- ಭೂಮಿ, ನಿವೇಶನ, ವಸತಿ ನೀಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ
- ಭೂಮಿ, ವಸತಿ ವಂಚಿತರ ಈ ಹೋರಾಟ ಹೊಸದಾಗಿ ಆರಂಭವಾಗಿಲ್ಲ
ರಾಜ್ಯದಲ್ಲಿ ಬಡವರಿಗೆ ಭೂಮಿ ಹಂಚಲು ಸಾಕಷ್ಟು ಭೂಮಿ ಇದೆ. ಕೇವಲ ಒಂದು ವಾರದಲ್ಲಿ ಬಡವರ ಭೂಮಿ, ವಸತಿ ಸಮಸ್ಯೆಯನ್ನು ಪರಿಹರಿಸಬಹುದು. ಆದರೆ, ಕೆಲವು ಜನರು ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಬಡವರಿಗೆ ವಂಚಿಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಬೆಂಗಳೂರಿನಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಬಡವರ ‘ಬರಿಹೊಟ್ಟೆ ಸತ್ಯಾಗ್ರಹ’ವನ್ನು ಉದ್ಘಾಟಿಸಿ ಮಾತಾಡಿದ ಅವರು, “ಸಂಘ ಪರಿವಾರದವರು ಭೂಮಿಗಾಗಿ ಯಾವುದೇ ಅರ್ಜಿ ಹಾಕಿರಲಿಲ್ಲ. ಆದರೂ, ರಾಜ್ಯದ ಹಲವೆಡೆ ಅವರರಿಗೆ ಭೂಮಿ ನೀಡಲಾಗಿದೆ. ಆದರೆ, ಬಡವರು ಐದಾರು ದಶಕಗಳಿಂದ ಭೂಮಿ, ವಸತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೂ, ಬಡವರಿಗೆ ಭೂಮಿ ನೀಡಲಾಗಿಲ್ಲ. ವಾಸಿಸಲು ಸೂರು ನೀಡಿಲ್ಲ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಡವರಿಗೆ ಭೂಮಿ, ವಸತಿ ಸಿಗದೆ ಸ್ವಾತಂತ್ರ್ಯದ ಅರ್ಥ ಪೂರ್ಣವಾಗದು: ನೂರ್ ಶ್ರೀಧರ್
ಭೂಮಿ, ವಸತಿ ವಂಚಿತರ ಈ ಹೋರಾಟ ಹೊಸದಾಗಿ ಆರಂಭವಾಗಿಲ್ಲ. 10 ವರ್ಷಗಳ ಹಿಂದೆ ಈ ಹೋರಾಟ ಆರಂಭವಾಗಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರ ಭೂಮಿ, ವಸತಿ ಹಕ್ಕು ವಂಚಿತರಿಗೆ ಭೂಮಿ, ನಿವೇಶನ, ವಸತಿ ನೀಡುವುದಾಗಿ ಭರವಸೆ ನೀಡಿತ್ತು. ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ತಾನೇ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು” ಎಂದು ಒತ್ತಾಯಿಸಿದರು.