ಅಂಬಾನಿಯ ವಂತಾರ ಮೃಗಾಲಯದ ಕಾರ್ಯಾಚರಣೆ ತನಿಖೆಗೆ ಎಸ್‌ಐಟಿ ರಚನೆ

Date:

Advertisements

ಕಳೆದ ಕೆಲವು ತಿಂಗಳುಗಳಿಂದ ಅಂಬಾನಿ ಅವರ ರಿಲಯನ್ಸ್‌ ಸಂಸ್ಥೆಗೆ ಸೇರಿದ, ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ನಡೆಸುತ್ತಿರುವ ವಂತಾರ ವನ್ಯಜೀವಿ ಸಂರಕ್ಷಣಾ ಕೇಂದ್ರ ಚರ್ಚೆಯಲ್ಲಿದೆ. ಇದೇ ವರ್ಷದ ಜನವರಿಯಲ್ಲಿ ಅರುಣಾಚಲ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದ 12 ಆನೆಗಳನ್ನು ವಂತಾರಗೆ ಕೇಂದ್ರ ಸರ್ಕಾರ ರವಾನಿಸಿತ್ತು. ಇತ್ತೀಚೆಗೆ, ಕೊಲ್ಲಾಪುರದ ನಂದನಿ ಮಠದ ಆನೆಯನ್ನೂ ವಂತಾರಗೆ ಸ್ಥಳಾಂತರಿಸಲಾಗಿತ್ತು. ಮಠದ ಆನೆಯನ್ನು ವಂತಾರಗೆ ಸ್ಥಳಾಂತರಿಸಿದ್ದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ, ಆನೆಯನ್ನು ಮರಳಿ ಮಠಕ್ಕೆ ಕಳಿಸಲಾಗಿದೆ.

ಇಂತಹ ಹಲವು ಪ್ರಕರಣಗಳಿಂದಾಗಿ ವಂತಾರ ‘ವನ್ಯಜೀವಿ ಸಂರಕ್ಷಣಾ ಕೇಂದ್ರ’ ವಿವಾದಕ್ಕೆ ಸಿಲುಕಿಕೊಂಡಿದೆ. ವಂತಾರ ಮೃಗಾಲಯವು ಮೋದಿ ಅವರ ತವರು ರಾಜ್ಯ ಗುಜರಾತ್‌ನ ಜಾಮ್‌ನಗರದಲ್ಲಿದೆ. ಈ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಉದ್ಘಾಟಿಸಿದ್ದರು. ಮಾತ್ರವಲ್ಲದೆ, ಕೇಂದ್ರ ಸರ್ಕಾರದಿಂದ ನಿರಂತರ ನೆರವು ದೊರೆಯುತ್ತಿದೆ ಎಂದೂ ಹೇಳಲಾಗುತ್ತಿದೆ. ಇದೀಗ, ವಂತಾರ ಕೇಂದ್ರದ ಕಾರ್ಯಾಚರಣೆಯನ್ನು ಪರಿಶೀಲಿಸಿ, ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (SIT) ಸುಪ್ರೀಂ ಕೋರ್ಟ್‌ ರಚಿಸಿದೆ.

‘ಗ್ರೀನ್ಸ್ ಜೂ ರೆಸ್ಕ್ಯೂ ಆಂಡ್ ರಿಹ್ಯಾಬಿಲಿಟೇಶನ್ ಸೆಂಟರ್’ ಎಂದು ಅಧಿಕೃತವಾಗಿ ಕರೆಯಲ್ಪಡುವ ಈ ಕೇಂದ್ರವು ಹಲವಾರು ವಿವಾದಗಳ ಕೇಂದ್ರಬಿಂದುವಾಗಿದೆ. ಈ ಕೇಂದ್ರದಲ್ಲಿ ವಿದೇಶಿ ವನ್ಯಜೀವಿಗಳನ್ನು ತಂದಿರಿಸಲಾಗಿದೆ. ಇದು, ವಿಶ್ವಾದ್ಯಂತ ಅಕ್ರಮ ವನ್ಯಜೀವಿ ವ್ಯಾಪಾರವನ್ನು ಪ್ರೋತ್ಸಾಹಿಸಿದೆ ಎಂಬ ಆರೋಪಗಳು ಸೇರಿದಂತೆ ಹಲವು ಸಮಸ್ಯೆಗಳನ್ನು ಎತ್ತಿ ತೋರಿಸಿದೆ.

