ವಿಧಾನಸಭೆ ಅಧಿವೇಶನದಲ್ಲಿಯೇ ‘ನಮಸ್ತೆ ಸದಾ ವತ್ಸಲೇ ಮಾತೃಭೂಮಿ’ ಎಂದು ಆರ್‌ಎಸ್‌ಎಸ್ ಗೀತೆ ಹಾಡಿ ವಿವಾದ ಸೃಷ್ಟಿಸಿದ್ದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕೊನೆಗೂ ಕ್ಷಮೆಯಾಚಿಸಿದ್ದಾರೆ.
ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿರುವುದು ಕಾಂಗ್ರೆಸ್ ಸೇರಿದಂತೆ ಒಟ್ಟಾರೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಡಿಕೆಶಿ ಮೃದು ಹಿಂದುತ್ವ ಹೊಂದಿದ್ದು, ಈಗ ರಾಜಕೀಯ ಲಾಭಕ್ಕಾಗಿ ಸಾರ್ವಜನಿಕವಾಗಿ ಮೃದು ಹಿಂದುತ್ವ ಪ್ರದರ್ಶನ ಮಾಡಿದ್ದಾರೆ ಎಂದು ಟೀಕಿಸಲಾಗಿತ್ತು.
ಇದನ್ನು ಓದಿದ್ದೀರಾ? ಡಿ ಕೆ ಶಿವಕುಮಾರ್ ಬಳಿಕ ಕಾಂಗ್ರೆಸ್ ಶಾಸಕ ರಂಗನಾಥ್‌ರಿಂದ ಆರ್‌ಎಸ್‌ಎಸ್ ಗೀತೆ ಗುಣಗಾನ!
ಡಿ ಕೆ ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿದ್ದರೆ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ನ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್, ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದರು. ಅಷ್ಟು ಮಾತ್ರವಲ್ಲದೆ ಡಿಕೆಶಿ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ರಂಗನಾಥ್ ಕೂಡಾ ಆರ್‌ಎಸ್‌ಎಸ್ ಗೀತೆ ಗುಣಗಾನ ಮಾಡಿದ್ದರು. “ಗೀತೆಯ ಅರ್ಥ ಡಿ ಕೆ ಶಿವಕುಮಾರ್ ಸಾಹೇಬ್ರು ಹಾಡಿದ ಮೇಲೆಯೇ ಓದಿ ತಿಳಿಯಿತು” ಎಂದೂ ಹೇಳಿಕೊಂಡಿದ್ದರು.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಮಂಗಳವಾರ ಬೆಳಗ್ಗೆ ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, “ಆರ್‌ಎಸ್‌ಎಸ್ ಗೀತೆ ವಿಚಾರದಲ್ಲಿ ನನ್ನಿಂದ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ. ಎಲ್ಲರ ಬಳಿಯೂ ಕ್ಷಮೆ ಕೇಳುತ್ತೇನೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಡಿ ಕೆ ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಬೇಕು: ಬಿ ಕೆ ಹರಿಪ್ರಸಾದ್ ಆಗ್ರಹ
ಹಾಗೆಯೇ, “ನಾನು ಯಾವುದೇ ತಪ್ಪು ಮಾಡಿಲ್ಲ. ಒಂದು ವೇಳೆ ತಪ್ಪು ಮಾಡಿದ್ದೇನೆ ಎಂದು ನೀವು ಭಾವಿಸಿದ್ದರೆ ಕ್ಷಮೆಯಿರಲಿ. ಎಲ್ಲ ಕಾಂಗ್ರೆಸ್ ನಾಯಕರ, ಕಾರ್ಯಕರ್ತರ, ಇಂಡಿಯಾ ಒಕ್ಕೂಟದ ನಾಯಕರ ಕ್ಷಮೆ ಕೇಳುತ್ತೇನೆ” ಎಂದಿದ್ದಾರೆ.
