ವಚನಯಾನ | ಶರಣ ಧರ್ಮದ ನೈತಿಕ ಮೌಲ್ಯಗಳು

Date:

Advertisements

ಹೊನ್ನು, ಹೆಣ್ಣು, ಮಣ್ಣನ್ನು ಮಾಯೆ ಎಂದು ಕರೆದವರು ಆಧರಿಸುವ ಹಾಗೂ ಪುಣ್ಯ ಕತೆಗಳೆಂದು ನಂಬಿರುವ ಎಲ್ಲಾ ಪುರಾಣಗಳ ಕಥಾವಸ್ತುವು ಹೊನ್ನು, ಹೆಣ್ಣು ಮತ್ತು ಮಣ್ಣಿಗಾಗಿ ಮಡಿದವರ ಕುರಿತೇ ಇದೆ. ಶರಣರು ಹೊನ್ನು, ಹೆಣ್ಣು, ಮಣ್ಣನ್ನು ಮಾಯೆ ಎಂದು ಕರೆಯಲಿಲ್ಲ. ಈ ಮೂರೂ ವಸ್ತುಗಳು ಬೇಕೇಬೇಕು ಎನ್ನುವ ಮನುಷ್ಯನ ಮನಸ್ಸಿನ ಮುಂದಿರುವ ದುರಾಸೆಯೆ ಮಾಯೆ ಎನ್ನುತ್ತಾರೆ. ಅದನ್ನೆ ಬುದ್ದಗುರು ಶರಣರಿಗಿಂತ ಬಹು ಪೂರ್ವದಲ್ಲಿ ‘ಆಸೆಯೆ ದುಃಖಕ್ಕೆ ಮೂಲ’ ಎನ್ನುತ್ತಾರೆ. ಶರಣರು ಕಣ್ಣಿಗೆ ಕಾಣುವ ಜಗತ್ತನ್ನು ಸತ್ಯವೆನ್ನುತ್ತಾರೆ.

ವೈದಿಕ ದಾರ್ಶನಿಕರು ಹೊನ್ನು, ಹೆಣ್ಣು ಹಾಗು ಮಣ್ಣನ್ನು ಮಾಯೆ ಎಂದು ಕರೆದಿದ್ದಾರೆ. ಜಗತ್ತು ಕಣ್ಣಿಗೆ ಕಾಣುವ ಸತ್ಯ. ಆ ಸತ್ಯವನ್ನು ಶಂಕರಾಚಾರ್ಯ ಮಿಥ್ಯವೆಂದು ಹಾಗೂ ಕಣ್ಣಿಗೆ ಕಾಣದ ಬ್ರಹ್ಮನನ್ನು ಸತ್ಯವೆಂದೂ ಕರೆದಿದ್ದಾನೆ. ವೈದಿಕತೆ ಎನ್ನುವುದು ಈ ನೆಲದ ಅತಿ ದೊಡ್ಡ ಮಿಥ್ಯ ಎನ್ನುವ ಸತ್ಯ ಜನತೆಗೆ ಯಾವಾಗ ಅರ್ಥವಾಗುವುದೊ ಆ ಶಂಕರನ ಬ್ರಹ್ಮನೇ ಬಲ್ಲ. ಪಾಪ, ಪುಣ್ಯ, ಸ್ವರ್ಗ, ನರಕ, ಪುನರ್ಜನ್ಮ ಮುಂತಾದ ಮಿಥ್ಯಗಳ ಮೂಲಕ ಈ ನೆಲದ ಮುಗ್ದ ಜನರ ಮನಸ್ಸಿನಲ್ಲಿ ಭಯವನ್ನು ಬಿತ್ತಿ ತಮ್ಮ ನಿರಾಯಾಸದ ಬದುಕನ್ನು ವೈದಿಕರು ಅಭಾದಿತ ಮಾಡಿಕೊಂಡಿದ್ದಾರೆ. ಹೊನ್ನು, ಹೆಣ್ಣು, ಮಣ್ಣನ್ನು ಮಾಯೆ ಎಂದು ಕರೆದವರು ಆಧರಿಸುವ ಹಾಗೂ ಪುಣ್ಯ ಕತೆಗಳೆಂದು ನಂಬಿರುವ ಎಲ್ಲಾ ಪುರಾಣಗಳ ಕಥಾವಸ್ತುವು ಹೊನ್ನು, ಹೆಣ್ಣು ಮತ್ತು ಮಣ್ಣಿಗಾಗಿ ಮಡಿದವರ ಕುರಿತೇ ಇದೆ. ಶರಣರು ಹೊನ್ನು, ಹೆಣ್ಣು ಮತ್ತು ಮಣ್ಣನ್ನು ಮಾಯೆ ಎಂದು ಕರೆಯಲಿಲ್ಲ. ಈ ಮೂರೂ ವಸ್ತುಗಳು ಬೇಕೇಬೇಕು ಎನ್ನುವ ಮನುಷ್ಯನ ಮನಸ್ಸಿನ ಮುಂದಿರುವ ದುರಾಸೆಯೆ ಮಾಯೆ ಎನ್ನುತ್ತಾರೆ. ಅದನ್ನೆ ಬುದ್ದಗುರು ಶರಣರಿಗಿಂತ ಬಹು ಪೂರ್ವದಲ್ಲಿ ‘ಆಸೆಯೆ ದುಃಖಕ್ಕೆ ಮೂಲ’ ಎನ್ನುತ್ತಾರೆ. ಶರಣರು ಕಣ್ಣಿಗೆ ಕಾಣುವ ಜಗತ್ತನ್ನು ಸತ್ಯವೆನ್ನುತ್ತಾರೆ. ಮನುಷ್ಯನ ಬದುಕಿನ ನಂತರದ ಎಲ್ಲಾ ಕಲ್ಪನಾತ್ಮಕ, ಊಹಾತ್ಮಕ ಕಥಾನಕಗಳನ್ನು ಹಾಗೂ ನಾಟಕೀಯ ನಿರೂಪಣೆಗಳನ್ನು ಶರಣರು ಅಲ್ಲಗಳೆಯುತ್ತಾರೆ. ಅವರ ಮಾತುಕತೆ, ವಾದವಿವಾದ, ತರ್ಕ, ವಿವರಣೆ, ಚಿಂತನೆಗಳೆಲ್ಲವೂ ವರ್ತಮಾನದ ಬದುಕಿನ ಕುರಿತು ಮಾತ್ರ ಕೇಂದ್ರಿತವಾಗಿವೆ.

