಲೆಗಳು ನಮ್ಮದಾಗಿದ್ದು, ಕ್ರಯ ಪತ್ರ, ಇ ಸ್ವತ್ತು ಸೇರಿದಂತ ಎಲ್ಲಾ ದಾಖಲೆಗಳು ನಮ್ಮ ಹೆಸರಿನಲ್ಲಿದೆ. ತಾಲ್ಲೂಕು ಪಂಚಾಯಿತಿ, ಕಾರ್ಯ ನಿರ್ವಹಣಾಧಿಕಾರಿ, ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಇದರ ಬಗ್ಗೆ ಹಲವಾರು ಬಾರಿ ಮನವರಿಕೆ ಮಾಡಿದ್ದರೂ ಯಾರದ್ದೋ ಒತ್ತಡದಿಂದ ನಮ್ಮ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: ಕೋಲಾರ | 9 ತಿಂಗಳಿನಿಂದ ವೇತನ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹೊರಗುತ್ತಿಗೆ ಕಾರ್ಮಿಕರು
ಈ ಸಂದರ್ಭದಲ್ಲಿ ಜಾಗ ಕಳೆದುಕೊಂಡ ಬತ್ತುನ್ನೀಸಾ ಮಾತನಾಡಿ, “ಸುಮಾರು 1936ರಿಂದ ನಮ್ಮ ಜಾಗದ ಮೂಲ ದಾಖಲೆಗಳು ಇದ್ದು ಅಂದಿನಿಂದಲೂ ಸರ್ಕಾರಕ್ಕೆ ಕಂದಾಯವನ್ನು ಪಾವತಿಸಿದ್ದೇವೆ. ಆದರೆ, ಇವತ್ತು ಏಕಾಏಕಿ ಖಾತೆಯನ್ನು ರದ್ದು ಮಾಡಿ ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ” ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜೇಶ್ವರಿ ಅವರೊಂದಿಗೆ ನೂರುಲ್ಲಾ ಷರೀಫ್ ಇದ್ದರು.