ವಿಶಿಷ್ಟ ಆಚರಣೆ ಸಂಸ್ಕೃತಿಯಲ್ಲಿ ಬುಡಕಟ್ಟು ಎಂದು ಗುರುತಿಸಿಕೊಂಡ ಕಾಡು ಗೊಲ್ಲರು ಶೈವ, ವೈಷ್ಣವ ಆರಾಧಕರಲ್ಲ. ನಮ್ಮ ಸಂಸ್ಕೃತಿಯಲ್ಲಿ ವೀರ ಪರಂಪರೆಯ ಬುಡಕಟ್ಟು ದೇವರ ಪೂಜೆ ಮಾತ್ರ ಮಾಡುತ್ತೇವೆ. ಶ್ರೀ ಕೃಷ್ಣ ಜಯಂತಿಗೂ ನಮಗೂ ಸಂಬಂಧವಿಲ್ಲ ಎಂದು ಜಿಲ್ಲಾ ಕಾಡುಗೊಲ್ಲ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಬಿ.ದೊಡ್ಡಯ್ಯ ಸ್ಪಷ್ಟ ಪಡಿಸಿದರು.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಡುಗೊಲ್ಲ ಸಮಾಜ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಅಧ್ಯಯನ ನಡೆಸುವ ಸಂದರ್ಭದಲ್ಲಿ ಕಡಿಮೆ ಜನಸಂಖ್ಯೆಯ ನಮ್ಮನ್ನು ಹಿಂದೂ ದೇವರ ಆರಾಧಕರು ಎಂದು ಬಿಂಬಿಸಿ ಬುಡಕಟ್ಟು ಸವಲತ್ತು ವಂಚಿತರನ್ನಾಗಿ ಮಾಡಲು ದೊಡ್ಡ ಷಡ್ಯಂತ್ರ ಕೆಲವರು ನಡೆಸಿದ್ದಾರೆ ಎಂದು ನೇರ ಆರೋಪ ಮಾಡಿದರು.
ಕಾಡು ಗೊಲ್ಲ ಸಮಾಜದ ಜಿಲ್ಲಾ ಮುಖಂಡ ಡಿ.ಕೆ.ಗಂಗಾಧರ್ ಮಾತನಾಡಿ ಕೆಲವೊಂದು ಪ್ರದೇಶದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಕಾಡು ಗೊಲ್ಲ ಯುವಕರು ನಡೆಸುವಂತೆ ಪ್ರಚೋದನೆ ನಡೆದಿದೆ. ಶ್ರೀ ಕೃಷ್ಣ ಯಾದವ ಕ್ಷತ್ರಿಯ ಸಮಾಜ ಎಂಬುದು ಎಲ್ಲರಿಗೂ ತಿಳಿದಿದೆ. ಕಾಡು ಗೊಲ್ಲರಿಗೂ ಯಾದವ ಸಮಾಜಕ್ಕೂ ಯಾವ ಸಂಬಂಧವಿಲ್ಲ. ನಮ್ಮ ಆರಾಧನೆ ವೀರ ವ್ಯಕ್ತಿಗಳ ಪೂಜೆ ನಮ್ಮ ಸಂಪ್ರದಾಯ. ನಮ್ಮ ಜನಸಂಖ್ಯೆ ಕೇವಲ 8 ಲಕ್ಷ ಇದ್ದೇವೆ. ಆದರೆ ದೇಶದ ಯಾದವರ ಸಂಖ್ಯೆ 25 ಕೋಟಿಗೂ ಅಧಿಕವಿದೆ. ಕರ್ನಾಟಕದಲ್ಲಿ 12 ಜಿಲ್ಲೆ 40 ತಾಲ್ಲೂಕಿನಲ್ಲಿ ಮಾತ್ರ ನಾವಿದ್ದೇವೆ. ಆಂಧ್ರದಲ್ಲಿ 2 ಜಿಲ್ಲೆ 3 ತಾಲ್ಲೂಕಿನಲ್ಲಿ ಸ್ವಲ್ಪ ಜನ ಇದ್ದಾರೆ. ನಮ್ಮ ವಿಭಿನ್ನ ಸಂಸ್ಕೃತಿಯನ್ನು ಗುರುತಿಸಿ ಕೇಂದ್ರ ಎಸ್ಟಿಗೆ ಸೇರ್ಪಡೆ ಮಾಡಲು ಮುಂದಾಗುವ ವೇಳೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ನಮ್ಮಿಂದ ಮಾಡಿಸಿ ಹಿಂದೂ ದೇವರ ಆರಾಧಕರು ಎಂದು ಗುರುತಿಸಲಾಗುತ್ತಿದೆ. ಷಡ್ಯಂತ್ರ ನಡೆಸಿ ನಮ್ಮ ಹಕ್ಕು ಕಸಿಯಲು ನಡೆದ ಕುತಂತ್ರ ಬಯಲಿಗೆ ತರಬೇಕಿದೆ. ಈ ಹಿನ್ನಲೆ ಗುಬ್ಬಿಯಲ್ಲಿ ನಡೆಯುವ ಕೃಷ್ಣ ಜಯಂತಿ ಕಾರ್ಯಕ್ರಮಕ್ಕೆ ಕಾಡು ಗೊಲ್ಲ ಜನರು ಭಾಗವಹಿಸಬಾರದು ಎಂದು ಮನವಿ ಮಾಡಿದರು.