Advertisements

ಈ ಲೇಖನ ಓದಿದ್ದೀರಾ?: ಕೊಲ್ಲಾಪುರ ಮಠದ ಆನೆ ವಿವಾದ: ಆನೆಗಾಗಿ ‘ಜಿಯೋ ಬಾಯ್‌ಕಾಟ್’ ಮಾಡಿ ಗೆದ್ದ ಜನ!

ವಂತಾರದಲ್ಲಿ ಅಕ್ರಮ ವನ್ಯಜೀವಿ ವ್ಯಾಪಾರ ನಡೆದಿದೆ. ಕಾನೂನುಬಾಹಿರವಾಗಿ ಪ್ರಾಣಿಗಳ ಸಾಗಣೆ ನಡೆದಿದೆ ಎಂದು ಆರೋಪಿಸಿ ಆಗಸ್ಟ್‌ 14ರಂದು ಸುಪ್ರೀಂ ಕೋರ್ಟ್‌ನಲ್ಲಿ ಎರಡು ರಿಟ್‌ ಅರ್ಜಿಯನ್ನು ದಾಖಲಿಸಲಾಗಿತ್ತು. ಒಂದು ಅರ್ಜಿಯಲ್ಲಿ ಅರ್ಜಿದಾರ ದೇವ್ ಶರ್ಮಾ ಅವರು; 2020ರಿಂದ ವಂತಾರ ಮತ್ತು ಅದರ ಸಂಬಂಧಿತ ಸಂಸ್ಥೆಯಾದ ‘ರಾಧಾಕೃಷ್ಣ ಟೆಂಪಲ್ ಎಲಿಫೆಂಟ್ ವೆಲ್‌ಫೇರ್ ಟ್ರಸ್ಟ್‌’ ಮೂಲಕ ನಡೆದ ಎಲ್ಲ ವನ್ಯಜೀವಿ ಆಮದುಗಳು ಮತ್ತು ಸಂರಕ್ಷಣೆಗೆ ಸಂಬಂಧಿಸಿದ ಕಾರ್ಯಾಚರಣೆಗಳ ಬಗ್ಗೆ ತನಿಖೆ ನಡೆಸಬೇಕು. ಈ ಕೇಂದ್ರದಲ್ಲಿ ವಿವಿಧ ಖಂಡಗಳಿಂದ ನೂರಾರು ವಿದೇಶಿ ಜಾತಿಯ ಪ್ರಾಣಿಗಳನ್ನು ತಂದಿರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ CITES (ಅಂತಾರಾಷ್ಟ್ರೀಯ ವನ್ಯಜೀವಿ ಮತ್ತು ಸಸ್ಯ ವಿನಿಮಯ ಸಂಧಿ) ಅಡಿಯಲ್ಲಿ ಪರವಾನಗಿ ಪಡೆಯಲಾಗಿದೆ ಎಂಬುದನ್ನೂ ಪರಿಶೀಲಿಸಬೇಕು ಎಂದು ಕೋರಲಾಗಿತ್ತು.

ಮತ್ತೊಂದು ಅರ್ಜಿಯಲ್ಲಿ; ವಂತಾರದಲ್ಲಿ ಸೆರೆಯಾದ ಎಲ್ಲ ಆನೆಗಳನ್ನು ಅವುಗಳ ಮೂಲ ಮಾಲೀಕರಿಗೆ ಮರಳಿಸಲು ಹಾಗೂ ಎಲ್ಲ ಇತರ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಕಾಡಿಗೆ ಮರಳಿಸಲು ಮೇಲ್ವಿಚಾರಣಾ ಸಮಿತಿಯನ್ನು ರಚಿಸಬೇಕು ಎಂದು ಕೋರಿತ್ತು.

ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, ಆರೋಪಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ಮತ್ತು ತನಿಖೆಗಾಗಿ ಎಸ್‌ಐಟಿಯನ್ನು ರಚಿಸಿದೆ. ಆದಾಗ್ಯೂ, ತಮ್ಮಲ್ಲಿರುವ ಎಲ್ಲ ಪ್ರಾಣಿಗಳನ್ನು ಕಾನೂನುಬದ್ಧವಾಗಿ ಮಾನ್ಯ ಪ್ರಮಾಣಪತ್ರಗಳು ಮತ್ತು ದಾಖಲೆಗಳೊಂದಿಗೆ ತರಲಾಗಿದೆ ಎಂದು ವಂತಾರ ಪ್ರತಿಪಾದಿಸಿದೆ.