ಅದಕ್ಕೆಂದೇ ಬಸವಣ್ಣನವರು “ದೇವಲೋಕ, ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೊ…” ಎನ್ನುತ್ತಾರೆ. ಶರಣರ ವಾಸ್ತವಿಕ ಮತ್ತು ಪ್ರಾಯೋಗಿಕ ಚಿಂತನೆಗಳಿಗೂ ವೈದಿಕರ ಅವಾಸ್ತವಿಕ, ಅಪ್ರಯೋಜಕ ಹಾಗೂ ಅಪ್ರಾಯೋಗಿಕ ಚಿಂತನೆಗಳಿಗೂ ಅಜಗಜಾಂತರವಿದೆ. ಶರಣರು ಮನುಷ್ಯನ ಅಂತರಂಗದ ಶುದ್ಧಿಗೆ ಒತ್ತುಕೊಟ್ಟರೆ ವೈದಿಕ ಕರ್ಮಕಾಂಡಗಳು ಬಹಿರಂಗದ ಶುದ್ಧಿಯನ್ನು ಮಡಿ ಎಂದು ಆಚರಿಸುತ್ತಾ ಅಂತರಂಗ, ಬಹಿರಂಗ ಉಭಯದಲ್ಲಿ ಮೈಲಿಗೆಯಾಗಿದ್ದಾರೆ. ಜಗತ್ತಿನ ಎಲ್ಲಾ ಕೊಳಕನ್ನು ಮೈವೆತ್ತು ಕೂತಿರುವ ಜಾಗತಿಕ ರಕ್ಕಸರು ತಮ್ಮನ್ನು ತಾವು ಭೂಸುರರೆಂದು ಸ್ವಯಂ ಘೋಷಿಸಿಕೊಂಡಿದ್ದಾರೆ. ಇವರ ಧಾರ್ಮಿಕ ಸಿದ್ದಾಂತ ಹಾಗು ನಂಬಿಕೆಗಳು ಸಮಗ್ರವಾಗಿ ದೋಷಪೂರಿತವಾಗಿವೆ, ಪ್ರಶ್ನಾರ್ಹವಾಗಿದೆ. ಇವರು ಆರಂಭದಲ್ಲಿಯೇ ವೇದಗಳು ಅಪೌರುಷೇಯ, ದೋಷರಹಿತ ಹಾಗೂ ಪ್ರಶ್ನಾತೀತ ಎಂದು ಫರ್ಮಾನು ಹೊರಡಿಸಿದ ಕಾರಣ ಅವು ತಮ್ಮದಲ್ಲದ ಭಾರತದ ನೆಲದಲ್ಲಿ ಅತಿ ಹೆಚ್ಚು ವೇಳೆ ಕಟು ವಿಮರ್ಶೆಗೆ, ಟೀಕೆಗೆ ಹಾಗೂ ಪ್ರಶ್ನೆಗೆ ಒಳಗಾಗಿವೆ. ಈ ಜಗತ್ತಿನಲ್ಲಿ ಯಾವುದೂ ದೋಷರಹಿತವಾಗಲಿ, ಪ್ರಶ್ನಾತೀತವಾಗಲಿ ಇರುವುದಿಲ್ಲ, ಇಲ್ಲಿನ ಎಲ್ಲವೂ ಕಾಲಕಾಲಕ್ಕೆ ಅಗತ್ಯ ಬಿದ್ದಾಗ ಮರು ವಿಮರ್ಶೆಗೆ ಒಳಗಾಗಬೇಕು ಎನ್ನುವುದು ಬುದ್ದ ಮತ್ತು ಶರಣರ ಅಚಲ ವಾದವಾಗಿದೆ. ಆ ಕಾರಣದಿಂದ ಬುದ್ದ – ಶರಣರ ಚಿಂತನೆಗಳು ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ.

