ಸಾಗುವಳಿ ಭೂಮಿ ಮತ್ತು ವಾಸಿಸುತ್ತಿರುವ ನಿವೇಶನಗಳ ಹಕ್ಕುಪತ್ರಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಕುಟುಂಬಗಳು ಒಂದು ಗಂಭೀರ ಯುದ್ಧಕ್ಕೆ ಸಿದ್ದರಾಗಬೇಕಾದ ಪರಿಸ್ಥಿತಿಯನ್ನು ಈ ಸರ್ಕಾರಗಳು ತಂದೊಡ್ಡಿವೆ ಎಂದು ರೈತ ಸಂಘದ ಮುಖಂಡ ಟಿ ಯಶವಂತ್ ಕಿಡಿಕಾರಿದರು.
ಬೆಂಗಳೂರಿನಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ನಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಬಡವರ ‘ಬರಿಹೊಟ್ಟೆ ಸತ್ಯಾಗ್ರಹ’ದಲ್ಲಿ ಅವರು ಮಾತನಾಡಿದರು. “ಸ್ವಾತಂತ್ರ್ಯ ಬಂದು 76 ವರ್ಷಗಳಾಗಿವೆ. ಆದರೂ, ರಾಜ್ಯದ ಬಹುತೇಕ ಬಡವರು, ದಲಿತರು, ಆದಿವಾಸಿಗಳು, ಅಲೆ ಮಾರಿಗಳು ಭೂ ವಂಚಿತರಾಗಿ, ವಸತಿ ವಂಚಿತರಾಗಿ ಬದುಕುತ್ತಿದ್ದಾರೆ. ಸರ್ಕಾರಗಳು ಜನ ವಿರೋಧಿ ನೀತಿಗಳನ್ನು ತಂದು ಜನರನ್ನು ಶೋಷಿಸುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸರ್ಕಾರಗಳು ಬಡವರಿಗೆ ಭೂಮಿ ಕೊಡಲು ಭೂಮಿ ಇಲ್ಲ ಎನ್ನುತ್ತಿವೆ. ಆದರೆ, ಕೈಗಾರಿಕೆಗಳಿಗೆ, ಪ್ಲಾಂಟರ್ಗಳಿಗೆ, ಉಳ್ಳವರರಿಗೆ, ಉದ್ಯಮಗಳಿಗೆ ಸಾವಿರಾರು ಎಕರೆ ಭೂಮಿಯನ್ನು ಕೊಟ್ಟಿದ್ದಾರೆ. ನಾವು ಬಂಡವಾಳಿಗರ ರೀತಿಯಲ್ಲಿ ನೂರಾರು ಎಕರೆ ಭೂಮಿ ಕೊಡಿ ಅಂತ ನಾವು ಕೇಳುತ್ತಿಲ್ಲ. ನಾವು ವಾಸಿಸುತ್ತಿರುವ, ಸಾಗುವಳಿ ಮಾಡುತ್ತಿರುವ ತುಂಡು ಭೂಮಿಗೆ ಹಕ್ಕುಪತ್ರ ಕೊಡಿ ಅಂತ ಕೇಳ್ತಿದ್ದೀವಿ. ಅದನ್ನೂ ಕೊಡಲು ಸರ್ಕಾರಗಳು ಹಿಂದೇಟು ಹಾಕುತ್ತಿವೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಒಂದೇ ವಾರದಲ್ಲಿ ಬಡವರ ಭೂಮಿ, ವಸತಿ ಸಮಸ್ಯೆ ಪರಿಹರಿಸಬಹುದು: ಬಡಗಲಪುರ ನಾಗೇಂದ್ರ
“ಕೈಗಾರಿಕೆಯ ಹೆಸರಿನಲ್ಲಿ ರೈತರ ಭೂಮಿಯನ್ನ ಸರ್ಕಾರಗಳು ಕಿತ್ತುಕೊಂಡಿವೆ. ಬೇಲಿ ಹಾಕಿಕೊಂಡಿವೆ. ರೈತರಿಂದ ಕಸಿದುಕೊಂಡ ಕೃಷಿ ಭೂಮಿ ಬರಡಾಗಿ ಪಾಳು ಬಿದ್ದಿದೆ. ಅಲ್ಲಿ ಯಾವ ಕೈಗಾರಿಕೆಗಳೂ ಬರಲಿಲ್ಲ. ಯಾವ ಬಡವರಿಗೂ ಉಪಯೋಗವಾಗಲಿಲ್ಲ. ಆದರೆ, ರೈತರ ಆ ಭೂಮಿಯನ್ನು ಕಾರ್ಪೊರೇಟ್ಗಳಿಗೆ ಕೊಟ್ಟು, ರೈತರನ್ನ ಬೀದಿ ಪಾಲು ಮಾಡಿದ್ದಾರೆ. ಈ ಹೋರಾಟ ಆಳುವವರಿಗೆ ಬಿಸಿ ಮುಟ್ಟಿಸಲಿದೆ” ಎಂದರು.