ವಂತಾರ ವಿರುದ್ಧದ ಆರೋಪಗಳು

ಆಗಸ್ಟ್ 25 ರಂದು, ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌: ”ಅರ್ಜಿಗಳು ಸಂಪೂರ್ಣವಾಗಿ ಸುದ್ದಿಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು, ಸರ್ಕಾರಿ ಸಂಸ್ಥೆಗಳು ಹಾಗೂ ವನ್ಯಜೀವಿ ಸಂಸ್ಥೆಗಳಿಂದ ಬಂದ ವಿವಿಧ ದೂರುಗಳ ಆಧಾರಗಳನ್ನು ಒಳಗೊಂಡಿವೆ. ಇವು ಭಾರತ ಮತ್ತು ವಿದೇಶಗಳಿಂದ ಪ್ರಾಣಿಗಳ ಅಕ್ರಮ ಸಂಗ್ರಹ, ಸೆರೆಯಲ್ಲಿರುವ ಪ್ರಾಣಿಗಳಿಗೆ ಕೆಟ್ಟ ಚಿಕಿತ್ಸೆ, ಆರ್ಥಿಕ ಅಕ್ರಮಗಳು ಹಾಗೂ ಕಪ್ಪುಹಣವನ್ನು ಕಾನೂನುಬದ್ಧ (ಬ್ಲಾಕ್‌ ಟು ವೈಟ್‌) ಮಾಡುವ ಆರೋಪಗಳನ್ನು ಒಳಗೊಂಡಿವೆ ಎಂದು ನ್ಯಾಯಾಲಯ ಆರೋಪಗಳು ಸೇರಿವೆ” ಎಂಬುದನ್ನು ಗಮನಿಸಿದೆ.

ಇದರ ಜೊತೆಗೆ, ಅರ್ಜಿಗಳು ಕೇಂದ್ರೀಯ ಮೃಗಾಲಯ ಪ್ರಾಧಿಕಾರ (CZA), CITES, ಹಾಗೂ ಕೋರ್ಟ್‌ಗಳಂತಹ ಕಾನೂನುಬದ್ಧ ಪ್ರಾಧಿಕಾರಗಳ ಮೇಲೂ ಆರೋಪಗಳನ್ನು ಮಾಡಿವೆ ಎಂದು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಪ್ರಸನ್ನ ಬಿ ವರಾಲೆ ಅವರಿದ್ದ ಪೀಠವು ತಿಳಿಸಿದೆ. ಆದರೆ, ಇವು ಕೇವಲ ‘ಆರೋಪಗಳು’ ಮಾತ್ರ. ಯಾವುದೇ ‘ಬೆಂಬಲಿತ ಸಾಕ್ಷ್ಯ’ಗಳನ್ನು ಒಳಗೊಂಡಿಲ್ಲ ಎಂದು ಕೋರ್ಟ್‌ ಹೇಳಿದೆ.

ಈ ಲೇಖನ ಓದಿದ್ದೀರಾ?: ಅಂಬಾನಿ ಒಡೆತನದ ವಂತಾರಾಗೆ 21 ಆನೆಗಳು ರವಾನೆ; ಪ್ರಾಣಿ ಹಕ್ಕು ಹೋರಾಟಗಾರರ ಆಕ್ರೋಶ

ಸಾಮಾನ್ಯ ಸಂದರ್ಭಗಳಲ್ಲಿ ಇಂತಹ ‘ಸಾಕ್ಷ್ಯಗಳ ಬೆಂಬಲವಿಲ್ಲದ ಆರೋಪ’ಗಳನ್ನು ಸ್ವೀಕರಿಸಲಾಗುವುದಿಲ್ಲ. ಆದರೆ, ಕಾನೂನಾತ್ಮಕ ಪ್ರಾಧಿಕಾರಗಳು ಅಥವಾ ಕೋರ್ಟ್‌ಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ನಿರ್ಲಕ್ಷಿಸಿರುವ ಮತ್ತು ಅಸಮರ್ಥವಾಗಿರುವ ಆರೋಪಗಳಿಂದಾಗಿ ವಾಸ್ತವಿಕ ಸ್ಥಿತಿಗಳನ್ನು ಸರಿಯಾಗಿ ಪರಿಶೀಲಿಸಬೇಕೆಂಬ ನ್ಯಾಯದ ದೃಷ್ಟಿಯಿಂದ ಸ್ವತಂತ್ರ ವಾಸ್ತವಿಕ ಮೌಲ್ಯಮಾಪನ ನಡೆಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ. ಒಂದು ವೇಳೆ, ಅರ್ಜಿಯಲ್ಲಿ ಆರೋಪಿಸಲಾದ ಉಲ್ಲಂಘನೆಗಳು ನಡೆಸಿದ್ದರೆ, ಪ್ರಕರಣವನ್ನು ದಾಖಲಿಸಬಹುದು ಎಂದು ಕೋರ್ಟ್‌ ಹೇಳಿದೆ.

