ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಯುವಕನೋರ್ವ ಯುವತಿಗೆ ಗುಂಡಿಕ್ಕಿ ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ. ಖಾಸಗಿ ಅತಿಥಿಗೃಹದಲ್ಲಿ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ.
ಆರೋಪಿಯನ್ನು ಜಾಕಿ ನಾಟ್ ಎಂದು ಗುರುತಿಸಲಾಗಿದ್ದು, ಕಾಜಲ್ ಕುಮಾರಿ ಎಂಬ ಯುವತಿಯನ್ನು ಕೊಂದಿದ್ದಾನೆ. ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಕಾಜಲ್ ಮದುವೆಯಾಗಲು ನಿರಾಕರಿಸಿದ್ದಳು. ಆದರೆ ಯುವಕ ಆಕೆಯನ್ನು ಕೊಂದಿದ್ದಾನೆ ಎಂದು ತಾಯಿ ದೂರಿದ್ದಾರೆ.
ಇದನ್ನು ಓದಿದ್ದೀರಾ? ಹಾಸನ | ಮದುವೆಗೆ ನಿರಾಕರಿಸಿದ ಪ್ರೇಯಸಿ; ವಿಷಸೇವಿಸಿ ಯುವಕ ಆತ್ಮಹತ್ಯೆ
“ಕಾಜಲ್ ಕುಮಾರಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ಸಾವಿಗೆ ಕೆಲವು ಗಂಟೆಗಳ ಮೊದಲು, ಕಾಜಲ್ ಮಾರುಕಟ್ಟೆಗೆ ಹೋಗಿದ್ದಳು. ನಂತರ ಹೋಟೆಲ್ ಒಂದರಲ್ಲಿ ನನ್ನ ಮಗಳ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿದೆ ಎಂದು ಬಲ್ಲಿಯಾ ಮೂಲದ ವ್ಯಕ್ತಿಯೊಬ್ಬರು ನನಗೆ ತಿಳಿಸಿದರು” ಎಂದು ತಾಯಿ ದೂರಿನಲ್ಲಿ ಹೇಳಿದ್ದಾರೆ.
“ಅವಳು ನನ್ನವಳಾಗಲು ಸಾಧ್ಯವಾಗದಿದ್ದರೆ, ಬೇರೆ ಯಾರೊಂದಿಗೂ ಇರಬಾರದು ಎಂದು ಆತ ಹೇಳುತ್ತಿದ್ದ. ಆತನೇ ಕೊಂದಿದ್ದಾನೆ” ಎಂದು ತಾಯಿ ಆರೋಪಿಸಿದ್ದಾರೆ. ಆದರೆ ಜಾಕಿಯ ತಂದೆ ಪರಾಸ್ ನಾಟ್ ಮಾತ್ರ ಇದರ ಹಿಂದೆ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ.
ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (SDPO) ದಿಲೀಪ್ ಕುಮಾರ್ ಸ್ಥಳಕ್ಕೆ ತಲುಪಿ ಸ್ಥಳ ಪರಿಶೀಲಿಸಿದ್ದಾರೆ. ಪೊಲೀಸರು ಪಿಸ್ತೂಲು ಮತ್ತು ಶೆಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ, ಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.