Advertisements

ಮನುಷ್ಯನನ್ನೂ ಒಳಗೊಂಡಂತೆ ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವರಾಶಿಗೆ ಅಂತ್ಯವಿದೆ. ಅದು ಸೃಷ್ಟಿಯ ನಿಯಮ ಕೂಡ. ಎಲ್ಲಾ ಜೀವರಾಶಿಗಳಲ್ಲಿ ಮನುಷ್ಯ ಅತ್ಯಂತ ಬುದ್ಧಿವಂತ ಪ್ರಾಣಿ ಎಂತಲು, ವಿಚಾರ ಮಾಡುವ ಸ್ವಂತಿಕೆ ಉಳ್ಳವನೆಂತಲು ಕರೆದುಕೊಳ್ಳುತ್ತಾನೆ. ತನ್ನ ಬದುಕಿಗೆ ಅನೇಕ ಕಟ್ಟುಪಾಡುಗಳನ್ನು ತಾನೇ ವಿಧಿಸಿಕೊಂಡಿದ್ದಾನೆ. ತನ್ನ ಸುಲಲಿತ, ಸುಖಮಯ ಬದುಕಿಗಾಗಿ ಅನೇಕ ಅವಿಷ್ಕಾರಗಳನ್ನು ಮಾಡಿದ್ದಾನೆ. ಆದರೆ, ಆ ಆವಿಷ್ಕಾರಗಳೆ ಅವನನ್ನು ಬೇರೆ ಬೇರೆ ರೀತಿಯಲ್ಲಿ ಕಾಡುತ್ತಿವೆ. ಆ ಕಾಡಾಟದಿಂದ ಮುಕ್ತಿ ಹೊಂದಲು ಮತ್ತೊಂದು ಅವಿಷ್ಕಾರದಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಅವನದಾಗಿದೆ. ಹೀಗೆ ಆತನ ಬದುಕು ಸರಳತೆಯಿಂದ ಬಹುದೂರ ಸಾಗಿ ಹೆಚ್ಚು ಹೆಚ್ಚು ಸಂಕೀರ್ಣಗೊಂಡಿದೆ. ಇಡೀ ಮನುಕುಲ ಹೊನ್ನು, ಹೆಣ್ಣು, ಹಾಗು ಮಣ್ಣಿನ ಆಸೆಯಿಂದ ತನ್ನ ಬದುಕಿನ ಮೂಲ ಉದ್ದೇಶಗಳಿಂದ ವಿಮುಖಗೊಂಡು ಭವದುಃಖಕ್ಕೆ ಈಡಾಗಿದೆ. ಮನುಷ್ಯನ ಬದುಕಿನ ಮೂಲ ಉದ್ದೇಶಗಳ ಈಡೇರಿಕೆಗಾಗಿ ಬಸವಾದಿ ಶರಣರು ಒಂದು ಬೃಹತ್ ಚಳವಳಿಯನ್ನೆ ಮಾಡಿದ್ದಾರೆ. ಶರಣರು ವೈದಿಕ ವೇದಾಂತಿಗಳಂತೆ ಈ ಲೌಕಿಕ ಬದುಕನ್ನು ತಿರಸ್ಕರಿಸಿದೆ ಅದನ್ನು ಸರಳತೆ ಹಾಗೂ ಸಾರ್ವಕಾಲಿಕ ಶಾಶ್ವತ ಮೌಲ್ಯಗಳ ನೆಲೆಯಲ್ಲಿ ರೂಪಿಸಿಕೊಳ್ಳುವ ಮಾರ್ಗೋಪಾಯಗಳನ್ನು ಶೋಧಿಸಿ ಕೊಟ್ಟಿದ್ದಾರೆ. ಅವರು ಹೊನ್ನು, ಹೆಣ್ಣು, ಮಣ್ಣನ್ನು ಅರ್ಥಪೂರ್ಣವಾಗಿ ಪ್ರೀತಿಸಿದ್ದಾರೆ. ನಿಸರ್ಗದತ್ತವಾದ ಎಲ್ಲವನ್ನು ಸ್ವೀಕರಿಸಿದ ಶರಣರು ಅದಕ್ಕೆ ವಿರುದ್ಧವಾದದ್ದನ್ನು ಖಡಾಖಂಡಿತವಾಗಿ ವಿರೋಧಿಸಿದ್ದಾರೆ.

