ಕರ್ನಾಟಕ ರಾಜ್ಯ ಲಾಟರಿ ರೆಗ್ಯೂಲೇಶನ್ ಆ್ಯಕ್ಟ್ 1998 ಮತ್ತು ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು(ಜಾರಿ) ಶಿರಸಿ ಮತ್ತು ಸಹಾಯಕ ನಿರ್ದೇಶಕರು, ಕಾರವಾರದ ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆಯವರನ್ನು ಒಳಗೊಂಡ ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ, ಅನಧಿಕೃತ ಲಾಟರಿ ಹಾಗೂ ಮಟ್ಕಾ ಹಾವಳಿ ನಿಯಂತ್ರಣ ಫ್ಲೈಯಿಂಗ್ ಸ್ಕ್ವಾಡ್ ಅಧ್ಯಕ್ಷ ಕೆ ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದು, “ಜಿಲ್ಲೆಯ ಸಾರ್ವಜನಿಕರು , ಅಭಿವೃದ್ಧಿ ಹೆಸರಿನಲ್ಲಿ, ಬಹುಮಾನ ಯೋಜನೆ ಹೆಸರಿನಲ್ಲಿ, ಹಬ್ಬ-ಉತ್ಸವ ಕಾರ್ಯಕ್ರಮದ ಹೆಸರಿನಲ್ಲಿ, ಲಾಟರಿ ಟಿಕೆಟ್‌ಗಳನ್ನು ಮುದ್ರಿಸುವುದು, ಮಾರಾಟ ಮಾಡುವುದು ಹಾಗೂ ಖರೀದಿಸುವುದು ಅಪರಾಧವಾಗಿದೆ. ಅಲ್ಲದೇ ಮಟ್ಕಾವನ್ನು ಅಡುವುದು ಮತ್ತು ಅಂತಾರಾಜ್ಯ ಲಾಟರಿ ಟಿಕೆಟ್‌ಗಳನ್ನು ಮಾರುವುದು, ಖರೀದಿಸುವುದು, ಮುದ್ರಿಸುವುದೂ ಕೂಡ ನಿಷೇಧವಿದ್ದು, ಇಂತಹ ಯಾವುದೇ ಅನಧಿಕೃತ ಲಾಟರಿ ಮುದ್ರಿಸಿ, ಮಾರಾಟ ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು” ಎಂದು ಕೋರಿದರು.
“ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗಬಾರದು, ಜಿಲ್ಲೆಯ ಎಲ್ಲ ಸಾರ್ವಜನಿಕರು, ಮುದ್ರಕರು, ಮಾರಾಟಗಾರರು, ಖರೀದಿದಾರರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಬಸವಾದಿ ಶರಣರ ಆಶಯದಂತೆ ಮಾತು ಕೃತಿ ಒಂದಾಗಬೇಕು: ಡಾ. ವೀರಣ್ಣ ರಾಜೂರ
“ಯಾವುದೇ ದಿನಪತ್ರಿಕೆ/ದೃಶ್ಯ ಮಾಧ್ಯಮದವರು ಇಂತಹ ‘ಅನಧಿಕೃತ ಲಾಟರಿ ಡ್ರಾ’ ಫಲಿತಾಂಶಗಳನ್ನು ಪ್ರಕಟಿಸಬಾರದು. ಒಂದು ವೇಳೆ ಪ್ರಕಟಿಸಿದಲ್ಲಿ ‘ಅನಧಿಕೃತ ಲಾಟರಿʼಗಳಿಗೆ ತಾವೂ ಕೂಡ ಸಹಕಾರ ನೀಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಹಾಗೂ ಇಂತಹ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಪೋಲೀಸ್ ಇಲಾಖೆಗೆ ಅಥವಾ ಸಂಬಂಧಿಸಿದವರಿಗೆ ತಕ್ಷಣ ದೂರು ನೀಡಬೇಕು” ಎಂದು ಸೂಚಿಸಿದರು.