ಕಾಡು ಗೊಲ್ಲ ಮುಖಂಡ ಕಂಬೇರಹಟ್ಟಿ ನಾಗರಾಜು ಮಾತನಾಡಿ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಮುಂದಿನ ತಿಂಗಳು ಆಯೋಜನೆ ಮಾಡಿದ್ದಾರೆ. ಕಾಡು ಗೊಲ್ಲ ಜನಾಂಗಕ್ಕೂ ಈ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಶ್ರೀ ಕೃಷ್ಣ ಆರಾಧಕರಲ್ಲ. ಶಿವ ವಿಷ್ಣು ಗಣೇಶ ಪೂಜೆ ನಾವು ಮಾಡುವುದಿಲ್ಲ. ಯಾವುದೇ ಕಾಡು ಗೊಲ್ಲರ ಹಟ್ಟಿಯಲ್ಲಿ ಈ ದೇವರ ಯಾವ ದೇವಾಲಯಗಳು ಇಲ್ಲ. ನಮ್ಮದು ಯತ್ತೆಪ್ಪ, ಜುಂಜಪ್ಪ, ಚಿಕ್ಕಣ್ಣಸ್ವಾಮಿ ಹೀಗೆ ಹಿರಿಯರ ಆರಾಧನೆ ಮಾಡುತ್ತೇವೆ. ನಮ್ಮದು ಬುಡಕಟ್ಟು ಸಂಸ್ಕೃತಿ. ಈ ಹಿನ್ನಲೆ ಮುಂದಿನ ತಿಂಗಳು ನಡೆಯುವ ಜಾತಿ ಗಣತಿ ಸಿಬ್ಬಂದಿಗಳು ಬಂದಾಗ ಕಾಡು ಗೊಲ್ಲ ಎಂದೇ ನಮೂದಿಸಿ ಎಂದು ಕರೆ ನೀಡಿದರು.
ಕಾಡು ಗೊಲ್ಲ ಅಭಿವೃದ್ದಿ ಸಂಘದ ದೊಡ್ಡ ವೀರಯ್ಯ ಮಾತನಾಡಿ ಶೇಕಡಾ 67 ರಷ್ಟು ಶಿಕ್ಷಣ ವಂಚಿತ ಕಾಡು ಗೊಲ್ಲ ಸಮಾಜ ಸಂವಿಧಾನ ತತ್ವದಂತೆ ಸರ್ವರಿಗೂ ಸಮಪಾಲು ನಮಗೆ ಸಿಕ್ಕಿಲ್ಲ. ಈ ಹಿನ್ನಲೆ ಎಸ್ಟಿ ಪಟ್ಟಿಗೆ ಸೇರಿಸಲು ಒತ್ತಾಯ ಮಾಡುತ್ತಿರುವ ಈ ವೇಳೆ ಶ್ರೀ ಕೃಷ್ಣ ಜಯಂತಿ ಆಚರಣೆ ಕಾಡು ಗೊಲ್ಲರ ಮೂಲಕ ನಡೆಸಿ ನಮ್ಮನ್ನು ದಿಕ್ಕು ತಪ್ಪಿಸುವ ಕೆಲಸ ನಡೆದಿದೆ. ಕಾಡು ಗೊಲ್ಲರಿಗೂ ಶ್ರೀ ಕೃಷ್ಣನಿಗೂ ಯಾವುದೇ ಸಂಬಂಧವಿಲ್ಲ. ನಾಗರಿಕ ಸಮಾಜದಿಂದ ದೂರ ಉಳಿದ ನಾವುಗಳು ಸಾಮಾಜಿಕ ನ್ಯಾಯ ಎಂದಿಗೂ ಪಡೆದಿಲ್ಲ. ಈ ಸಮಯ ನಮ್ಮ ಹಕ್ಕು ಪಡೆಯಲು ಕಾಡು ಗೊಲ್ಲರು ಒಗ್ಗೂಡಿ ಮುಂದೆ ಸಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಡು ಗೊಲ್ಲ ಸಮಾಜದ ಮುಖಂಡರಾದ ಮಾರಶೆಟ್ಟಿ ಹಟ್ಟಿ ರತೀಶ್ ಹುಲ್ಮನೆ, ಮುದ್ಧಯ್ಯನಹಟ್ಟಿ ಶ್ರೀನಿವಾಸ್, ಬಿಳಿಕಲ್ ಹಟ್ಟಿ ಸದಾಶಿವ, ಭೂತಪ್ಪನಹಟ್ಟಿ ನಾಗರಾಜು, ರಂಗೇಗೌಡ, ಜಗದೀಶ್, ಲಕ್ಷ್ಮಣ್, ಈರಣ್ಣ, ಲೋಕೇಶ್, ಶಿವಣ್ಣ ಇತರರು ಇದ್ದರು.