ಮನುಷ್ಯನ ಬದುಕು ಸದಾ ಸಂಘರ್ಷದಿಂದ ಕೂಡಿರುತ್ತದೆ. ಆತ ಸದಾ ಸಂತೋಷದಿಂದ ಬದುಕಬೇಕನ್ನುವ ಉದ್ದೇಶದಿಂದ ಮನ್ನಡೆಯುತ್ತಾನೆ. ಆದರೆ ಆತನ ಪ್ರತಿಯೊಂದು ಹೆಜ್ಜೆ ಕ್ಷಣಿಕ ಸಂತೋಷ ಹಾಗೂ ಅಧಿಕ ದುಃಖ ನೀಡುತ್ತದೆ. ಭಾರತೀಯ ಸನಾತನ ಧರ್ಮದ ಕಾಲ್ಪನಿಕ ಕಥೆಗಳಾದ ರಾಮಾಯಣ, ಮಹಾಭಾರತ, ಉಳಿದೆಲ್ಲಾ ಪುರಾಣಗಳು ಒಂದಿಲ್ಲೊಂದು ರೀತಿಯಲ್ಲಿ ಹೊನ್ನು, ಹೆಣ್ಣು, ಮಣ್ಣಿಗಾಗಿ ಕಾದಾಡಿ ಮಡಿದ ಅತ್ಯಂತ ಸಾಮಾನ್ಯ ಮನುಷ್ಯರ ಬದುಕಿನ ಬವಣೆಯನ್ನು ಚಿತ್ರಿಸುತ್ತವೆ. ಆಶ್ಚರ್ಯವೆಂದರೆ ಈ ಕತೆಗಳನ್ನು ಪುಣ್ಯಕಥೆಗಳೆಂದು, ಅಲ್ಲಿನ ಪಾತ್ರಗಳನ್ನು ದೇವರ ಅವತಾರಿಗಳೆಂದು ಬಿಂಬಿಸಿರುವುದು. ಅದಕ್ಕೆಂದೆ ಅನುಭಾವಿಕ ಕವಿ ಸರ್ವಜ್ಞ, “ಹಾದರದ ಕತೆಯನ್ನು ಸೋದರರ ವಧೆಯನ್ನು ಆಧರಿಸಿ ಪುಣ್ಯಕತೆ ಎಂದು ಕೇಳುವವರು…” ಎನ್ನುತ್ತಾರೆ. ಮುಂದುವರೆದು ವೈದಿಕರು ದೇವರೆಂದು ಆರಾಧಿಸುವ ವಿಷ್ಣುವನ್ನು “ಹತ್ತು ಭುವನಗಳು ಎತ್ತಿ, ಎತ್ತು ಎಮ್ಮೆಗಳ ಕಾಯ್ದು, ಮತ್ತೆ ಪಾಂಡವರಿಗಾಳಾದ ಶ್ರೀಹರಿ ತಾನೆತ್ತಣದ ದೇವ ಸರ್ವಜ್ಞ” ಎಂದು ವಿಷ್ಣುವಿನ ದೈವತ್ವವನ್ನು ನೇರವಾಗಿ ಅಲ್ಲಗಳೆಯುತ್ತಾರೆ. ಹೀಗೆ ದೈವತ್ವಕ್ಕೇರಿಸಲ್ಪಟ್ಟ ಪುರಾಣದ ಸಾಮಾನ್ಯ ಕಾಲ್ಪನಿಕ ವ್ಯಕ್ತಿಗಳು ಹೊನ್ನು, ಹೆಣ್ಣು, ಮಣ್ಣಿಗಾಗಿ ಸತ್ತಿರುವುದು ಜನರು ಅರ್ಥಮಾಡಿಕೊಳ್ಳಬೇಕು. ಈ ಪುರಾಣದ ವ್ಯಕ್ತಿಗಳ ಸಾವನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾವ ಬಗೆಯ ಸಾವು ಮನುಷ್ಯನಿಗೆ ಸೂಕ್ತ, ಆತ ಯಾವುದನ್ನು ತನ್ನ ಬದುಕಿನ ಆದ್ಯತೆಯಾಗಿಸಿಕೊಳ್ಳಬೇಕು ಎನ್ನುವುದನ್ನು ಶರಣ ವೀರಗಣಾಚಾರಿ ಮಡಿವಾಳ ಮಾಚಯ್ಯನವರು ತಮ್ಮ ಈ ವಚನದಲ್ಲಿ ಮಾರ್ಮಿಕವಾಗಿ ವಿವರಿಸಿದ್ದಾರೆ.