ವಂತಾರ ಕುರಿತು ಸ್ವತಂತ್ರ ವಾಸ್ತವಿಕ ಪರಿಶೀಲನೆ ನಡೆಸಲು ಸುಪ್ರೀಂ ಕೋರ್ಟ್‌ ಎಸ್‌ಐಟಿ ರಚಿಸಿದೆ. ಸೆಪ್ಟೆಂಬರ್ 12ರಂದು ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚಿಸಿದೆ.

ಎಸ್‌ಐಟಿಗೆ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಅವರನ್ನು ಮುಖ್ಯಸ್ಥರಾಗಿ ನೇಮಿಸಲಾಗಿದೆ. ತಂಡವು ಉತ್ತರಾಖಂಡ ಮತ್ತು ತೆಲಂಗಾಣ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಚೌಹಾನ್, ಮಾಜಿ ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನಾಗ್ರಾಲೆ (IPS) ಹಾಗೂ ಅನಿಶ್ ಗುಪ್ತಾ (IRS, ಕಸ್ಟಮ್ಸ್‌ನ ಹೆಚ್ಚುವರಿ ಕಮಿಷನರ್) ಅವರನ್ನು ಒಳಗೊಂಡಿದೆ.

ಎಸ್‌ಐಟಿ ಮುಖ್ಯವಾಗಿ:

(a) ಭಾರತ ಮತ್ತು ವಿದೇಶಗಳಿಂದ ಪ್ರಾಣಿಗಳ (ವಿಶೇಷವಾಗಿ ಆನೆಗಳು) ಸಂಗ್ರಹದ ಬಗ್ಗೆ ಪರಿಶೀಲನೆ

(b) ವಂತಾರ ಕೇಂದ್ರವು ವನ್ಯಜೀವಿ (ಸಂರಕ್ಷಣೆ) ಕಾಯ್ದೆ-1972 ಮತ್ತು ಮೃಗಾಲಯಗಳಿಗೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸಿದೆಯೇ?

 (c) ಅಳಿವಿನಂಚಿನಲ್ಲಿರುವ ಪ್ರಭೇದಗಳ ವ್ಯಾಪಾರ (ಆಮದು/ರಫ್ತು) ಕುರಿತಾದ ಅಂತಾರಾಷ್ಟ್ರೀಯ ವನ್ಯಜೀವಿ ಮತ್ತು ಸಸ್ಯ ವಿನಿಮಯ ಕಾನ್ಫರೆನ್ಸ್‌ನ (CITES) ಕಾನೂನುಬದ್ಧ ಅವಶ್ಯಕತೆಗಳನ್ನು ಅನುಸರಿಸಿದೆಯೇ?

(d) ಪಶುಸಂಗೋಪನೆ, ಪಶುವೈದ್ಯಕೀಯ ಆರೈಕೆ, ಪ್ರಾಣಿಗಳ ಕಲ್ಯಾಣದ ಮಾನದಂಡಗಳು, ಮರಣಗಳು ಮತ್ತು ಅವುಗಳ ಕಾರಣಗಳನ್ನು ಪಾಲಿಸುತ್ತಿದೆಯೇ?

(e) ಹವಾಮಾನ ಪರಿಸ್ಥಿತಿಗಳ ಬಗ್ಗೆ ದೂರುಗಳು ಮತ್ತು ಕೈಗಾರಿಕಾ ವಲಯದ ಬಳಿಯ ಸ್ಥಳದ ಬಗೆಗಿನ ಆರೋಪಗಳ ವಸ್ತುನಿಷ್ಠತೆ

(f) ವೈಯಕ್ತಿಕ ಸಂಗ್ರಹ, ಸಂತಾನೋತ್ಪತ್ತಿ, ಸಂರಕ್ಷಣಾ ಕಾರ್ಯಕ್ರಮಗಳು ಮತ್ತು ಜೈವಿಕ ವೈವಿಧ್ಯ ಸಂಪನ್ಮೂಲಗಳ ಬಳಕೆಗೆ ಸಂಬಂಧಿಸಿದ ದೂರುಗಳ ಪರಿಶೀಲನೆ

