ರಾಷ್ಟ್ರೀಯ ಹೆದ್ದಾರಿ ಲಿಂಗಸೂಗೂರು ತಾಲ್ಲೂಕು ಗೋಲಪಲಿ ಗ್ರಾಮದ ಹೊರವಲಯದ ಸೇತುವೆ ಬಳಿ ಬೆಳಗಿನ ಜಾವ ಮೂರು ಲಾರಿ,ಬೈಕ್,ಮತ್ತು ಬೊಲೆರೋ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ.
ಮೂರು ದಿನಗಳ ಹಿಂದೆ ಪಲ್ಟಿಯಾದ ಲಾರಿಯ ಅವಶೇಷಗಳು ಇನ್ನೂ ರಸ್ತೆ ಬದಿಯಲ್ಲಿ ತೆರವುಗೊಳ್ಳದೆ ಇರುವ ಪರಿಣಾಮವಾಗಿ ಇಂದು ಬೆಳಿಗ್ಗೆ ರಸ್ತೆ ಇಕ್ಕಟ್ಟು ಉಂಟಾಯಿತು. ಈ ಸಂದರ್ಭದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ದಾರಿ ಕೊಡಲು ಬೊಲೆರೋ ವಾಹನ ನಿಂತಿತ್ತು. ಬೊಲೆರೋ ಹಿಂದೆ ಬೈಕ್ ನಿಂತಿದ್ದು, ಇದಕ್ಕೆ ಹಿಂಬದಿಯಿಂದ ವೇಗವಾಗಿ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ.
ರಸ್ತೆ ಇಕ್ಕಟ್ಟಿನಿಂದ ಪಾಸಾಗಲು ಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಬೊಲೆರೋ ಮತ್ತು ಬೈಕ್ ಮಧ್ಯೆ ಸಿಲುಕಿದ ಪರಿಣಾಮ ವಾಹನಗಳು ಹಾನಿಗೊಳಗಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಟ್ರಾಫಿಕ್ ನಿಯಂತ್ರಣೆ ನಡೆಸಿದ್ದಾರೆ. ಈ ಅವಘಡದಲ್ಲಿ ವಾಹನಗಳು ಭಾರೀ ಹಾನಿಗೊಳಗಾದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ ಎನ್ನಲಾಗಿದೆ.

ಸ್ಥಳೀಯ ನಿವಾಸಿ ಮಾತನಾಡಿ, ಬೀದರ್ – ಶ್ರೀರಂಗಪಟ್ಟಣ ಹೋಗುವ ರಾಷ್ಟ್ರೀಯ ಹೆದ್ದಾರಿಯ (150 ಎ) ಗೋಲಪ್ಪಲ್ಲಿ ಗ್ರಾಮದ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನವೂ ಸಣ್ಣ–ದೊಡ್ಡ ಅಪಘಾತಗಳು ಸಂಭವಿಸುತ್ತಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಸ್ತೆ ಅಗಲ ಕಡಿಮೆಯಿರುವುದರಿಂದ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಗೋಲಪ್ಪಲ್ಲಿ ರಸ್ತೆಯು ಹೆದ್ದಾರಿಗೆ ಮುಖ್ಯ ರಸ್ತೆಯಾಗಿದ್ದು ಜನರ ಸಂಚಾರಕ್ಕೂ ಪ್ರಮುಖವಾಗಿದ್ದು, ದಿನದಿಂದ ದಿನಕ್ಕೆ ವಾಹನ ಸಂಚಾರ ಜಾಸ್ತಿಯಾಗುತ್ತಿದೆ. ಆದರೆ, ರಸ್ತೆಯ ಅಗಲ ಕೇವಲ ಅಲ್ಪವಾಗಿರುವುದರಿಂದ ಎರಡೂ ಬದಿಯಿಂದ ಬರುವ ವಾಹನಗಳು ಡಿಕ್ಕಿಯಾಗುವ ಸಂದರ್ಭಗಳು ಹೆಚ್ಚಾಗಿವೆ. ಇದರಿಂದಾಗಿ ಕಳೆದ ಕೆಲವು ತಿಂಗಳಲ್ಲಿ ಹಲವು ಜೀವ ಹಾನಿ ಹಾಗೂ ಗಾಯಾಳು ಪ್ರಕರಣಗಳು ದಾಖಲಾಗಿವೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಪಹಣಿ ತಿದ್ದುಪಡಿ ವಿಳಂಬ : ರೈತರಿಂದ ಪ್ರತಿಭಟನೆ
ಅಪಘಾತ ಬಗ್ಗೆ ಎಸ್ ಡಿಪಿಐ ಮುಖಂಡ ಮೀರಅಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ಅಗಲೀಕರಣ ಸಾಧ್ಯ, ಆದರೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ನಮ್ಮ ಜೀವ ಭದ್ರತೆಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.