ಮಡಿವಾಳ ಮಾಚಯ್ಯ

“ಹೆಣ್ಣಿಗಾಗಿ ಸತ್ತಡೆ ಜನನ ಮರಣ
ಹೊನ್ನಿಗಾಗಿ ಸತ್ತಡೆ ಜನನ ಮರಣ
ಮಣ್ಣಿಗಾಗಿ ಸತ್ತಡೆ ಜನನ ಮರಣ
ಪರಧನ ಪರಸತಿಗಾಗಿ ಸತ್ತಡೆ ಜನನ ಮರಣ
ಶಿವಭಕ್ತನಾಗಿ ಏಕಲಿಂಗನಿಷ್ಠಾಸಂಪನ್ನನಾಗಿ,
ಶಿವಾಚಾರಕ್ಕಾಗಿ ಸತ್ತಡೆ ಮುಕ್ತಿಯೆoದ ಕಲಿದೇವಯ್ಯ”

ಭಾವಾರ್ಥ

ಹೊನ್ನು, ಹೆಣ್ಣು ಹಾಗೂ ಮಣ್ಣಿಗಾಗಿ ಸಾವಿಗೀಡಾದವರಿಗೆ ಪುನರಪಿ ಹುಟ್ಟು ಸಾವುಗಳು ನಿಶ್ಚಿತ. ಇಲ್ಲಿ ಹೊನ್ನು ಎಂದರೆ ಚಿನ್ನದ ಆಸೆ ಅಥವಾ ದುರಾಸೆಗೆ ಈಡಾಗಿ ಸಾವಿಗೆ ಈಡಾಗುವವರ ಕುರಿತು ಮಾಚಯ್ಯ ಶರಣ ಮಾತನಾಡುತ್ತಾರೆ. ಅದೇ ರೀತಿ ಹೆಣ್ಣು ಹಾಗು ಮಣ್ಣಿಗಾಗಿ ಸಾವಿಗೀಡಾಗುವವರು ಇರುತ್ತಾರೆ. ಮಣ್ಣು ಎಂದರೆ ಇಲ್ಲಿ ಭೂಮಿ/ಜಮೀನು ಎಂದು ಅರ್ಥಮಾಡಿಕೊಳ್ಳಬೇಕು. ಮುಂದುವರೆದು ಮಾಚಯ್ಯನವರು ಯಾರು ಅನ್ಯರ ಸಂಪತ್ತು,ಅನ್ಯರ ಪತ್ನಿಯ ಮೇಲೆ ಕಣ್ಣುಹಾಕಿ ಆ ಕಾರಣದಿಂದ ಮರಣಿಸುತ್ತಾರೊ ಅವರಿಗೂ ಪುನರ್ಜನ್ಮ ನಿಶ್ಚಿತ ಎನ್ನುತ್ತಾರೆ. ವಚನದ ಮುಂದುವರೆದ ಭಾಗದಲ್ಲಿ ಮಾಚಯ್ಯನವರು ಏಕದೇವೋಪಾಸನೆಯ ಪರವಾದ ಗಟ್ಟಿ ನಿಲುವು ಹಾಗು ಜಾತಿಭೇದಗಳ ನಿವಾರಣೆ ಈ ಎರಡು ಮಹತ್ವದ ಕಾರ್ಯಗಳಿಗಾಗಿ ಯಾರು ತಮ್ಮ ಪ್ರಾಣವನ್ನು ಅರ್ಪಿಸುವರೊ ಅವರಿಗೆ ನಿಶ್ಚಯವಾಗಿ ಹುಟ್ಟು, ಸಾವುಗಳು ಅಥವಾ ಪುನರ್ಜನ್ಮಗಳಿಲ್ಲ ಎನ್ನುವ ದೃಢವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಮಾಚಯ್ಯನವರ ವಚನವು ಮನುಷ್ಯನ ಸಾವು ಜಗತ್ತಿನ ಜನರ ಒಳಿತಿಗಾಗಿ ಸಂಭವಿಸಬೇಕು ಹೊರತು ಸ್ವಾರ್ಥ, ದುರಾಸೆಗಳ ಈಡೇರಿಕೆಗಾಗಿ ಅಥವಾ ವಾಮಮಾರ್ಗದಲ್ಲಿ ಹೊನ್ನು, ಹೆಣ್ಣು ಮತ್ತು ಮಣ್ಣಿನ ಮೇಲೆ ಅಧಿಕಾರ ಹೊಂದುವುದಕ್ಕಾಗಿ ಅಲ್ಲ ಎನ್ನುವ ಸಂದೇಶವನ್ನು ಸಾರುತ್ತದೆ. ‘ಶಿವಭಕ್ತನಾಗಿ ಏಕಲಿಂಗನಿಷ್ಠನಾಗಿರಬೇಕು’ ಎನ್ನುವ ವಚನದ ಸಾಲು ಬಹುದೇವೋಪಾಸನೆಯನ್ನು ನಿರಾಕರಿಸುತ್ತದೆ. ಶಿವಭಕ್ತ (ನಿರಾಕಾರ, ನಿರ್ಗುಣವುಳ್ಳ ಸೃಷ್ಟಿ ಚೈತನ್ಯ) ತನ್ನ ಬದುಕಿನಲ್ಲಿ ಒಮ್ಮೆ ಇಷ್ಟಲಿಂಗ ದೀಕ್ಷೆ ಪಡೆದ ನಂತರ ಆ ಲಿಂಗದ ಮೇಲೆ ಮಾತ್ರ ನಿಷ್ಠೆ ಹೊಂದಿರಬೇಕು. ಅಂದರೆ, ಇದು ಶಿವಭಕ್ತರಿಗೆ ಏಕದೇವೋಪಾಸನೆಯ ಕಟ್ಟಳೆಯನ್ನು ವಿಧಿಸುವ ರೀತಿ.