(g) ಕಾನೂನಿನ ವಿವಿಧ ನಿಬಂಧನೆಗಳ ಉಲ್ಲಂಘನೆ, ಪ್ರಾಣಿಗಳ ವ್ಯಾಪಾರ, ವನ್ಯಜೀವಿ ಕಳ್ಳಸಾಗಾಣಿಕೆ ಇತ್ಯಾದಿ ಆರೋಪಗಳ ಪರಿಷ್ಕರಣೆ

 (h) ಕಪ್ಪು ಹಣವನ್ನು ಕಾನೂನುಬದ್ಧಗೊಳಿಸುವ (ಬ್ಲಾಕ್‌ ಟು ವೈಟ್) ಆರೋಪಗಳ ಪರಿಶೀಲನೆ

ಈ ಎಲ್ಲ ಪ್ರಮುಖ ಅಂಶಗಳ ಬಗ್ಗೆ ಎಸ್‌ಐಟಿ ತನಿಖೆ ನಡೆಸಲಿದೆ.

”ತನಿಖೆ ನಡೆಸಿ, ವರದಿ ಮಾಡುವಾಗ ಎಸ್‌ಐಟಿ ತಪ್ಪದೆ ಅರ್ಜಿದಾರರು, ಅಧಿಕಾರಿಗಳು, ನಿಯಂತ್ರಕರು, ಮಧ್ಯಸ್ಥಿಕೆದಾರರು ಅಥವಾ ತಮ್ಮ ಆರೋಪಗಳನ್ನು ಪರಿಶೀಲಿಸಲು ಬಯಸುವ ಪತ್ರಕರ್ತರನ್ನು ಒಳಗೊಂಡಂತೆ ಯಾವುದೇ ವ್ಯಕ್ತಿಯಿಂದ ಮಾಹಿತಿಯನ್ನು ಪಡೆಯಬಹುದು” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಕೇಂದ್ರೀಯ ಮೃಗಾಲಯ ಪ್ರಾಧಿಕಾರ, CITES ನಿರ್ವಹಣಾ ಪ್ರಾಧಿಕಾರ, ಕೇಂದ್ರ ಪರಿಸರ ಸಚಿವಾಲಯ, ಹಾಗೂ ಗುಜರಾತ್‌ನ ವನ್ಯಜೀವಿ ಮತ್ತು ಪೊಲೀಸ್ ಇಲಾಖೆಗಳಂತಹ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಇಲಾಖೆಗಳು ತನಿಖೆಯಲ್ಲಿ ಎಸ್‌ಐಟಿಗೆ ನೆರವು ನೀಡಬೇಕು ಎಂದು ಕೋರ್ಟ್‌ ಸೂಚಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿರ್ಲಕ್ಷ್ಯಕ್ಕೆ ಗುರಿಯಾಗಿ ದುಸ್ಥಿತಿಗೆ ಬಿದ್ದ ರಾಜ್ಯ ಹೆದ್ದಾರಿ; ಶಾಸಕರ ವಿರುದ್ಧ ಸಾರ್ವಜನಿಕರ ಆಕ್ರೋಶ

ಕಲಬುರಗಿ ಜಿಲ್ಲೆಯ ರಾಜ್ಯ ಹೆದ್ದಾರಿ 125, ಶಹಾಬಾದ್ ತಾಲೂಕಿನಿಂದ ಜೇವರ್ಗಿಯ ರಾಷ್ಟ್ರೀಯ...

VP-Polls | ಸುದರ್ಶನ್‌ ರೆಡ್ಡಿ ವಿರುದ್ಧದ ಅಮಿತ್‌ ಶಾ ಹೇಳಿಕೆ ಖಂಡಿಸಿದ ನಿವೃತ್ತ ನ್ಯಾಯಮೂರ್ತಿಗಳು

ಸಾಲ್ವಾ ಜುಡುಮ್‌ ತೀರ್ಪಿನ ಕುರಿತು ವಿರೋಧ ಪಕ್ಷದ ಉಪರಾಷ್ಟ್ರಪತಿ ಅಭ್ಯರ್ಥಿ ಬಿ....

ಪ್ರಧಾನಿಯ ಪದವಿ ವಿವರ ಬಹಿರಂಗಪಡಿಸುವ ಅಗತ್ಯವಿಲ್ಲ: ದೆಹಲಿ ಹೈಕೋರ್ಟ್ ತೀರ್ಪು

ದೆಹಲಿ ವಿಶ್ವವಿದ್ಯಾಲಯವು ಪ್ರಧಾನಿ ನರೇಂದ್ರ ಮೋದಿಯ ಪದವಿ ವಿವರಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ...

Download Eedina App Android / iOS

X