ದೇಶದ ಸ್ವಾತಂತ್ರ್ಯಕ್ಕೆ ಸಾಹಿತಿ, ಬರಹಗಾರರ ಕೊಡುಗೆ ಅನನ್ಯವಾಗಿದೆ. ಲೇಖನಿ ಖಡ್ಗಕ್ಕಿಂತ ಹರಿತವಾದದ್ದು, ಅದರಿಂದ ಮೂಡಿ ಬರುವ ಅಕ್ಷರಗಳು ಜನರಲ್ಲಿ ಜಾಗೃತಿ ಮೂಡಿಸುತ್ತವೆ ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ ಹಾವಗಿರಾವ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ ಸಹಯೋಗದಲ್ಲಿ ಬೀದರ್ ನಗರದ ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಮಹಾವಿದ್ಯಾಲಯ ಆಯೋಜಿಸಿದ್ದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಾಹಿತ್ಯದ ಪಾತ್ರ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಿದಂಬರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸ್ವಾತ್ಮಾನಂದ ಗಿರಿ ಸ್ವಾಮೀಜಿ ಮಾತನಾಡಿ, ʼಸಾಹಿತ್ಯ ಎಂಬ ಅರಮನೆಯಲ್ಲಿ ಮುತ್ತು ರತ್ನಗಳಿವೆ. ಅದರೊಳಗೆ ಹೋದವನಿಗೆ ಮಾತ್ರ ಸಾಹಿತ್ಯದ ರುಚಿ ಸಿಗುವುದು. ಶಬ್ದಗಳು ಭಾವನೆಗೆ ಸಮನಾಗಿರಬೇಕು. ಅಂದಾಗ ಮಾತ್ರ ಸಾಹಿತ್ಯದ ನೈಜತೆಯನ್ನು ಅರಿಯಬೇಕುʼ ಎಂದು ತಿಳಿಸಿದರು.
ಹಿರಿಯ ಸಾಹಿತಿ ಎಸ್.ಎಮ್.ಜನವಾಡಕರ್ ಅವರು ಮಾತನಾಡಿ, ʼಪರಕೀಯರ ದಾಸ್ಯದಿಂದ ಪಾರುಮಾಡಲು ಕಾವ್ಯ, ನಾಟಕ, ಕಾದಂಬರಿ ಸೇರಿದಂತೆ ದಾರ್ಶನಿಕರ ವಚನಗಳು, ಕೀರ್ತನೆಗಳು, ಕೃತಿಗಳು ಪ್ರೇರಣೆಯಾಗಿವೆ. ವಿದ್ಯಾರ್ಥಿಗಳು ಮೊಬೈಲ್ ತೊರೆದು ಪುಸ್ತಕ ಹಿಡಿದರೆ ಹೆಚ್ಚಿನ ಜ್ಞಾನ ಸಂಪಾದಿಸಲು ಸಾಧ್ಯʼ ಎಂದು ಹೇಳಿದರು.
ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ. ಮಕ್ತುಂಬಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ʼಗಡಿಭಾಗದಲ್ಲಿ ಅನ್ಯ ಭಾಷೆಗಳ ಮಧ್ಯೆ ಕನ್ನಡವನ್ನು ಎತ್ತಿ ಹಿಡಿಯಬೇಕಾಗಿದೆ. ಕನ್ನಡವು ನಮ್ಮ ತವರು ಭಾಷೆಯಾಗಿದ್ದು, ಬೇರೆ ಭಾಷೆಯ ಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಳ್ಳುಬೇಕಾಗಿದೆʼ ಎಂದು ಹೇಳಿದರು.
ಯುವ ಸಾಹಿತಿ ಡಾ.ಸಂಗಪ್ಪ ತೌಡಿ ಮಾತನಾಡಿ, ʼಸ್ವಾತಂತ್ರ ಚಳುವಳಿಗೆ ದ.ರಾ.ಬೇಂದ್ರೆ, ಡಿ.ಎಸ್.ಕರ್ಕಿ, ಹುಯಿಲಗೊಳ್ ನಾರಾಯಣಪ್ಪ ಮುಂತಾದ ಕನ್ನಡ ಸಾಹಿತಿಗಳ ಲೇಖನ, ಬರಹಗಳ ಕೊಡುಗೆ ಅಪಾರವಾಗಿದೆʼ ಎಂದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ ನಿರ್ದೇಶಕ ಪ್ರೊ.ಆರ್.ವಿ.ಗಂಗಶೆಟ್ಟಿ, ಕಾಲೇಜಿನ ಪ್ರಾಚಾರ್ಯರಾದ ನಾಗಪ್ಪ ಜಾನಕನೋರ ಮಾತನಾಡಿದರು.
ಇದನ್ನೂ ಓದಿ : ಬೀದರ್ | ಬಸವಲಿಂಗ ಪಟ್ಟದ್ದೇವರದ್ದು ಬಸವಮಯ ಬದುಕು : ನಿವೃತ್ತ ನ್ಯಾ. ಶಿವರಾಜ ಪಾಟೀಲ್
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನಟರಾಜ, ರಾಜಶೇಖರ, ನೆಹರು ಪವಾರ, ಬಸವರಾಜ ಬಿರಾದಾರ ಮಂಗಲ, ರಾಜಮ್ಮ ನೇಳಗೆ, ಅರ್ಚನಾ, ಸಪ್ನಾ, ವಿಜಯಲಕ್ಷ್ಮಿ ಹಾಗೂ ಸಿಬ್ಬಂದಿಗಳಾದ ಆಕಾಶ, ಶೋಭಾ ಮತ್ತಿತರರು ಇದ್ದರು. ಉಪನ್ಯಾಸಕಿ ರಾಖಿ ಕಾಡಗೆ ನಿರೂಪಿಸಿದರು. ಈಶ್ವರ ರೆಡ್ಡಿ ಸ್ವಾಗತಿಸಿದರು, ಶ್ರೀಲತಾ ವಂದಿಸಿದರು.