ಟಿಪ್ಪಣಿ

ಶರಣ ದರ್ಶನವು ಸ್ಪಷ್ಟವಾಗಿ ಪಾಪ, ಪುಣ್ಯ, ಸ್ವರ್ಗ, ನರಕ, ಪುನರ್ಜನ್ಮ, ಕರ್ಮಸಿದ್ಧಾಂತ ಮುಂತಾದ ವೈದಿಕ ಮೌಢ್ಯಗಳನ್ನು ನಂಬುವುದಿಲ್ಲ. ಮೇಲಿನ ವಚನ ಸಾಂಕೇತಿಕವಾಗಿ ಮನುಷ್ಯನ ಬದುಕಿನ ಮೌಲ್ಯಗಳನ್ನು ಆತನ ಸಾವು ಹೇಗಿರಬೇಕು ಎನ್ನುವ ಮುಖೇನ ವಿವರಿಸುತ್ತದೆ. ಶರಣ ಧರ್ಮದ ಅನುಯಾಯಿಗಳು ಬದುಕಿನಲ್ಲಿ ಪಂಚಾಚಾರಗಳಾದ ಲಿಂಗಾಚಾರ, ಸದಾಚಾರ, ಶಿವಾಚಾರ, ಭೃತ್ಯಾಚಾರ ಮತ್ತು ಗಣಾಚಾರಗಳನ್ನು ಸಾಂವಿಧಾನಿಕ ನಿಯಮಗಳಾಗಿ ವಿಧಿಸಿಕೊಂಡು ಆಚರಿಸುವುದು ಕಡ್ಡಾಯ. ಈ ವಚನದಲ್ಲಿ ಲಿಂಗಾಚಾರ ಮತ್ತು ನೇರವಾಗಿ ಶಿವಾಚಾರಗಳಿಗೆ ಮಹತ್ವವನ್ನು ನೀಡುವ ಮೂಲಕ ಪರೋಕ್ಷವಾಗಿ ಬದುಕಿನಲ್ಲಿ ಸದಾಚಾರಿ ಆಗಿರಬೇಕು ಎನ್ನುತ್ತದೆ. ‘ಶಿವಾಚಾರಕ್ಕಾಗಿ ಸತ್ತರೆ ಮುಕ್ತಿಯೆಂದ…’ ಎನ್ನುವ ವಚನದ ಸಾಲು ಶರಣ ಧರ್ಮದ ಜಾತ್ಯತೀತ ತತ್ವ ಅಥವಾ ಜಾತಿಭೇದದ ನಿರಾಕರಣೆಯನ್ನು ಒತ್ತಿ ಹೇಳುತ್ತದೆ. ಪಂಚಾಚಾರಗಳಲ್ಲಿ ಶಿವಾಚಾರದ ಅರ್ಥ ‘ಶಿವಭಕ್ತರಲ್ಲಿ ಜಾತಿಭೇದವನ್ನು’ ಮಾಡದಿರುವುದು. ಶಿವಾಚಾರದ ವ್ಯಾಖ್ಯಾನದಲ್ಲಿ ಕೇವಲ ಜಾತಿಭೇದ ಮಾಡಬಾರದು ಎನ್ನುವುದರ ಬದಲಿಗೆ ಶಿವಭಕ್ತರಲ್ಲಿ ಜಾತಿಭೇದ ಮಾಡಬಾರದು ಎಂದಿರಲು ಕಾರಣ ಶರಣ ಧರ್ಮವು ಅನೇಕ ಜಾತಿಗಳನ್ನು ತನ್ನೊಳಗೆ ಇಂಬುಗೊಂಡು ಹುಟ್ಟಿರುತ್ತದೆ. ಬೇರೆಬೇರೆ ಜಾತಿ, ಧರ್ಮಗಳಿಂದ ಲಿಂಗಧಾರಿ ಆದರೆಲ್ಲರ ಪೂರ್ವದ ಜಾತಿಗಳು ಕಡ್ಡಾಯವಾಗಿ ಅಳಿದು ಹೋಗಿ ಅವರೆಲ್ಲರೂ ಲಿಂಗಾಯತರು (ಶಿವಭಕ್ತರು) ಎಂದೆನಿಸಬೇಕು, ಜಾತಿಭೇದ ಅಳಿದು ಎಲ್ಲರಲ್ಲಿ ಏಕೋಭಾವ ಅಳವಡಬೇಕು.

