ಮೈಸೂರು ನಗರದ ಅಶೋಕ ರಸ್ತೆಯಲ್ಲಿರುವ ಮೀಲಾದ್ ಪಾರ್ಕ್ ವೃತ್ತದಲ್ಲಿ ‘ಸುನ್ನಿ ಯುವಜನ ಸಂಘ‘ದ ವತಿಯಿಂದ ಸೋಮವಾರ ಅಯೋಜಿಸಿದ್ದ ‘ಪ್ರವಾದಿ ಮುಹಮ್ಮದ್ ಪೈಗಂಬರ್‘ ಅವರ ಜನ್ಮ ದಿನಾಚರಣೆಯ ಅಂಗವಾಗಿ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಸಾಹೇಬ್, ಸರ್ ಖಾಜಿ ನೇತೃತ್ವದಲ್ಲಿ ಜಮಾಅತರ ಸಹಯೋಗದೊಂದಿಗೆ ಮೀಲಾದ ಘೋಷಣಾ ಜಾಥಾ ನಡೆಯಿತು.
ಮಸ್ಜಿದ್ ಅಜಮ್ ಮರ್ಕಾಜ್ ಅಹಲೆ, ಸುನ್ನತ್-ವಲ್ ಜಮಾತ್ ಮಸೀದಿಯಿಂದ ಹೊರಟ ಮೀಲಾದ್ ಮೆರವಣಿಗೆ ಅಶೋಕ ರಸ್ತೆ, ಫೌಂಟೇನ್ ಸರ್ಕಲ್, ಹಜರತ್ ಟಿಪ್ಪು ಸುಲ್ತಾನ್ ಸರ್ಕಲ್ ಮೂಲಕ ಹಾದು ಹೋಗಿ ಮೈಸೂರು ಬೆಂಗಳೂರು ಹೆದ್ದಾರಿಯ ಮಿಲೇನಿಯಂ ಸರ್ಕಲ್ ನಲ್ಲಿ ಸಮಾಪ್ತಿಗೊಂಡಿತು.
ಮಸೀದಿಗಳಲ್ಲಿ ನಡೆದ ಸಭಾ ಕಾರ್ಯಕ್ರಮಗಳಿಗೆ ಪ್ರವಾದಿ ಜೀವನದ ಸಂದೇಶ ನೀಡಲಾಯಿತು. ನಗರದ ಬಂದರ್‌ನಲ್ಲಿ ಹಲವು ಮಕ್ಕಳಿಂದ ಬೃಹತ್ ಮೀಲಾದ್ ರ‍್ಯಾಲಿಯು ಸಾರ್ವಜನಿಕರ ಗಮನ ಸೆಳೆಯಿತು.

ಜಾಥಾದಲ್ಲಿ ದಪ್ಫು ಪ್ರದರ್ಶನ ಸಹಿತ ಇಸ್ಲಾಮಿಕ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆ ಮಕ್ಕಳಿಗೆ ಸಿಹಿ ತಿಂಡಿ ಹಂಚಿ ಪಾನೀಯ ನೀಡಲಾಯಿತು. ಮೀಲಾದ್ ರ‍್ಯಾಲಿಯಲ್ಲಿ ಮಕ್ಕಳಲ್ಲದೆ, ಹಿರಿಯರೂ ಪಾಲ್ಗೊಂಡು ಮಿಲಾದುನ್ನಬಿಯ ಸಡಗರ, ಸಂಭ್ರಮಕ್ಕೆ ಸಾಕ್ಷಿಯಾದರು.
ಬೆಂಗಳೂರಿನ ಎಸ್.ವೈ.ಎಸ್. ರಾಜ್ಯ ಸಮಿತಿ ಅಧ್ಯಕ್ಷ ಬಷೀರ್ ಸಾದಿ ಸಾಹೇಬ್ ಮಾತನಾಡಿ “ಮುಹಮ್ಮದ್ ಪೈಗಂಬರ್ ಅವರ ಸಿದ್ಧಾಂತ ಕೇವಲ ಆಧ್ಯಾತ್ಮ ಸಿದ್ಧಾಂತವಾಗಿರಲಿಲ್ಲ. ಮಸೀದಿ, ಮದ್ರಸ, ಧಾರ್ಮಿಕ ಆಚಾರ ವಿಚಾರಗಳನ್ನು ಪಸರಿಸುವ ಸಿದ್ಧಾಂತವಾಗಿದ್ದು, ಮಾನವರು ಎದುರಿಸುವ ಎಲ್ಲ ಸಮಸ್ಯೆಗಳಿಗೆ ಸಮರ್ಪಕವಾಗಿ ನೆರವು ನೀಡುವುದು ಅವರ ಸಿದ್ದಾಂತವಾಗಿತ್ತು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮನುವಾದಿಗಳ ವಿಷ ತಲೆಗೇರಿಸಿಕೊಂಡ ಬಿಜೆಪಿಗರು; ಮುಸ್ಲಿಮರ ಕಂಡರೆ ದ್ವೇಷಕಾರುವುದನ್ನು ಬಿಡಿ : ಸಚಿವ ಮಹದೇವಪ್ಪ
ಕಾರ್ಯಕ್ರಮದಲ್ಲಿ ಸುನ್ನಿ ಯುವಜನ ಸಂಘದ ರಾಜ್ಯಾಧ್ಯಕ್ಷ ಬಷೀರ್ ಶಾದಿ, ಮೌಲಾನ ಅಬುಸಲಾಂ ರಜ್ವಿ, ರಾಜ್ಯ ಕಾರ್ಯದರ್ಶಿ ಸಯ್ಯದ್ ಇಲಿಯಾಸ್ ತಂಗಳ್ ಎಮ್ಮೆಮಾಡು, ಕ್ಯಾಬಿನೆಟ್ ಕಾರ್ಯದರ್ಶಿ ಸಯ್ಯದ್ ಹಮೀಮ್ ಶಿಹಾಬ್ ಬಾಳೆಹೊನ್ನೂರು, ರಾಜ್ಯ ಸಮಿತಿ ಸದಸ್ಯ ಸಯ್ಯದ್ ಶಾಫಿ ನಯೀಮಿ ಮಾರನಳ್ಳಿ, ಮೈಸೂರು ವಖ್ಫ್ ಅಧ್ಯಕ್ಷ ಆಜೀಜುಲ್ಲಾ ಅಜ್ಜು, ಮೌಲಾನ
ಉಸ್ಮಾನ್ ಖಾಜಿ ಸೇರಿದಂತೆ ಇನ್ನಿತರರು ಇದ್ದರು.