ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳ 24 ಅಧಿಕಾರಿಗಳನ್ನು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾಗಿ ನೇಮಕ ಮಾಡಿದ್ದಾರೆಂದು ಚಿಕ್ಕಮಗಳೂರು ಎಸ್ಪಿ ವಿಕ್ರಮ ಅಮಟೆ ತಿಳಿಸಿದ್ದಾರೆ.
ಆಗಸ್ಟ್ 27 ರಿಂದ ಸೆಪ್ಟೆಂಬರ್ 28ವರೆಗೂ ನಿಗದಿಪಡಿಸಿರುವ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಎಲ್ಲಾ ಅಧಿಕಾರಗಳನ್ನು ತಮ್ಮ ಹುದ್ದೆಯ ವ್ಯಾಪ್ತಿಯಲ್ಲಿ ಅಧಿಕೃತರಾಗಿರುತ್ತಾರೆ. ಹಬ್ಬದ ದಿನಗಳಲ್ಲಿ ಶಾಂತಿ, ಭದ್ರತೆ ಹಾಗೂ ಸಾರ್ವಜನಿಕ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಎಸ್ಪಿ ವಿಕ್ರಂ ಅಮಟೆ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ವಿಧಾನ ಪರಿಷತ್‌ಗೆ ಡಾ.ಆರತಿ ಕೃಷ್ಣ ಅಂತಿಮ
ಎರಡು ಹಬ್ಬದ ಸಂದರ್ಭಗಳಲ್ಲಿ ಜಿಲ್ಲೆಗೆ ಬೇಕಾಗಿರುವ ಅಗತ್ಯ ಬಂದೋಬಸ್ತ್ ಮಾಡಿಕೊಳ್ಳಲಾಗಿದ್ದು, ಓರ್ವ ಹೆಚ್ಚುವರಿ ಪೊಲೀಸ್ ಅಧೀಕ್ಷಕ, ನಾಲ್ಕು ಡಿವೈಎಸ್ಪಿಗಳು, 13 ಇನ್‌ಸ್ಪೆಕ್ಟರ್‌ಗಳು, 65 ಪಿಎಸ್‌ಐ, ಒಂದು ಸಾವಿರ ಪೊಲೀಸ್ ಸಿಬ್ಬಂದಿಗಳು ಮತ್ತು ಡಿಎಆರ್ ಪೊಲೀಸರು, ಹಾಗೂ 4 ಕೆಎಸ್‌ಆರ್‌ಪಿ ತುಕುಡಿಗಳು ಮತ್ತು 350 ಹೋಂ ಗಾರ್ಡ್ ಸಿಬ್ಬಂದಿಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಎಸ್ಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.
