ಸರ್ಕಾರದ ಪಾಲುಗಾರಿಕೆ ಇರುವ ಸಂಘಗಳಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿ ಹಾಗೂ ಒಬ್ಬ ಹಿಂದುಳಿದ ವರ್ಗದವರಿಗೂ ಸ್ಥಾನಮಾನ ನೀಡಿ ಎಂದು ಕಲಾಪದಲ್ಲಿ ವಿನಂತಿಸಿದ್ದೇನೆ ಹೊರತು ದಲಿತರನ್ನು ವಿರೋಧಿಸಿಲ್ಲ. ಆದರೂ ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ವಿಧಾನಸಭಾ ಕಲಾಪದಲ್ಲಿ ಜಿಟಿಡಿ ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆಂಬ ಕುರಿತು ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಮೈಸೂರಿನ ಜಲದರ್ಶಿನಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಸ್ಪಷ್ಟನೆ ನೀಡಿದರು.
“ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನಾನು ದಲಿತ ವಿರೋಧಿಯಲ್ಲ. ದಲಿತರ ಪರವಾಗಿ ಅನೇಕ ಕೆಲಸ ಮಾಡಿದ್ದೇನೆ. ಟೀಕಿಸುವವರು ನನ್ನ ಪಾಲಿನ ದೇವರು” ಎಂದರು.
“ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಹಲವರು ಟೀಕೆಗಾಗಿ ಕೆಟ್ಟ ಪದಗಳನ್ನು ಬಳಸಿ ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ. ರಾಜಕೀಯ ಜೀವನದಲ್ಲಿ ನನ್ನ ವಿರುದ್ಧ ಯಾವುದೇ ದೂರುಗಳು ದಾಖಲಾಗಿಲ್ಲ. ಈ ವಿಚಾರವಾಗಿ ದಾಖಲಾದರೂ, ನನ್ನ ವಿರುದ್ಧ ಕೆಟ್ಟದಾಗಿ ಮಾತನಾಡುವರ ವಿರುದ್ಧ ದೂರು ನೀಡುವುದಿಲ್ಲ. ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳಲಿ” ಎಂದು ಹೇಳಿದರು.
ಬಾನು ಮುಷ್ಕಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ಬಗ್ಗೆ ಪ್ರಶ್ನಿಸಿದಾಗ, “ಪ್ರತೀ ವರ್ಷವೂ ದಸರಾವನ್ನು ಸಾಹಿತಿ, ಮಠಾಧೀಶರು, ಹಿರಿಯರಿಂದ ಉದ್ಘಾಟಿಸಲಾಗುತ್ತದೆ. ಹಿಂದೆ ನಿಸಾರ್ ಅಹಮದ್ ಕೂಡ ಉದ್ಘಾಟಿಸಿದ್ದರು. ದಸರಾದ ಉನ್ನತ ಮಟ್ಟದ ಸಮಿತಿಯು ಮುಖ್ಯಮಂತ್ರಿಗಳು ಉದ್ಘಾಟಕರನ್ನು ಆಯ್ಕೆ ಮಾಡಲು ಅನುಮತಿ ನೀಡಿತ್ತು, ಅದಕ್ಕೆ ಸರಿಯಾಗಿ ಅವರು ಆಯ್ಕೆ ಮಾಡಿದ್ದಾರೆ. ಚಾಮುಂಡೇಶ್ವರಿ ಮೇಲೆ ನಂಬಿಕೆ ಇಲ್ಲದಿದ್ದರೆ ಉದ್ಘಾಟಕರು ಬರೋದೆ ಇಲ್ವಲ್ಲ” ಎಂದು ತಿಳಿಸಿದರು.