ಟೀಕೆ ಮಾಡುವವರ ಬಗ್ಗೆ ನನಗೇ ಬೇಜಾರು ಇಲ್ಲ. ಅವರವರ ಯೋಗ್ಯತೆಗೆ ತಕ್ಕಂತೆ ಅವರು ಮಾತನಾಡುತ್ತಾರೆ. ಕೋಟ್ಯಂತರ ಕನ್ನಡಿಗರು ಎಷ್ಟೊಂದು ಪ್ರೀತಿ ಅಭಿಮಾನ ಕೊಡುತ್ತಿದ್ದಾರೆ. ಕೆಲವರ ನೆಗೆಟಿವಿಟಿಗೆ ಯಾಕೆ ಪ್ರತಿಕ್ರಿಯೆ ಕೊಡಬೇಕು ಎಂದು ಬಾನು ಮುಷ್ತಾಕ್ ಹೇಳಿದರು.
ದಸರಾ ಉದ್ಘಾಟನೆಗೆ ತಮ್ಮ ಹೆಸರು ಆಯ್ಕೆ ನಂತರ ಅಪಸ್ವರ ವ್ಯಕ್ತವಾಗಿರುವ ಬಗ್ಗೆ ಹಾಸನದಲ್ಲಿ ಮಂಗಳವಾರ ಮಾತನಾಡಿ, “ಬಿಜೆಪಿ ಪಕ್ಷದಲ್ಲಿ ಮೈಸೂರಿನ ಸಂಸದ ಯದುವೀರ್ ಅಂತಹವರ ಸಂತತಿ ಹೆಚ್ಚಾಗಲಿ ಎಂದು ಅಪೇಕ್ಷೆ ಪಡುತ್ತೇನೆ” ಎಂದರು.
“ಒಂದು ಸಮತೋಲನದಿಂದ ವಿಷಯ ಅನ್ವೇಷಣೆ ಮಾಡಿ ಆ ಬಗ್ಗೆ ದ್ವಂದ್ವ ಇಲ್ಲದೆ ಹೇಳಿಕೆ ನೀಡಬೇಕು. ಅಂತಹ ವಿದ್ಯಾವಂತ ಸುಸಂಸ್ಕೃತ ಮನಸುಗಳಿಗೆ ಮಾತ್ರ ಸಾಧ್ಯ” ಎಂದು ಹೇಳಿದರು.
ನಾಡಹಬ್ಬ ಮೈಸೂರು ದಸರಾಗೆ ದಿನಗಣನೆ ಶುರುವಾಗಿದೆ. ಮೈಸೂರಿನಲ್ಲಿ ದಸರಾಗೆ ಸಿದ್ಧತೆಗಳು ನಡೀತಿವೆ. ಈ ನುಡವೆ ರಾಜ್ಯ ರಾಜಕೀಯದಲ್ಲಿ ದಸರಾ ಉದ್ಘಾಟಕರ ಆಯ್ಕೆ ಭಾರೀ ಚರ್ಚೆಗೆ ನಾಂದಿ ಹಾಡಿದೆ. ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದಕ್ಕೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.