ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದವರಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತತ್‌ಕ್ಷಣದ ಪರಿಹಾರವಾಗಿ ₹50 ಕೋಟಿ ಅನುದಾನ ನೀಡಿದ್ದಾರೆ. ಇನ್ನೂ ₹100 ಕೋಟಿ ಹೆೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಾಗಿದೆ ಎಂದು ಪೌರಾಡಳಿ ಸಚಿವ ರಹೀಂ ಖಾನ್ ಹೇಳಿದರು.
ಸಚಿವ ರಹೀಂ ಖಾನ್ ಅವರು ಭಾನುವಾರ ಬೀದರ ತಾಲ್ಲೂಕಿನ ಪ್ರವಾಡ ಪೀಡಿತ ಪ್ರದೇಶಗಳಾದ ಸಂಗನಳ್ಳಿ, ಇಸ್ಲಾಂಪೂರ, ಇಮಾಮ್‌ಬಾದ್ ಹಳ್ಳಿ, ಮಾಲೆಗಾಂವ್, ಕಪಲಾಪೂರ, ಅಲಮಸ್‌ಪುರ, ಜಾಂಪಡ, ಅಲ್ಲಾಪೂರ ಹಾಗೂ ನೇಮತಾಬಾದ ಗ್ರಾಮಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ, ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ʼಅಲಿಯಂಬರ ಗ್ರಾಮದಲ್ಲಿ ಹಾನಿಗೊಳಗಾದ ಸೇತುವೆ ದುರಸ್ತಿಗೆ ₹5 ಕೋಟಿ ಬಿಡುಗಡೆ ಮಾಡಲಾಗುವುದು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾನಿಗೊಳಗಾದ ರಸ್ತೆ ಸೇತುವೆ ದುರಸ್ತಿ ಕಾರ್ಯ ಶೀಘ್ರವೇ ಕೈಗೊಳ್ಳಲು ಸಚಿವರು ಸೂಚಿಸಿದರು.

ಕಳೆದ ಮೂರು ದಿನಗಳಿಂದ ಸತತವಾಗಿ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು ಸಪ್ಟೆಂಬರ್ 6 ರಿಂದ ಮತ್ತೆ ಮಳೆ ಪ್ರವಾಹ ಪರಿಶೀಲನಾ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.
ಭಾರಿ ಮಳೆಯಿಂದಾಗಿ ರೈತರ ಹೊಲಗಳಲ್ಲಿ ಬೆಳೆದಿದ್ದ ಹೆಸರು, ಉದ್ದು ಸೋಯಾಬೀನ್, ತೊಗರಿ ಹಾಗೂ ಇತರೆ ಬೆಳೆ ಸಂಪೂರ್ಣವಾಗಿ ನಾಶವಾಗಿವೆ. ಅನೇಕ ಕಡೆ ಮನೆಗಳು ಕುಸಿದಿವೆ. ಪ್ರತಿಯೊಂದು ವಿಪತ್ತು ಮತ್ತು ಹಾನಿಯ ವರದಿ ಮಾಡಲು ಮತ್ತು ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಲು ಜಂಟಿ ಇಲಾಖಾ ಸಮೀಕ್ಷೆ ವರದಿ ನೀಡಲು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಬೆಳೆ ಹಾನಿ ಮತ್ತು ಮನೆ ಹಾನಿಗೆ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಅಡಿಯಲ್ಲಿ ತಕ್ಷಣ ಪರಿಹಾರ ನೀಡಲಾಗುವುದುʼ ಎಂದು ಸಚಿವರು ಸ್ಥಳೀಯ ರೈತರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೀದರ ಸಹಾಯಕ ಆಯುಕ್ತ ಮೊಹಮದ್ ಶಕೀಲ್, ಬೀದರ ತಹಸಿಲ್ದಾರ್ ರವೀಂದ್ರ ಧಾಮಾ, ಕೃಷಿ ಇಲಾಖೆ ಉಪ ನಿರ್ದೇಶಕ ಇಕ್ಬಾಲ್ ಅನ್ಸಾರಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಸದ ಸಾಗರ ಖಂಡ್ರೆ ಭೇಟಿ :
ಬೀದರ್ ಲೋಕಸಭಾ ಸದಸ್ಯ ಸಾಗರ್ ಈಶ್ವರ ಖಂಡ್ರೆ ಅವರು ಭಾನುವಾರ ಭಾಲ್ಕಿ ತಾಲೂಕಿನ ವಿವಿಧ ಭಾಗಗಳಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿ, ಪರಿಶೀಲನೆ ನಡೆಸಿದರು.
ರೈತರ ಹೊಲಗಳಿಗೆ ಭೇಟಿ ನೀಡಿದ ಸಂಸದ ಸಾಗರ ಖಂಡ್ರೆ ಅವರು, ಜಮೀನಿನಲ್ಲಿ ನೀರು ನಿಂತಿರುವುದು ಮತ್ತು ಪ್ರಮುಖ ಬೆಳೆಗಳಿಗೆ ಉಂಟಾದ ನಷ್ಟ ಕುರಿತು ಪರಿಶೀಲಿಸಿ, ರೈತರಿಂದ ಮಾಹಿತಿ ಪಡೆದರು. ವಿಪರೀತ ಮಳೆಯಿಂದ ಉಂಟಾದ ಬೆಳೆ ಹಾನಿಯ ಬಗ್ಗೆ ತುರ್ತು ಸಮೀಕ್ಷೆ ನಡೆಸಿ, ರೈತರಿಗೆ ಬೆಳೆ ವಿಮೆ ಕಂಪನಿಗಳಿಂದ ಸೂಕ್ತ ಪರಿಹಾರ ದೊರಕಿಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮನೆಗಳಿಗೆ ಹಾನಿಯಾದ ಕುಟುಂಬಗಳಿಗೆ ತಕ್ಷಣದ ಪರಿಹಾರ ನಿಧಿ ನೀಡುವಂತೆ, ರಸ್ತೆಗಳು, ಸೇತುವೆಗಳು, ವಿದ್ಯುತ್ ಮತ್ತು ನೀರು ಸರಬರಾಜು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ತುರ್ತಾಗಿ ರ್ಪುನಃಸ್ಥಾಪನೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ʼಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಾವಿರಾರು ಎಕರೆಯಲ್ಲಿ ಬೆಳೆದು ನಿಂತಿದ್ದ ಸೋಯಾ, ತೊಗರಿ ಸೇರಿದಂತೆ ಹಲವು ಬೆಳೆಗಳು ನಾಶವಾಗಿದೆ. ನೂರಾರು ಮನೆಗಳು ಹಾನಿಗೊಳಗಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ ನೀರು ಪಾಲಾಗಿದೆ. ಕೆಲವು ಸಂಪರ್ಕ ಸೇತುವೆಗಳು ಕೊಚ್ಚಿಹೋಗಿದ್ದು, ರಸ್ತೆ ಸಂಪರ್ಕ, ವಿದ್ಯುತ್ ಮತ್ತು ನೀರು ಸರಬರಾಜು ಕಡಿತವಾಗಿದೆ. ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ₹1.94 ಕೋಟಿಗೂ ಅಧಿಕ ಮೌಲ್ಯದ ಗುಟ್ಕಾ, ಪಾನ್ ಮಸಾಲ ಜಪ್ತಿ; 8 ಆರೋಪಿಗಳ ಬಂಧನ
ಈ ಸಂದರ್ಭದಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಆಡಳಿತಾಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.