ಬಿಹಾರದ ಪಾಟ್ನಾದಲ್ಲಿ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನೆಯಿಂದಾಗಿ ಜನರು ಆಕ್ರೋಶಗೊಂಡಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಟ್ನಾದ ಅಟಲ್ ಪಥ್ನಲ್ಲಿ ಆಕ್ರೋಶಿತ ಜನರು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದೇ ವೇಳೆ, ಅಟಲ್ ಪಥ್ನಲ್ಲಿ ತೆರಳುತ್ತಿದ್ದ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರ ಕಾರನ್ನೂ ಪ್ರತಿಭಟನಾಕಾರರು ಅಡ್ಡಹಗಟ್ಟಿದ್ದಾರೆ. ಪ್ರತಿಭಟನೆಗೆ ಹೆದರಿದ ಮಂಗಲ್ ಪಾಂಡೆ ಸ್ಥಳದಿಂದ ಕಾಲು ಕಿತ್ತಿದ್ದು, ಅವರ ಕಾರಿನ ಮೇಲೆ ಜನರು ಕಲ್ಲು ತೂರಿದ್ದಾರೆ ಎಂದು ವರದಿಯಾಗಿದೆ. ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆ ಮತ್ತು ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್, ಘಟನೆಗೆ ಸಂಬಂಧಿಸಿದಂತೆ ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಯಾದವ್, “ಕಳೆದ ಕೆಲವು ದಿನಗಳಲ್ಲಿ, ಬಿಹಾರದ ರಾಜಧಾನಿ ಪಾಟ್ನಾದಲ್ಲಿ 5-6 ಮಕ್ಕಳು ಹತ್ಯೆಗೀಡಾಗಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ನಾಶವಾಗಿದೆ. ಸರ್ಕಾರ-ಆಡಳಿತವು ವಿಚಾರಣೆ ನಡೆಸುವಲ್ಲಿ ಮತ್ತು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ನಿನ್ನೆಯಷ್ಟೇ, ಪಟೇಲ್ ನಗರದಲ್ಲಿ ಇಬ್ಬರು ಮಕ್ಕಳ ಹತ್ಯೆಯಾಗಿದ್ದು, ಆಕ್ರೋಶಗೊಂಡ ಜನರು ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಪಾಂಡೆ ಜೀ, ನೀವು ಎಷ್ಟು ಸೂಕ್ಷ್ಮವಲ್ಲದ, ದುರಹಂಕಾರಿ ಮತ್ತು ಗಣ್ಯ ಸಚಿವರೆಂದರೆ, ಸಂತ್ರಸ್ತ ಕುಟುಂಬಗಳೊಂದಿಗೆ ಮಾತನಾಡುವುದೂ ಅವಮಾನವೆಂದು ಭಾವಿಸಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
विगत चंद दिनों में राजधानी पटना में घर में घुसकर 5-6 बच्चों की दर्दनाक और खौफनाक हत्याएं हुई है।
— Tejashwi Yadav (@yadavtejashwi) August 26, 2025
ध्वस्त विधि व्यवस्था एवं शासन-प्रशासन से सुनवाई-कार्रवाई नहीं होने के कारण कल ही पटेल नगर में दो बच्चों की हत्या से आक्रोशित लोगों ने स्वास्थ्य मंत्री मंगल पांडे की गाड़ी पर हमला… pic.twitter.com/uRvJFPHGvA
ಪಾಟ್ನಾದ ಪಟಲಿಪುತ್ರ ಪ್ರದೇಶದಲ್ಲಿ ವಾಸಿಸುವ ಸಹೋದರ ಮತ್ತು ಸಹೋದರಿಯನ್ನು ಪೊಲೀಸರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಸೋಮವಾರ ಸಂಜಕೆ ಪ್ರತಿಭಟನೆಗಿಳಿದಿದ್ದರು. ಪ್ರತಿಭಟನಾನಿರತ ಜನರನ್ನು ತಡೆಯಲು ಪೊಲೀಸರು ಬಂದಾಗ, ಅವರ ಮೇಲೂ ದಾಳಿ ನಡೆದಿದೆ. ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.