ಕಮಲನಗರ ಹಾಗೂ ಔರಾದ್ ತಾಲೂಕಿನಲ್ಲಿ ಅಧಿಕ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆಯ ವಿಕೋಪದಿಂದ ಮನೆ ಹಾನಿ, ಪ್ರಾಣಿ ಹಾನಿ, ಬೆಳೆ ಹಾನಿ, ಸೇತುವೆ ಮತ್ತು ಕೆರೆಕಟ್ಟೆಗಳು ಹಾನಿಗೀಡಾಗಿದ್ದು, ತ್ವರಿತವಾಗಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಸಚಿವದ್ವಯರ ನೇತ್ರತ್ವದಲ್ಲಿ ಮಂಗಳವಾರ ಬೆಳಿಗ್ಗೆ ಮೊದಲು ಕಮಲನಗರ ತಾಲೂಕಿನ ಅಕನಾಪೂರನ ಎಂಐ ಟ್ಯಾಂಕ್ ಕೆರೆ ವೀಕ್ಷಿಸಿ, ರೈತರ ಸಮಸ್ಯೆ ಆಲಿಸಿದರು. ಮುತಖೇಡನಲ್ಲಿ ಬೆಳೆ ಹಾನಿ, ನಂದಿ ಬೀಜಲಗಾಂವ ಸಮೀಪದ ಸೇತುವೆ ಮತ್ತು ಮನೆ ಹಾನಿ ವೀಕ್ಷಿಸಿದರು. ಬಳಿಕ ಔರಾದ ತಾಲೂಕಿನ ಬಾವಲಗಾಂವ, ಹಂಗರಗಾ, ಸಾವರಗಾಂವ, ಬೋಂತಿ ಗಾಮಾ ನಾಯಕ ತಾಂಡಾಗಳಲ್ಲಿ ಹಾನಿಯಾದ ಬೆಳೆ, ರಸ್ತೆ, ಮನೆ, ಸೇತುವೆ ಮುಂತಾದ ಕಡೆ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.
ʼಕಮಲನಗರ ಮತ್ತು ಔರಾದ ತಾಲೂಕಿನಲ್ಲಿ ಒಂದೇ ದಿನ 300 ಎಂಎಂ ಮಳೆಯಾಗಿದ್ದು, ಇದು ಅತ್ಯಂತ ದಾಖಲೆ ಪ್ರಮಾಣ ಮಳೆಯಾಗಿದೆ. ಇದರಿಂದಾಗಿ ಅನೇಕ ರೀತಿಯ ಜಾನುವಾರು, ಮನೆ ಸೇರಿದಂತೆ ರಸ್ತೆ, ಕೆರೆ, ಕಟ್ಟೆಗಳಿಗೆ ಹಾನಿಯಾಗಿದೆ. ಇವುಗಳನ್ನು ತಕ್ಷಣ ಪರಿಹರಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ʼಅತಿಯಾದ ಮಳೆಯಿಂದಾಗಿ ರೈತರ ಬೆಳೆಗಳಾದ ಹೆಸರು ಉದ್ದು, ಸೋಯಾ, ತೊಗರಿ ಹೆಚ್ಚು ಹಾನಿಯಾಗಿವೆ. ಆದರೆ ರೈತರು ಯಾವುದೇ ಆತಂಕ ಪಡಬೇಕಾಗಿಲ್ಲ, ತ್ವರಿತವಾಗಿ ಪರಿಹಾರ ನೀಡಲಾಗುವುದು. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಅಡಿಯಲ್ಲಿ ಪ್ರತಿ ಹೆಕ್ಟೇರ್ ನಿರಾವರಿ ಭೂಮಿಗೆ 18 ಸಾವಿರ ಹಾಗೂ ಮಳೆಯಾಶ್ರಿತ ಬೆಳೆ 8,500 ಪರಿಹಾರ ನೀಡಲಾಗುವುದು. ಸಮೀಕ್ಷೆಗೆ ಈಗಾಗಲೇ ಆದೇಶ ನೀಡಲಾಗಿದ್ದು, ಗ್ರಾಮ ಸಭೆ ಮೂಲಕ ಜನರ ಸಮಸ್ಯೆಗಳನ್ನು ಕ್ರೋಢೀಕರಿಸಿ ಪರಿಹರಿಸಲು ತಿಳಿಸಲಾಗಿದೆ. ಮುಖ್ಯಮಂತ್ರಿ ಅವರಿಗೂ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿಯ ಬಗ್ಗೆ ತಿಳಿಸಲಾಗಿದೆʼ ಎಂದರು.

ಔರಾದ್ ತಾಲೂಕಿನ ಬಾವಲಗಾಂವ ಗ್ರಾಮದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಚಿವರು ಮಕ್ಕಳೊಂದಿಗೆ ಸಂವಾದ ನಡೆಸಿ, ಶಾಲೆಯಲ್ಲಿ ಕನ್ನಡ ಕಲಿಕೆ ಹೆಚ್ಚಾಗಬೇಕು ಎಂದು ಮುಖ್ಯ ಶಿಕ್ಷಕರಿಗೆ ತಿಳಿಸಿದರು.
ಇದನ್ನೂ ಓದಿ : ಬೀದರ್ | ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ : ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ್ ಬದೋಲೆ, ಬೀದರ ಸಹಾಯಕ ಆಯುಕ್ತ ಮೊಹಮ್ಮದ್ ಶಕೀಲ್, ಕಮಲನಗರ ತಹಸೀಲ್ದಾರ್ ಅಮಿತ ಕುಲಕರ್ಣಿ, ಔರಾದ ತಹಸೀಲ್ದಾರ್ ಮಹೇಶ ಪಾಟೀಲ್, ಮುಖಂಡ ಭೀಮಸೇನರಾವ್ ಸಿಂಧೆ ಸೇರಿದಂತೆ ಕೃಷಿ, ತೋಟಗಾರಿಕೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.