ಇದನ್ನೂ ಓದಿ ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಇದನ್ನೇ ಬಸವಣ್ಣನವರು “ಆವ ಕುಲವಾದರೇನು ಲಿಂಗವಿದ್ದವನೆ ಕುಲಜನು, ಕುಲವನರಸುವರೆ ಶರಣರಲ್ಲಿ ಜಾತಿಸಂಕರನಾದ ಬಳಿಕ? ಒಕ್ಕುದ ಕೊಂಬೆನವರಲ್ಲಿ ಕೂಸ ಕೊಡುವೆ ಕೂಡಲಸಂಗಮದೇವಾ ನಂಬುವೆ ನಿಮ್ಮ ಶರಣರನು” ಎಂದಿದ್ದಾರೆ. “ಕಲವನರಸುವರೆ ಶರಣರಲ್ಲಿ ಜಾತಿ ಸಂಕರವಾದ ಬಳಿಕ…” ಎನ್ನುವ ಬಸವಣ್ಣನವರ ನುಡಿಯು ಲಿಂಗಾಯತವು ಅನೇಕ ಜಾತಿಗಳ ಸಂಗಮ ಎಂದು ಖಂಡಿತವಾಗಿ ಹೇಳುತ್ತದೆ. ‘ಜಾತಿ ಸಂಕರ’ ಎಂದರೆ ಅನೇಕ ಜಾತಿಗಳ ಮಿಶ್ರಣದಿಂದ ಹುಟ್ಟಿದ ಹೊಸ ಧರ್ಮ ಎನ್ನುವುದನ್ನು ಬಹಳ ಸ್ಪಷ್ಟವಾಗಿ ಇಲ್ಲಿ ಅರ್ಥೈಸಬೇಕಿದೆ. ಹಾಗಾಗಿ ಲಿಂಗಾಯತ ಧರ್ಮೀಯರಲ್ಲಿ ಬರುವ ಎಲ್ಲಾ ಉಪವರ್ಗಗಳ ನಡುವಿನ ಪೂರ್ವದ ಜಾತಿಭೇದಗಳು ಉಳಿಯಬಾರದು ಎನ್ನುವ ಸದುದ್ದೇಶದಿಂದ ಧರ್ಮಕ್ಕೆ ಸಾಂಸ್ಥಿಕ ಹಾಗೂ ಸೈದ್ಧಾಂತಿಕ ಸ್ವರೂಪವನ್ನು ಸಿದ್ಧಪಡಿಸುವಾಗ ಪಂಚಾಚಾರಗಳಲ್ಲಿ ಶಿವಾಚಾರವನ್ನು ರೂಪಿಸಿ ಅಲ್ಲಿ ಜಾತಿಭೇದವನ್ನು ಮಾಡಬಾರದು ಎನ್ನುವ ಕಟ್ಟಳೆಯನ್ನು ಹೇರಲಾಗಿದೆ. ಲಿಂಗಾಯತನೊಬ್ಬ ಹೊನ್ನು, ಹೆಣ್ಣು ಹಾಗೂ ಮಣ್ಣಿಗಾಗಿ ಮತ್ತು ಅನ್ಯರ ಹಣ ಹಾಗೂ ಅನ್ಯರ ಪತ್ನಿಯ ಸಲುವಾಗಿ ಆಸೆಪಟ್ಟು ಸಾವಿಗೀಡಾಗಬಾರದು. ಆತ ಏಕಲಿಂಗನಿಷ್ಠನಾಗಿ, ಬದುಕಿಡೀ ಶಿವಾಚಾರವನ್ನು ಆಚರಿಸಿದರೆ ಭವಚಕ್ರದಿಂದ ಮುಕ್ತಿ ಹೊಂದುತ್ತಾನೆ ಎನ್ನುವುದು ವಚನದ ಸ್ವಷ್ಟ ಸಂದೇಶವಾಗಿದೆ. ಭವಚಕ್ರದಿಂದ ಮುಕ್ತಿ ಎಂದರೆ ಅದು ಆತ್ಮೋನ್ನತಿ ಎಂದು ಅರ್ಥೈಸದೆ ಸಮಾಜೋನ್ನತಿಯ ಕೈಂಕರ್ಯವೆಂದು ಭಾವಿಸಬೇಕು. ಮೌಲ್ಯಯುತವಾಗಿ ಬದುಕಬೇಕು, ಹೊನ್ನು, ಹೆಣ್ಣು, ಮಣ್ಣು, ಪರಧನ, ಪರಸತಿಯರ ಆಸೆ ಬಿಡಬೇಕು ಮತ್ತು ಜಾತಿಭೇದ ಮಾಡಬಾರದು ಎನ್ನುವ ಜೀವನದ ನೈತಿಕ ಮೌಲ್ಯಗಳು ಈ ವಚನದಲ್ಲಿ ಪ್ರತಿಪಾದನೆಯಾಗಿವೆ.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಲಮನ ಅನನ್ಯ ಪದಪ್ರಯೋಗಗಳು | ಕಾಲುಗಳ ನುಂಗುವರು 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಕುದಿ ಕಡಲು | ಧರ್ಮಸ್ಥಳ ವಿವಾದದ ಸುತ್ತಮುತ್ತ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಸರ್ಕಾರವೂ ಕೈಕಟ್ಟಿ ಕುಳಿತು ಇಂಥ ವಿದ್ಯಮಾನಗಳನ್ನು ನೋಡಲಾಗುವುದಿಲ್ಲ....

ಜೋಳಿಗೆ | ʻಆಂದೋಲನʼದಲ್ಲಿ ನನ್ನ ತರಬೇತಿ- ಭಾಗ 1

ಪತ್ರಿಕೆಯ ಪೇಜ್ ಮೇಕಪ್ ಮಾಡುವುದರಲ್ಲಿ ರಾಜಶೇಖರ ಕೋಟಿಯವರದು ಬಹಳ ಅಂದಚಂದ, ಅಚ್ಚುಕಟ್ಟು....

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

Download Eedina App Android / iOS

X